ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌: ಟೆಸ್ಟ್ ಕ್ರಿಕೆಟ್‌ಗೆ ಯಾರು ಬಾಸ್‌..?

* ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭ

* ಪ್ರಶಸ್ತಿಗಾಗಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಪೈಪೋಟಿ

* ಮಧ್ಯಾಹ್ನ 3 ಗಂಟೆಯಿಂದ ಟೆಸ್ಟ್ ವಿಶ್ವಕಪ್ ಫೈನಲ್ ಆರಂಭ

Count down for India vs New Zealand  World Test Championship Final in Southampton kvn

ಸೌಥಾಂಪ್ಟನ್(ಜೂ.18)‌: ಭಾರತ ಯಾವುದೇ ಮಾದರಿಯಲ್ಲಿ ವಿಶ್ವಕಪ್‌ ಗೆದ್ದಾಗ ಆ ಮಾದರಿಯ ಭವಿಷ್ಯವೇ ಬದಲಾಗುತ್ತದೆ. 1983ರಲ್ಲಿ ಕಪಿಲ್‌ ದೇವ್‌ ಪಡೆ ಏಕದಿನ ವಿಶ್ವಕಪ್‌ ಗೆದ್ದ ನಂತರ ಏಕದಿನ ಕ್ರಿಕೆಟ್‌ನತ್ತ ಜನರ ಆಸಕ್ತಿ ಹೆಚ್ಚಾಯಿತು. ಭಾರತೀಯ ಕ್ರಿಕೆಟ್‌ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನ ಆರ್ಥಿಕ ಸ್ಥಿತಿ ಬದಲಾಯಿತು.

2007ರಲ್ಲಿ ಭಾರತ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದ ಬಳಿಕ ಐಪಿಎಲ್‌ ಹುಟ್ಟಿಕೊಂಡಿತು. ಐಪಿಎಲ್‌ನಿಂದಾಗಿ ನೂರಾರು ಕ್ರಿಕೆಟಿಗರ ಬಾಳು ಬೆಳಗಿತು. ಟೆಸ್ಟ್‌ ಕ್ರಿಕೆಟ್‌ನ ಅಳಿವು-ಉಳಿವಿನ ಬಗ್ಗೆ ವಿಶ್ವ ಕ್ರಿಕೆಟ್‌ ಚರ್ಚಿಸುತ್ತಿದೆ. ಅದಕ್ಕಾಗಿ ಭಾರತ ವಿಶ್ವಕಪ್‌ ಗೆಲ್ಲಬೇಕು. ಆ ಅವಕಾಶ ಈಗ ಭಾರತಕ್ಕಿದೆ. ವಿಶ್ವಕಪ್‌ ಗೆದ್ದು ಟೆಸ್ಟ್‌ ಕ್ರಿಕೆಟ್‌ನ ಭವಿಷ್ಯವನ್ನು ಸದೃಢಗೊಳಿಸುವ ಕ್ಷಣ ಬಂದೇ ಬಿಟ್ಟಿದೆ. ಶುಕ್ರವಾರದಿಂದ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ನಡೆಯಲಿದ್ದು ಭಾರತ, ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. ಇಲ್ಲಿನ ರೋಸ್‌ ಬೌಲ್‌ ಕ್ರೀಡಾಂಗಣ ಐತಿಹಾಸಿಕ ಪಂದ್ಯಕ್ಕಾಗಿ ಸಜ್ಜಾಗಿದೆ. ಕಪಿಲ್‌ ದೇವ್‌, ಎಂ.ಎಸ್‌.ಧೋನಿ ಸಾಲಿಗೆ ಸೇರಲು ವಿರಾಟ್‌ ಕೊಹ್ಲಿ ಕಾತರಿಸುತ್ತಿದ್ದಾರೆ.

