ಟಿ20 ವಿಶ್ವಕಪ್‌ನ ಸೂಪರ್‌-8 ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 61 ರನ್‌ಗಳ ಸೋಲು ಕಂಡ ಶ್ರೀಲಂಕಾ ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿದೆ. ಮೊದಲು ಬ್ಯಾಟ್ ಮಾಡಿದ ಕಿವೀಸ್, ಸ್ಯಾಂಟ್ನರ್‌ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 168 ರನ್ ಗಳಿಸಿತು. ಗುರಿ ಬೆನ್ನತ್ತಿದ ಲಂಕಾ 107 ರನ್‌ಗಳಿಗೆ ಆಲೌಟ್.

ಕೊಲಂಬೊ: ಸೂಪರ್‌-8 ಹಂತದಲ್ಲಿ ಸತತ 2ನೇ ಸೋಲು ಕಂಡ ಆತಿಥೇಯ ಶ್ರೀಲಂಕಾ ತಂಡ ಈ ಬಾರಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿದೆ. ಬುಧವಾರ ನ್ಯೂಜಿಲೆಂಡ್‌ ವಿರುದ್ಧ ಲಂಕಾ 61 ರನ್‌ಗಳಲ್ಲಿ ಸೋಲನುಭವಿಸಿತು. ಪಾಕ್‌ ವಿರುದ್ಧ ಪಂದ್ಯ ರದ್ದುಗೊಂಡು 1 ಅಂಕ ಗಳಿಸಿದ್ದ ಕಿವೀಸ್‌ ಈಗ 3 ಅಂಕ ಹೊಂದಿದ್ದು, ಸೆಮೀಸ್‌ ಆಸೆ ಜೀವಂತವಾಗಿರಿಸಿಕೊಂಡಿದೆ.

ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 7 ವಿಕೆಟ್‌ಗೆ 168 ರನ್‌ ಕಲೆಹಾಕಿತು. ಉತ್ತಮ ಆರಂಭದ ಬಳಿಕ ಕುಸಿದ ಕಿವೀಸ್‌ ಒಂದು ಹಂತದಲ್ಲಿ 12.1 ಓವರ್‌ಗಳಲ್ಲಿ 86 ರನ್‌ಗೆ 6 ವಿಕೆಟ್‌ ಕಳೆದುಕೊಂಡಿತ್ತು. ರಚಿನ್‌ ರವೀಂದ್ರ 32, ಫಿನ್ ಆ್ಯಲೆನ್‌ 23 ರನ್‌ ಗಳಿಸಿ ಔಟಾಗಿದ್ದರು. ಕೊನೆಯಲ್ಲಿ ಅಬ್ಬರಿಸಿದ ನಾಯಕ ಮಿಚೆಲ್‌ ಸ್ಯಾಂಟ್ನರ್‌(26 ಎಸೆತಕ್ಕೆ 47) ಹಾಗೂ ಕೋಲ್‌ ಮೆಕ್‌ಕೊನ್ಚೀ(23 ಎಸೆತಕ್ಕೆ ಔಟಾಗದೆ 31) ತಂಡದ ಮೊತ್ತವನ್ನು 170ರ ಸನಿಹ ತಂದರು. ಈ ಜೋಡಿ 47 ಎಸೆತಕ್ಕೆ 84 ರನ್‌ ಜೊತೆಯಾಟವಾಡಿತು. ತೀಕ್ಷಣ, ಚಮೀರ ತಲಾ 3 ವಿಕೆಟ್‌ ಪಡೆದರು.

ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಲಂಕಾ ಆರಂಭಿಕ ಆಘಾತಕ್ಕೆ ತುತ್ತಾದ ಬಳಿಕ ಚೇತರಿಸಿಕೊಳ್ಳಲಿಲ್ಲ. ಸತತ ವಿಕೆಟ್‌ ಕಳೆದುಕೊಳ್ಳುತ್ತಲೇ ಸಾಗಿದ ತಂಡ 20 ಓವರ್‌ಗಳಲ್ಲಿ 107 ರನ್‌ಗೆ ