* ಅಪರೂಪದ ದಾಖಲೆಗಳಿಗೆ ಸಾಕ್ಷಿಯಾದ 2022ನೇ ಸಾಲಿನ ಐಪಿಎಲ್‌* ಸತತ 5 ಪಂದ್ಯಗಳಲ್ಲಿ 50+ ರನ್ ಅಂತರದ ಗೆಲುವು ಸಾಧಿಸಿದ ತಂಡಗಳು* 5 ಪಂದ್ಯಗಳ ಪೈಕಿ 3ರಲ್ಲಿ ಟಾಸ್‌ ಗೆದ್ದ ತಂಡಗಳು ಮೊದಲು ಫೀಲ್ಡ್‌ ಮಾಡಲು ನಿರ್ಧರಿಸಿದ್ದವು

ಮುಂಬೈ(ಮೇ.11): ಐಪಿಎಲ್‌ನಲ್ಲಿ (IPL 2022) ಇದೇ ಮೊದಲ ಬಾರಿಗೆ ಸತತ 5 ಪಂದ್ಯಗಳಲ್ಲಿ ತಂಡಗಳು 50ಕ್ಕಿಂತಲೂ ಹೆಚ್ಚು ರನ್‌ ಅಂತರದಲ್ಲಿ ಗೆಲುವು ಸಾಧಿಸಿವೆ. ಈ ಮೊದಲು ಐಪಿಎಲ್‌ನಲ್ಲಿ ಸತತ 2 ಪಂದ್ಯಗಳಿಗಿಂತ ಹೆಚ್ಚು ಈ ರೀತಿ ಆಗಿರಲಿಲ್ಲ. ಮಂಗಳವಾರ ಲಖನೌ ಸೂಪರ್‌ಜೈಂಟ್‌ ವಿರುದ್ಧ ಗುಜರಾತ್‌ ಟೈಟಾನ್ಸ್‌ 62 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಸತತ 5 ಪಂದ್ಯಗಳು ಏಕಪಕ್ಷೀಯವಾಗಿಯೇ ಸಾಗಿವೆ. ಇದೇ ಮೊದಲ ಬಾರಿಗೆ ತಂಡಗಳು ಸತತ 5 ಪಂದ್ಯಗಳಲ್ಲಿ 50+ ರನ್ ಅಂತರದ ಗೆಲುವು ಸಾಧಿಸಿವೆ. 

ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಕೋಲ್ಕತಾ ನೈಟ್‌ರೈಡ​ರ್ಸ್‌ 52 ರನ್‌, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) 91 ರನ್‌, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 67 ರನ್‌, ಕೋಲ್ಕತಾ ನೈಟ್‌ರೈಡರ್ಸ್‌ ವಿರುದ್ಧ ಲಖನೌ ಸೂಪರ್‌ ಜೈಂಟ್ಸ್‌ 75 ರನ್‌ಗಳಿಂದ ಗೆದ್ದಿದ್ದವು. 5 ಪಂದ್ಯಗಳ ಪೈಕಿ 3ರಲ್ಲಿ ಟಾಸ್‌ ಗೆದ್ದ ತಂಡಗಳು ಮೊದಲು ಫೀಲ್ಡ್‌ ಮಾಡಲು ನಿರ್ಧರಿಸಿದ್ದವು.

ತಂಡದ ಆಯ್ಕೆಯಲ್ಲಿ ಸಿಇಒ ಭಾಗಿ: ಶ್ರೇಯಸ್‌ ವಿವಾದ!

