* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿ* ಸೌಥಾಂಪ್ಟನ್‌ನಲ್ಲಿಂದು ಟೆಸ್ಟ್ ವಿಶ್ವಕಪ್ ಆರಂಭ* ನ್ಯೂಜಿಲೆಂಡ್ ಮಣಿಸಲು ಕೊಹ್ಲಿ ಪಡೆ ರಣತಂತ್ರ

ಸೌಥಾಂಪ್ಟನ್‌(ಜೂ.18): ಬಹುನಿರೀಕ್ಷಿತ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿಂದು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. 

ಮೇಲ್ನೋಟಕ್ಕೆ ಎರಡು ತಂಡಗಳು ಬಲಿಷ್ಠವಾಗಿದ್ದು, ಗೆಲುವಿಗಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆಯಿದೆ. ಭಾರತ ತಂಡ ನ್ಯೂಜಿಲೆಂಡ್‌ನ ಆಟದ ಶೈಲಿಯನ್ನು ಅರ್ಥ ಮಾಡಿಕೊಂಡು, ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸಬೇಕಿದೆ. ಕೊಹ್ಲಿ ಪಡೆಗೆ ಈ ಕೆಳಗಿನ 5 ಅಂಶಗಳು ಮುಖ್ಯವೆನಿಸಲಿದೆ.

1. ಆಕ್ರಮಣಕಾರಿ ಆಟಕ್ಕಿಂತ ಶಿಸ್ತಿನ ಆಟಕ್ಕೆ ಕಿವೀಸ್‌ ಪ್ರಾಮುಖ್ಯತೆ

ಒಂದೊಂದು ತಂಡದ ಆಟದ ಶೈಲಿ ಒಂದೊಂದು ರೀತಿಯಲ್ಲಿ ಇರುತ್ತದೆ. ನ್ಯೂಜಿಲೆಂಡ್‌ ಶಿಸ್ತಿನ ಆಟಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ಬಹಳ ನಾಜೂಕಾಗಿ ಒಂದೊಂದೇ ಹೆಜ್ಜೆಯನ್ನು ಮುಂದಿಟ್ಟು ನ್ಯೂಜಿಲೆಂಡ್‌ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತದೆ. ಕಿವೀಸ್‌ ವಿರುದ್ಧ ಆಡುವಾಗ ಪಂದ್ಯದ ಪ್ರತಿ ಸೆಷನ್‌ ಕೂಡ ಮುಖ್ಯ.

2. ವೇಗಿಗಳನ್ನು ಕಾಡಿದರಷ್ಟೇ ಉಳಿಗಾಲ

ನ್ಯೂಜಿಲೆಂಡ್‌ ವೇಗಿಗಳು ಆಫ್‌ ಸೈಡ್‌ನಲ್ಲಿ ಹೆಚ್ಚು ಫೀಲ್ಡರ್‌ಗಳನ್ನು ನಿಲ್ಲಿಸಿಕೊಂಡು ಆಫ್‌ ಸ್ಟಂಪ್‌ನಿಂದ ಆಚೆಗೆ ಹೆಚ್ಚು ಎಸೆತಗಳನ್ನು ಬೌಲ್‌ ಮಾಡುತ್ತಾರೆ. 4-5ನೇ ಸ್ಟಂಪ್‌ನತ್ತ ಹೋಗುವ ಚೆಂಡನ್ನು ಆಡುವುದು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಅದರಲ್ಲೂ ಪ್ರಮುಖವಾಗಿ ಕೊಹ್ಲಿಯ ದೌರ್ಬಲ್ಯ. ಕಿವೀಸ್‌ನ ಈ ತಂತ್ರಗಾರಿಕೆಯನ್ನು ಮೆಟ್ಟಿ ನಿಂತರಷ್ಟೇ ಭಾರತಕ್ಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌: ಟೆಸ್ಟ್ ಕ್ರಿಕೆಟ್‌ಗೆ ಯಾರು ಬಾಸ್‌..?

