ಲಖನೌ[ನ.07]: ರೋಸ್ಟನ್ ಚೇಸ್ (94) ಹಾಗೂ ಶಾಯ್ ಹೋಪ್ (77)ರ ಆಕರ್ಷಕ ಅರ್ಧಶತಕಗಳ ನೆರವಿನಿಂದ ವೆಸ್ಟ್ ಇಂಡೀಸ್, ಆಫ್ಘಾನಿಸ್ತಾನ ವಿರುದ್ಧ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್ ಗೆಲುವು ದಾಖಲಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ವಿಂಡೀಸ್ 1-0 ಮುನ್ನಡೆ ಪಡೆದಿದೆ.

ರಾಜ್‌ಕೋಟ್‌ನಲ್ಲಿ ಮಳೆ ಇಲ್ಲವೇ ರನ್‌ ಮಳೆ!

ಬುಧವಾರ ನಡೆದ ಪಂದ್ಯದಲ್ಲಿ ಆಫ್ಘನ್ ನೀಡಿದ 195 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ವಿಂಡೀಸ್ 46.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. 25 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡು ವೆಸ್ಟ್ ಇಂಡೀಸ್ ಆಘಾತಕ್ಕೆ ಗುರಿಯಾಗಿತ್ತು. ಆದರೆ ಹೋಪ್ ಹಾಗೂ ಚೇಸ್ ನೆಲಕಚ್ಚಿ ಆಡುವ ಮೂಲಕ ತಂಡಕ್ಕೆ ಸುಲಭದ ಜಯ ತಂದಿತ್ತರು. ಆಫ್ಘನ್ ಪರ ಮುಜೀಬ್ ಉರ್ ರೆಹಮಾನ್ 2, ನವೀನ್ ಉಲ್ ಹಕ್ ಒಂದು ವಿಕೆಟ್ ಪಡೆದರು.

ಆಫ್ಘಾನ್ ಅಭಿಮಾನಿಗೆ ಲಕ್ನೋದಲ್ಲಿ ಸಿಗಲಿಲ್ಲ ರೂಂ; ನೆರವಿಗೆ ಧಾವಿಸಿದ ಪೊಲೀಸ್!

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆಫ್ಘಾನಿಸ್ತಾನ ತಂಡದ ಆರಂಭ ಕೂಡಾ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 15 ರನ್ ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದ್ದರು. ಆದರೆ ಮೂರನೇ ವಿಕೆಟ್’ಗೆ  ರಹಮತ್ ಶಾ ಹಾಗೂ ಇಕ್ರಮ್ ಅಲಿ ಜೋಡಿ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.  ರಹಮತ್ ಶಾ (61), ಇಕ್ರಮ್ (58) ಇಬ್ಬರು ಅರ್ಧಶತಕ ಪೂರೈಸಿದರು. ಇಕ್ರಮ್ ರನೌಟ್ ಆಗುತ್ತಿದ್ದಂತೆ ಆಫ್ಘಾನಿಸ್ತಾನದ ಬ್ಯಾಟಿಂಗ್ ಮತ್ತೊಮ್ಮೆ ಕುಸಿಯಲಾರಂಭಿಸಿತು. 190 ರನ್’ಗಳವರೆಗೂ ಆರು ವಿಕೆಟ್ ಕಳೆದುಕೊಂಡಿದ್ದ ಆಫ್ಘಾನಿಸ್ತಾನ ಕೇವಲ 4 ರನ್ ಅಂತರದಲ್ಲಿ ಕೊನೆಯ 4 ವಿಕೆಟ್ ಕಳೆದುಕೊಂಡಿತು.
ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ರೋಮಾರಿಯೋ ಶೆಫಾರ್ಡ್ ತಲಾ 2 ವಿಕೆಟ್ ಪಡೆದರೆ, ಶೆಲ್ಡನ್ ಕಾಟ್ರೆಲ್ ಹಾಗೂ ಹೇಡನ್ ವಾಲ್ಷ್ ತಲಾ ಒಂದೊಂದು ವಿಕೆಟ್ ಪಡೆದರು.

ಆಲ್ರೌಂಡ್ ಪ್ರದರ್ಶನ ತೋರಿದ ರೋಸ್ಟನ್ ಚೇಸ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಇನ್ನು ಎರಡನೇ ಏಕದಿನ ಪಂದ್ಯವು ಇದೇ ಮೈದಾನದಲ್ಲಿ ನವೆಂಬರ್ 9ರಂದು ನಡೆಯಲಿದೆ.

ಸ್ಕೋರ್:

ಆಫ್ಘನ್ 194/10

ವೆಸ್ಟ್ ಇಂಡೀಸ್ 197/3