ಮುಂಬೈ: ಈ ಆವೃತ್ತಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ತಂಡ ಬದಲಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೆಕೆಆರ್‌ ನಾಯಕ ಶ್ರೇಯಸ್‌ ಅಯ್ಯರ್‌, ತಂಡದ ಆಯ್ಕೆ ಸುಲಭವಿಲ್ಲ. ಕೋಚ್‌ಗಳು ಮಾತ್ರವಲ್ಲದೇ ಸಿಇಒ ಸಹ ಭಾಗಿಯಾಗುತ್ತಾರೆ ಎಂದಿರುವುದು ವಿವಾದಕ್ಕೆ ಕಾರಣವಾಗಿದೆ. ಸೋಮವಾರ ಮುಂಬೈ ವಿರುದ್ಧದ ಪಂದ್ಯದ ಬಳಿಕ ಮಾತನಾಡುವ ವೇಳೆ ಶ್ರೇಯಸ್‌ ಸಿಇಒ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ‘ಆಟಗಾರರ ಆಯ್ಕೆಯಲ್ಲಿ ಕ್ರಿಕೆಟಿಗರಲ್ಲದ ಸಿಇಒ ಭಾಗಿಯಾಗಲು ಹೇಗೆ ಸಾಧ್ಯ?’, ‘ಸಿಇಒ ನಿರ್ಧರಿಸುವುದಾದರೆ ಮತ್ತೆ ನಾಯಕ ಏಕೆ?’ ಎಂದು ಹಲವರು ಪ್ರಶ್ನಿಸಿದ್ದಾರೆ.

IPL 2022: ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯುತ್ತಾ ಡೆಲ್ಲಿ ಕ್ಯಾಪಿಟಲ್ಸ್‌..?

ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಈ ಬಾರಿ ಪ್ಲೇ ಆಫ್‌ ಪ್ರವೇಶಿಸಲು ವಿಫಲವಾಗಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿತಾದರೂ, ಆ ಬಳಿಕ ಸತತ ಸೋಲುಗಳನ್ನು ಕಾಣುವ ಮೂಲಕ ನಿರಾಸೆ ಅನುಭವಿಸಿದೆ. ಸದ್ಯ ಕೆಕೆಆರ್ ತಂಡವು 12 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 7 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಜನಾಂಗೀಯ ನಿಂದನೆ ಕೇಸ್‌: ಬೌಷರ್‌ ಆರೋಪ ಮುಕ್ತ

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಮಾರ್ಕ್ ಬೌಷರ್‌ ವಿರುದ್ಧದ ಜನಾಂಗೀಯ ನಿಂದನೆ ಕೇಸ್‌ ವಜಾಗೊಂಡಿದೆ. ಇತ್ತೀಚೆಗೆ ಬೌಷರ್‌ ವಿರುದ್ಧ ಅವರ ಸಹ ಆಟಗಾರರಾಗಿದ್ದ ಪೌಲ್‌ ಆ್ಯಡಮ್ಸ್‌ ಜನಾಂಗೀಯ ನಿಂದನೆ ಆರೋಪ ಹೊರಿಸಿದ್ದ ಬಳಿಕ ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರ ನಿರ್ಮಾಣ(ಎಸ್‌ಜೆಎನ್‌) ಆಯೋಗ ಕ್ರಿಕೆಟ್‌ ದಕ್ಷಿಣ ಆಫ್ರಿಕಾ(ಸಿಎಸ್‌ಎ)ಕ್ಕೆ ವರದಿ ಸಲ್ಲಿಸಿತ್ತು. 

ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರ ನಿರ್ಮಾಣ(ಎಸ್‌ಜೆಎನ್‌) ಆಯೋಗ ಸಲ್ಲಿಸಿದ ವರದಿಯಲ್ಲಿ ಮಾರ್ಕ್‌ ಬೌಷರ್‌ ಜೊತೆ ಎಬಿ ಡಿ ವಿಲಿಯ​ರ್ಸ್, ಗ್ರೇಮ್‌ ಸ್ಮಿತ್‌ ವಿರುದ್ಧವೂ ಆರೋಪ ಹೊರಿಸಲಾಗಿತ್ತು. ಬಳಿಕ ಬೌಷರ್‌ ವಿರುದ್ಧ ತನಿಖೆ ಕೈಗೆತ್ತಿಕೊಂಡಿದ್ದ ಸಿಎಸ್‌ಎ ಅವರನ್ನು ದೋಷಮುಕ್ತಗೊಳಿಸಿದೆ. ಹೀಗಾಗಿ ಮುಂದಿನ ವಾರದ ವಿಚಾರಣೆಗೆ ಹಾಜರಾಗದಿರಲು ದೂರುದಾರ ಆ್ಯಡಮ್ಸ್‌ ನಿರ್ಧರಿಸಿದ್ದಾರೆ.