2 ವರ್ಷಗಳ ನಿರಂತರ ಪರಿಶ್ರಮಕ್ಕೆ ಫಲ ಕಂಡುಕೊಳ್ಳಲು ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಉತ್ಸುಕಗೊಂಡಿವೆ. ಎರಡೂ ತಂಡಗಳು ತನ್ನದೇ ಆದ ರೀತಿಯಲ್ಲಿ ಸಿದ್ಧತೆ ನಡೆಸಿವೆ. ನ್ಯೂಜಿಲೆಂಡ್‌ ಮಹತ್ವದ ಫೈನಲ್‌ಗೂ ಮುನ್ನ ಇಂಗ್ಲೆಂಡ್‌ ವಿರುದ್ಧ 2 ಪಂದ್ಯಗಳ ಸರಣಿಯನ್ನಾಡಿ, 1-0ಯಲ್ಲಿ ಸರಣಿ ಗೆದ್ದು ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಇದು ಸಾಲದು ಎಂಬಂತೆ, ಫೈನಲ್‌ಗೂ ಮುನ್ನ ಐಸಿಸಿ ಟೆಸ್ಟ್‌ ರಾರ‍ಯಂಕಿಂಗ್‌ನಲ್ಲಿ ಭಾರತವನ್ನು ಹಿಂದಿಕ್ಕಿ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಜಿಗಿದಿದೆ.

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ಲೇಯಿಂಗ್ 11 ಪ್ರಕಟಿಸಿದ ಭಾರತ; ಅಶ್ವಿನ್, ಜಡ್ಡುಗೆ ಸ್ಥಾನ!

ಮತ್ತೊಂದೆಡೆ ಮಾರ್ಚ್ ಬಳಿಕ ಸ್ಪರ್ಧಾತ್ಮಕ ಪಂದ್ಯವನ್ನಾಡದ ಟೀಂ ಇಂಡಿಯಾ, ತನ್ನ ಆಟಗಾರರ ಐಪಿಎಲ್‌ ಲಯದ ಮೇಲೆ ವಿಶ್ವಾಸವಿರಿಸಿದೆ. ತಂಡದೊಳಗೇ ಅಭ್ಯಾಸ ಪಂದ್ಯವೊಂದನ್ನು ಆಯೋಜಿಸಿಕೊಂಡು ಸಿದ್ಧತೆ ನಡೆಸಿದೆ. ಕೊಹ್ಲಿ ಪಡೆ ಲಯಕ್ಕಿಂತ ಹೆಚ್ಚಾಗಿ ಫೈನಲ್‌ವರೆಗೂ ಸಾಗಿ ಬರಲು ಕಾರಣವಾದ ಅಂಶಗಳ ಮೇಲೆ ಹೆಚ್ಚು ನಂಬಿಕೆಯಿಟ್ಟು ಮುನ್ನುಗ್ಗಲು ಕಾಯುತ್ತಿದೆ.

ಸಮಬಲರ ನಡುವಿನ ಹೋರಾಟ: ಭಾರತ ಹಾಗೂ ನ್ಯೂಜಿಲೆಂಡ್‌ ಎರಡೂ ತಂಡಗಳು ಅತ್ಯಂತ ಬಲಿಷ್ಠವಾಗಿವೆ. ಟೆಸ್ಟ್‌ ತಜ್ಞರು ಎರಡೂ ತಂಡಗಳಲ್ಲಿದ್ದಾರೆ. ರೋಹಿತ್‌ ಶರ್ಮಾ, ಶುಭ್‌ಮನ್‌ ಗಿಲ್‌ ಭಾರತ ಪರ ಇನ್ನಿಂಗ್ಸ್‌ ಆರಂಭಿಸಿದರೆ, ಕಿವೀಸ್‌ ಪರ ಟಾಮ್‌ ಲೇಥಮ್‌ ಹಾಗೂ ಡೇವೊನ್‌ ಕಾನ್‌ವೇ ಆರಂಭಿಕರಾಗಿ ಆಡಲಿದ್ದಾರೆ. ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಆಧಾರ ಸ್ತಂಭ. ಕೇನ್‌ ವಿಲಿಯಮ್ಸನ್‌, ರಾಸ್‌ ಟೇಲರ್‌, ಹೆನ್ರಿ ನಿಕೋಲ್ಸ್‌ ಕಿವೀಸ್‌ನ ಮಿಡ್ಲ್‌ ಆರ್ಡರ್‌ಗೆ ಬಲ ತುಂಬಲಿದ್ದಾರೆ.

ರಿಷಭ್‌ ಪಂತ್‌ ಭಾರತ ಪರ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಆಡಿದರೆ, ಕಿವೀಸ್‌ ಪಾಳಯದ ಕೀಪಿಂಗ್‌ ಜವಾಬ್ದಾರಿಯನ್ನು ಬಿ.ಜೆ.ವ್ಯಾಟ್ಲಿಂಗ್‌ ಹೊರಲಿದ್ದಾರೆ. ಆರ್‌.ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ ಸ್ಪಿನ್‌ ಬೌಲಿಂಗ್‌ ಜೊತೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ತಾರೆಯರೆನಿಸಿದರೆ, ಕಿವೀಸ್‌ ಅಜಾಜ್‌ ಪಟೇಲ್‌ರನ್ನು ಏಕೈಕ ಸ್ಪಿನ್ನರ್‌ ಆಗಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಜಸ್‌ಪ್ರೀತ್‌ ಬುಮ್ರಾ, ಇಶಾಂತ್‌ ಶರ್ಮಾ, ಮೊಹಮದ್‌ ಶಮಿ ಭಾರತದ ಮುಂಚೂಣಿ ವೇಗಿಗಳಾದರೆ, ಟ್ರೆಂಟ್‌ ಬೌಲ್ಟ್‌, ಕೈಲ್‌ ಜೇಮಿಸನ್‌, ಟಿಮ್‌ ಸೌಥಿ, ನೀಲ್‌ ವ್ಯಾಗ್ನರ್‌, ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಶುಭ್‌ಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಆರ್‌.ಅಶ್ವಿನ್‌, ಮೊಹಮದ್‌ ಶಮಿ, ಇಶಾಂತ್‌ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ.

ನ್ಯೂಜಿಲೆಂಡ್‌: ಡೆವೊನ್‌ ಕಾನ್‌ವೇ, ಟಾಮ್‌ ಲೇಥಮ್‌, ಕೇನ್‌ ವಿಲಿಯಮ್ಸನ್‌(ನಾಯಕ), ರಾಸ್‌ ಟೇಲರ್‌, ಹೆನ್ರಿ ನಿಕೋಲ್ಸ್‌, ಬಿ.ಜೆ.ವ್ಯಾಟ್ಲಿಂಗ್‌, ಕೈಲ್‌ ಜೇಮಿಸನ್‌, ಟಿಮ್‌ ಸೌಥಿ, ನೀಲ್‌ ವ್ಯಾಗ್ನರ್‌, ಟ್ರೆಂಟ್‌ ಬೌಲ್ಟ್‌, ಅಜಾಜ್‌ ಪಟೇಲ್‌.

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಪಿಚ್‌ ರಿಪೋರ್ಟ್‌

ಸೌಥಾಂಪ್ಟನ್‌ನ ಪಿಚ್‌ ಮೊದಲ 3 ದಿನ ಉತ್ತಮ ವೇಗ, ಬೌನ್ಸ್‌ ಹೊಂದಿರಲಿದೆ ಎನ್ನಲಾಗಿದೆ. ಕೊನೆ 2 ದಿನ ಸ್ಪಿನ್ನರ್‌ಗಳಿಗೆ ನೆರವು ಸಿಗುವ ನಿರೀಕ್ಷೆ ಇದೆ. ಅಲ್ಲದೇ ಮಳೆ ವಾತಾವರಣವಿರಲಿರುವ ಕಾರಣ ಸ್ವಿಂಗ್‌ ಬೌಲಿಂಗ್‌ಗೆ ಹೆಚ್ಚು ಅನುಕೂಲವಾಗಲಿದೆ.
 

Latest Videos
Follow Us:
Download App:
  • android
  • ios