ರಣಜಿ ಟೂರ್ನಿಗೆ ಸಜ್ಜಾಗ್ತಿದೆ ಕರ್ನಾಟಕ
ಈಗಾಗಲೇ ವಿಜಯ್ ಹಜಾರೆ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಜಯಿಸಿ ಬೀಗುತ್ತಿರುವ ಕರ್ನಾಟಕ ತಂಡ ಇದೀಗ, ರಣಜಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ. 30 ಆಟಗಾರರನ್ನೊಳಗೊಂಡ ಸಂಭಾವ್ಯ ತಂಡವನ್ನು ಕೆಎಸ್‌ಸಿಎ ಪ್ರಕಟಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಡಿ.04]: ಡಿ. 9ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಗಾಗಿ ಕರ್ನಾಟಕದ 30 ಆಟಗಾರರ ಸಂಭಾವ್ಯ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮಂಗಳವಾರ ಪ್ರಕಟಿಸಿದೆ. ಅಂಡರ್ 19 ವಿಶ್ವಕಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾದ ಶುಭಾಂಗ್ ಹೆಗ್ಡೆ ಹಾಗೂ ವಿದ್ಯಾಧರ್ ಪಾಟೀಲ್‌ಗೆ 30 ಸದಸ್ಯರ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.
ಸತತ 2 ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮೊದಲ ತಂಡ ಕರ್ನಾಟಕ!
ಶುಭಾಂಗ್ ಕಳೆದ ಋುತುವಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ವಡೋದರಾದಲ್ಲಿ ಬರೋಡಾ ವಿರುದ್ಧ ನಡೆದಿದ್ದ ರಣಜಿ ಪಂದ್ಯದಲ್ಲಿ ಕರ್ನಾಟಕ ಪರ ಆಡಿ, 4 ವಿಕೆಟ್ ಕಬಳಿಸಿದ್ದರು. ವಿದ್ಯಾಧರ್ ಇನ್ನೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿಲ್ಲ. ಉಳಿದಂತೆ ಕೆ.ಎಲ್.ರಾಹುಲ್, ಮನೀಶ್ ಪಾಂಡೆ, ಕರುಣ್ ನಾಯರ್, ಮಯಾಂಕ್ ಅಗರ್‌ವಾಲ್ ಸೇರಿದಂತೆ ಈ ಋುತುವಿನಲ್ಲಿ ವಿಜಯ್ ಹಜಾರೆ, ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡಿದ ಬಹುತೇಕ ಆಟಗಾರರು ಸ್ಥಾನ ಪಡೆದಿದ್ದಾರೆ. ವಿಜಯ್ ಹಜಾರೆ ಏಕದಿನ ಹಾಗೂ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಕರ್ನಾಟಕ, ರಣಜಿ ಟ್ರೋಫಿ ಮೇಲೂ ಕಣ್ಣಿಟ್ಟಿದೆ. ‘ಬಿ’ ಗುಂಪಿನಲ್ಲಿರುವ ಕರ್ನಾಟಕ, ಡಿ.9ರಿಂದ ಆರಂಭಗೊಳ್ಳಲಿರುವ ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಸೆಣಸಲಿದೆ.
30 ಸದಸ್ಯರ ಸಂಭಾವ್ಯರ ಪಟ್ಟಿ:
ಮಯಾಂಕ್, ದೇವದತ್, ರಾಹುಲ್, ಕರುಣ್, ನಿಶ್ಚಲ್, ಮನೀಶ್, ಪವನ್, ರೋಹನ್, ಅಭಿಷೇಕ್, ಲಿಯಾನ್, ಶರತ್ ಬಿ.ಆರ್, ಲುವ್ನಿತ್, ಶರತ್ ಶ್ರೀನಿವಾಸ್, ಪ್ರಸಿದ್ಧ್, ಮಿಥುನ್, ರೋನಿತ್, ಡೇವಿಡ್, ಕೌಶಿಕ್, ವಿದ್ಯಾಧರ್, ಅಭಿಲಾಶ್, ಪ್ರತೀಕ್, ಶ್ರೇಯಸ್, ಗೌತಮ್, ಸುಚಿತ್, ಪ್ರವೀಣ್, ಶುಭಾಂಗ್, ಆದಿತ್ಯ, ಸಿದ್ಧಾರ್ಥ್, ಸಮರ್ಥ್, ದೇವಯ್ಯ.