ರಾಜ್‌ಕೋಟ್‌ನಲ್ಲಿ ಮಳೆ ಇಲ್ಲವೇ ರನ್ ಮಳೆ!
ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಒಂದು ವೇಳೆ ಮಳೆ ಬರದಿದ್ದರೆ, ರನ್ ಮಳೆ ಹರಿಯೋದಂತೂ ಗ್ಯಾರಂಟಿ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ರಾಜ್‌ಕೋಟ್(ನ.07): ಟಿ20 ಮಾದರಿಯಲ್ಲಿ ಭಾರತ ತಂಡದ ಸಾಮರ್ಥ್ಯದ ಬಗ್ಗೆ ಅನುಮಾನಗಳಿವೆ. 2020ರ ಟಿ20 ವಿಶ್ವಕಪ್ಗೆ ಸಿದ್ಧತೆ ನಡೆಸುತ್ತಿರುವ ತಂಡದ ಮುಂದೆ ಹಲವಾರು ಪ್ರಶ್ನೆಗಳಿವೆ. ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲುಂಡ ಬಳಿಕ ಪ್ರಶ್ನೆಗಳು ಹೆಚ್ಚಾಗಿವೆ. ಈ ಒತ್ತಡದಲ್ಲೇ ಗುರುವಾರ ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಬಾಂಗ್ಲಾ ವಿರುದ್ಧ 2ನೇ ಟಿ20 ಪಂದ್ಯವನ್ನಾಡಲು ಭಾರತ ತಂಡ ಕಣಕ್ಕಿಳಿಯಲಿದೆ.
ಪಂದ್ಯಕ್ಕೆ ಮಹಾ ಚಂಡಮಾರುತದಿಂದ ಅಡ್ಡಿಯಾಗುವ ಸಾಧ್ಯತೆ ಇದ್ದು, ಪಂದ್ಯ ರದ್ದಾಗಬಹುದು ಎನ್ನುವ ಆತಂಕವಿದೆ. ಬುಧವಾರ ಸಂಜೆ ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಗುರುವಾರ ಮೋಡ ಕವಿತ ವಾತಾವರಣವಿರಲಿದ್ದು, ಸಂಜೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಮಹತ್ತರ ಬದಲಾವಣೆ?
ಒಂದೊಮ್ಮೆ ಮಳೆ ಬಿಡುವು ಕೊಟ್ಟರೆ ಇಲ್ಲಿನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ರನ್ ಹೊಳೆ ಹರಿಯಲಿದೆ. ಇಲ್ಲಿ ನಡೆದಿರುವ ಬಹುತೇಕ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿದೆ. ಭಾರತ ತಂಡದ ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಕಂಡಿರುವ ಯಶಸ್ಸನ್ನು ಕಳೆದೊಂದು ವರ್ಷದಲ್ಲಿ ಟಿ20 ಮಾದರಿಯಲ್ಲಿ ಕಾಣಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಆಸ್ಪ್ರೇಲಿಯಾ ವಿರುದ್ಧ ಸರಣಿ ಸೋತಿದ್ದ ಭಾರತ, ದ.ಆಫ್ರಿಕಾ ವಿರುದ್ಧ ಡ್ರಾಗೆ ತೃಪ್ತಿಪಟ್ಟಿತ್ತು. ಇದೀಗ ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲುಂಡ ಭಾರತ, 2ನೇ ಪಂದ್ಯದಲ್ಲಿ ಪುಟಿದೆದ್ದು ಸರಣಿ ಸೋಲಿನಿಂದ ಪಾರಾಗಲು ಕಾತರಿಸುತ್ತಿದೆ.
ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವಕರಿಗೆ ಮಿಂಚಲು ಉತ್ತಮ ಅವಕಾಶ ಸಿಕ್ಕಿದೆ. ಭಾರತ ತಂಡಕ್ಕೆ ತನ್ನ ಬ್ಯಾಟಿಂಗ್ ವಿಭಾಗದ ಕಳಪೆ ಲಯವೇ ದೊಡ್ಡ ಸಮಸ್ಯೆಯಾಗಿದೆ. ಶಿಖರ್ ಧವನ್ ನಿಧಾನಗತಿಯಲ್ಲಿ ಬ್ಯಾಟ್ ಮಾಡುತಿದ್ದು, ಕೆ.ಎಲ್.ರಾಹುಲ್, ರಿಷಭ್ ಪಂತ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡುತ್ತಿಲ್ಲ. ರೋಹಿತ್ ಶರ್ಮಾ ಸ್ಥಿರತೆ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ, ಶ್ರೇಯಸ್ ಅಯ್ಯರ್ ದೊಡ್ಡ ಇನ್ನಿಂಗ್ಸ್‌ಗಳನ್ನು ಆಡುವಲ್ಲಿ ವಿಫಲರಾಗುತ್ತಿದ್ದಾರೆ.