3. ಹೆಚ್ಚು ಬೌನ್ಸರ್‌ಗಳನ್ನು ಹಾಕಬೇಕು

ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ಗಳು ಬೌನ್ಸರ್‌ ಎದುರಿಸಲು ಕಷ್ಟಪಡುತ್ತಾರೆ. ಇಂಗ್ಲೆಂಡ್‌ನ ಪಿಚ್‌ಗಳಲ್ಲಿ ಉತ್ತಮ ವೇಗವಿದ್ದರೆ ಬೌಲರ್‌ಗಳಿಗೆ ಬೌನ್ಸರ್‌ ಹಾಕುವುದು ದೊಡ್ಡ ಸವಾಲೇನಲ್ಲ. ಟೇಲರ್‌, ನಿಕೋಲ್ಸ್‌, ಲೇಥಮ್‌, ಕಾನ್‌ವೇ ವಿರುದ್ಧ ಬೌನ್ಸರ್‌ ಉತ್ತಮ ಅಸ್ತ್ರವಾಗಲಿದೆ.

4. ಶಿಸ್ತಿನ ದಾಳಿ ಬಹಳ ಮುಖ್ಯ

ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ಗಳ ಪೈಕಿ ವಿಲಿಯಮ್ಸನ್‌ ಹಾಗೂ ಟೇಲರ್‌ ಬಿಟ್ಟರೆ ಉಳಿದವರಾರ‍ಯರೂ ‘ಸೂಪರ್‌ ಸ್ಟಾರ್‌’ಗಳ ಪಟ್ಟ ಹೊಂದಿಲ್ಲ. ಆದರೆ ಬಹುತೇಕ ಎಲ್ಲಾ ಬ್ಯಾಟ್ಸ್‌ಮನ್‌ಗಳು ತಾಂತ್ರಿಕವಾಗಿ ಬಹಳ ಸದೃಢರಿದ್ದಾರೆ. ಹೀಗಾಗಿ ಭಾರತೀಯ ಬೌಲರ್‌ಗಳು ತಮ್ಮ ಬೌಲಿಂಗ್‌ ಲೈನ್‌ ಅಂಡ್‌ ಲೆಂಥ್‌ ಮೇಲೆ ಹೆಚ್ಚು ಗಮನ ಹರಿಸಬೇಕು. ತಮ್ಮ ಯೋಜನೆಗಳನ್ನು ಸರಳವಾಗಿ ಇಟ್ಟಷ್ಟೂ ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ.

5. ಕೆಳ ಕ್ರಮಾಂಕದ ರನ್‌ ಕೊಡುಗೆ ಬಹಳ ಮುಖ್ಯ

ಇಂಗ್ಲಿಷ್‌ ಪಿಚ್‌ ಹಾಗೂ ವಾತಾವರಣ ಸ್ವಿಂಗ್‌ ಬೌಲಿಂಗ್‌ಗೆ ಹೆಚ್ಚು ಸಹಕಾರಿ. ಅಲ್ಲದೇ ಎರಡೂ ತಂಡಗಳ ವೇಗದ ಪಡೆ ಉತ್ಕೃಷ್ಟ ಗುಣಮಟ್ಟದಾಗಿವೆ. ಹೀಗಾಗಿ ಆರಂಭದಲ್ಲೇ ವಿಕೆಟ್‌ಗಳು ಬೀಳಬಹುದು. ಹೀಗಾಗಿ ಕೆಳ ಕ್ರಮಾಂಕದ ರನ್‌ ಕೊಡುಗೆ ಪಂದ್ಯದ ಗತಿಯನ್ನೇ ಬದಲಿಸಬಲ್ಲದು. ಕಿವೀಸ್‌ಗೆ ಹೋಲಿಸಿದರೆ ಭಾರತದ ಕೆಳ ಕ್ರಮಾಂಕ ಬಲಿಷ್ಠವಾಗಿದೆ.