ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 18 ವರ್ಷಗಳನ್ನು ಪೂರೈಸಿರುವ ವಿರಾಟ್ ಕೊಹ್ಲಿ, ತಮ್ಮ ವೃತ್ತಿಜೀವನದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಈ ಲೇಖನವು ಅವರ ಶತಕಗಳಾಚೆಗಿನ, ಹೆಚ್ಚು ಪ್ರಚಾರಕ್ಕೆ ಬಾರದ ಆದರೆ ಅತ್ಯಂತ ಮಹತ್ವದ 5 ಅಪರೂಪದ ವಿಶ್ವದಾಖಲೆಗಳ ಮೇಲೆ ಬೆಳಕು ಚೆಲ್ಲುತ್ತದೆ.
ಭಾರತೀಯ ಕ್ರಿಕೆಟ್‌ನ 'ರನ್ ಮೆಷಿನ್' ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿ, ಇಂದು (ಆಗಸ್ಟ್ 18, 2026) ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟು ಬಾರ doಡು 18 ವರ್ಷಗಳನ್ನು ಪೂರೈಸಿದ್ದಾರೆ. 2008 ರಲ್ಲಿ ದೆಹಲಿಯ ಈ ಯುವಕ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೇವಲ 12 ರನ್‌ಗಳಿಸಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. ಇಂದು ಟೆಸ್ಟ್ ಮತ್ತು ಟಿ20ಐ ಆಟದ ಸ್ವರೂಪಗಳಿಂದ ನಿವೃತ್ತಿ ಹೊಂದಿದ್ದರೂ, ಅವರು ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಮೈದಾನದಲ್ಲಿ 'ಜೆರ್ಸಿ ನಂಬರ್ 18' ಕಂಡರೆ ಕ್ರೀಡಾಂಗಣದಲ್ಲಿ ಶಿಳ್ಳೆ-ಚಪ್ಪಾಳೆ ಮೊಳಗುತ್ತವೆ. ಈ ನಿಟ್ಟಿನಲ್ಲಿ ಕೊಹ್ಲಿ ಅವರ ಈ 18 ವರ್ಷಗಳ ಐತಿಹಾಸಿಕ ಪಯಣದಲ್ಲಿ ಎಲ್ಲರಿಗೂ ತಿಳಿದಿರುವ ಅನೇಕ ಶತಕಗಳ ಮಧ್ಯೆ, ಹೆಚ್ಚು ಪ್ರಚಾರಕ್ಕೆ ಬರದ ಆದರೆ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯೂ ತಿಳಿದುಕೊಳ್ಳಬೇಕಾದ 5 ಅತ್ಯಪರೂಪದ ದಾಖಲೆಗಳನ್ನು ನೋಡೋಣ ಬನ್ನಿ.
ಒಂದೇ ದಶಕದಲ್ಲಿ 20,000 ಅಂತರರಾಷ್ಟ್ರೀಯ ರನ್‌ಗಳು!
ವಿಶ್ವ ಕ್ರಿಕೆಟ್ ಚರಿತ್ರೆಯಲ್ಲೇ ಒಂದು ದಶಕದಲ್ಲಿ (10 ವರ್ಷಗಳಲ್ಲಿ) 20,000 ಕ್ಕೂ ಹೆಚ್ಚು ರನ್‌ಗಳನ್ನು ಬಾರಿಸಿದ ಏಕೈಕ ಬ್ಯಾಟರ್ ವಿರಾಟ್ ಕೊಹ್ಲಿ. 2010 ರಿಂದ 2019 ರ ನಡುವಿನ ಅವಧಿಯಲ್ಲಿ ಕೊಹ್ಲಿ ಭರ್ಜರಿ 20,960 ಅಂತರರಾಷ್ಟ್ರೀಯ ರನ್‌ಗಳನ್ನು ಗಳಿಸಿ ಈ ಅಭೂತಪೂರ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಐಸಿಸಿಯ ಪ್ರಮುಖ 3 ಪ್ರಶಸ್ತಿಗಳನ್ನು ಒಂದೇ ವರ್ಷದಲ್ಲಿ ಗೆದ್ದ ಸಾಧನೆ!
2018 ನೇ ವರ್ಷವು ಕೊಹ್ಲಿ ಅವರ ವೃತ್ತಿಜೀವನದ ಸುವರ್ಣ ವರ್ಷವಾಗಿತ್ತು. ಅದೇ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಐಸಿಸಿಯ 'ವರ್ಷದ ಕ್ರಿಕೆಟಿಗ', 'ವರ್ಷದ ಟೆಸ್ಟ್ ಆಟಗಾರ' ಮತ್ತು 'ವರ್ಷದ ಏಕದಿನ ಆಟಗಾರ' ಎಂಬ ಮೂರೂ ಅತ್ಯುನ್ನತ ಪ್ರಶಸ್ತಿಗಳನ್ನು ಒಂದೇ ಬಾರಿಗೆ ಬಾಚಿಕೊಂಡ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
ಜಗತ್ತಿನಲ್ಲೇ ಅತಿ ಹೆಚ್ಚು 'ಸರಣಿ ಶ್ರೇಷ್ಠ' ಪ್ರಶಸ್ತಿಗಳು!
ತಮ್ಮ 18 ವರ್ಷಗಳ ವೃತ್ತಿಜೀವನದಲ್ಲಿ ವಿರಾಟ್ ಕೊಹ್ಲಿ ಒಟ್ಟು 22 ಬಾರಿ 'ಸರಣಿ ಶ್ರೇಷ್ಠ' ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಒಬ್ಬ ಕ್ರಿಕೆಟಿಗ ಗಳಿಸಿದ ಅತ್ಯಧಿಕ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿದೆ.
3 ಮಾದರಿಗಳಲ್ಲೂ 900+ ಐಸಿಸಿ ರೇಟಿಂಗ್ ಪಾಯಿಂಟ್‌ಗಳು!
ಸ್ಥಿರ ಪ್ರದರ್ಶನಕ್ಕೆ ಮತ್ತೊಂದು ಹೆಸರು ಕೊಹ್ಲಿ. ಕ್ರಿಕೆಟ್‌ನ ಮೂರೂ ಸ್ವರೂಪಗಳಾದ ಟೆಸ್ಟ್, ಏಕದಿನ (ODI) ಮತ್ತು ಟಿ20ಐ ರೇಟಿಂಗ್‌ಗಳಲ್ಲಿ 900 ಕ್ಕೂ ಹೆಚ್ಚು ಐಸಿಸಿ ರೇಟಿಂಗ್ ಪಾಯಿಂಟ್‌ಗಳನ್ನು (ICC Rating Points) ದಾಟಿದ ಜಗತ್ತಿನ ಏಕೈಕ ಬ್ಯಾಟರ್ ಎಂಬ ವಿಶ್ವದಾಖಲೆ ಕೊಹ್ಲಿ ಹೆಸರಲ್ಲಿದೆ.
ಟೆಸ್ಟ್ ನಾಯಕನಾಗಿ ಅತಿ ವೇಗದ 7 ದ್ವಿಶತಕಗಳು!
ಭಾರತ ಟೆಸ್ಟ್ ತಂಡದ ನಾಯಕನಾಗಿ ಕೊಹ್ಲಿ ಬಾರಿಸಿದ 7 ದ್ವಿಶತಕಗಳು ಯಶಸ್ವಿ ನಾಯಕತ್ವಕ್ಕೆ ಸಾಕ್ಷಿ. ಕೇವಲ 1,176 ದಿನಗಳ ಅಂತರದಲ್ಲಿ ಅವರು ಈ 7 ದ್ವಿಶತಕಗಳನ್ನು ಬಾರಿಸಿದ್ದರು. ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ಅವರು 7 ದ್ವಿಶತಕ ಗಳಿಸಲು ತೆಗೆದುಕೊಂಡಿದ್ದ 1,484 ದಿನಗಳ ದಾಖಲೆಯನ್ನು ಮುರಿದು, ಅವರಿಗಿಂತ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ್ದರು. ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಮೇಲಿನ ಅಪಾರ ಪ್ರೀತಿ, ಶ್ರಮ ಮತ್ತು ಶಿಸ್ತು ಅವರನ್ನು ಇಂದು ಕೇವಲ ಒಬ್ಬ ಕ್ರಿಕೆಟಿಗನನ್ನಾಗಿ ಮಾತ್ರವಲ್ಲದೆ, ಕೋಟ್ಯಂತರ ಯುವಕರಿಗೆ ಸ್ಫೂರ್ತಿಯ ಚಿಲುಮೆಯನ್ನಾಗಿ ಮಾಡಿದೆ. 18 ನೇ ಜೆರ್ಸಿ ಸಂಖ್ಯೆಯ ಈ ನಾಯಕನ 18 ವರ್ಷಗಳ ಸಾಧನೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲಾಗಿರುತ್ತದೆ.