ಬಾಂಗ್ಲಾ ಕ್ರಿಕೆಟಿಗರ ಬ್ಯೂಟಿಫುಲ್ ಮಡದಿಯರಿವರು
ಸಂಜು ಸ್ಯಾಮ್ಸನ್, ಮನೀಶ್ ಪಾಂಡೆಯಂತಹ ಟಿ20 ತಜ್ಞ ಬ್ಯಾಟ್ಸ್ಮನ್ಗಳಿದ್ದರೂ, ಭಾರತ ತಂಡ ಮೊದಲ ಪಂದ್ಯದಲ್ಲಿ ಆಡಿದ್ದ ಆಟಗಾರರನ್ನೇ ಮುಂದುವರಿಸುವ ಸಾಧ್ಯತೆ ಇದೆ. ಬೌಲಿಂಗ್ ಸಂಯೋಜನೆಯನ್ನು ಬದಲಿಸಲು ತಂಡದ ಆಡಳಿತ ನಿರ್ಧರಿಸಿದರೆ, ಎಡಗೈ ವೇಗಿ ಖಲೀಲ್ ಅಹ್ಮದ್ ಬದಲಿಗೆ ಶಾರ್ದೂಲ್ ಠಾಕೂರ್‌ಗೆ ಸ್ಥಾನ ಸಿಗಬಹುದು ಎನ್ನಲಾಗಿದೆ. ಇನ್ನುಳಿದಂತೆ ಯಜುವೇಂದ್ರ ಚಹಲ್, ಕೃನಾಲ್ ಪಾಂಡ್ಯ ಹಾಗೂ ವಾಷಿಂಗ್ಟನ್ ಸುಂದರ್ ಸ್ಪಿನ್ನರ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ಆತ್ಮವಿಶ್ವಾಸದಲ್ಲಿ ಬಾಂಗ್ಲಾ
ಭಾರತ ವಿರುದ್ಧ ಸತತ 8 ಸೋಲುಗಳ ಬಳಿಕ ಗೆಲುವಿನ ರುಚಿ ನೋಡಿದ ಬಾಂಗ್ಲಾದೇಶ ತಂಡ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ತಾರಾ ಆಟಗಾರರಾದ ಶಕೀಬ್ ಅಲ್ ಹಸನ್ ಹಾಗೂ ತಮೀಮ್ ಇಕ್ಬಾಲ್ ಅನುಪಸ್ಥಿತಿಯಲ್ಲಿ ಪ್ರವಾಸ ಕೈಗೊಂಡಿರುವ ಬಾಂಗ್ಲಾ, ಸರಣಿ ಗೆದ್ದು ಇತಿಹಾಸ ರಚಿಸಲು ಎದುರು ನೋಡುತ್ತಿದೆ. ತಂಡದ ಯುವ ಪ್ರತಿಭೆಗಳು ನಿರೀಕ್ಷೆ ಮೀರಿ ಪ್ರದರ್ಶನ ತೋರುತ್ತಿದ್ದು, ಭಾರತೀಯರಲ್ಲಿ ಆತಂಕ ಹುಟ್ಟಿಸಿರುವುದು ಖಚಿತ.
ಒಂದೊಮ್ಮೆ ಈ ಪಂದ್ಯ ಮಳೆಯಿಂದ ರದ್ದಾದರೆ, ಭಾರತ ಸರಣಿ ಗೆಲ್ಲುವ ಅವಕಾಶ ಕಳೆದುಕೊಳ್ಳಲಿದೆ. ನ.10ರಂದು ನಾಗ್ಪುರ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಒತ್ತಡಕ್ಕೆ ಸಿಲುಕಲಿದೆ.
ಪಿಚ್ ರಿಪೋರ್ಟ್
ರಾಜ್‌ಕೋಟ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಇಲ್ಲಿ ನಡೆದಿರುವ ಬಹುತೇಕ ಟಿ20 ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ನಿರೀಕ್ಷೆ ಇದ್ದು, ಟಾಸ್ ಪ್ರಮುಖ ಪಾತ್ರ ವಹಿಸಲಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಸ್ಯಾಮ್ಸನ್/ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿವಂ ದುಬೆ, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ದೀಪಕ್ ಚಾಹರ್, ಶಾರ್ದೂಲ್/ಖಲೀಲ್.
ಬಾಂಗ್ಲಾದೇಶ: ಲಿಟನ್ ದಾಸ್, ಸೌಮ್ಯ ಸರ್ಕಾರ್, ಮೊಹಮದ್ ನೈಮ್, ಮುಷ್ಫಿಕುರ್ ರಹೀಂ, ಮಹಮದುಲ್ಲಾ (ನಾಯಕ), ಮೊಸಾದೆಕ್ ಹುಸೇನ್, ಆಫಿಫ್ ಹುಸೇನ್, ಅಮಿನುಲ್ ಇಸ್ಲಾಂ, ಮುಸ್ತಾಫಿಜುರ್ ರಹಮಾನ್, ಅಲ್ ಅಮೀನ್, ಶಫಿಯುಲ್.
ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1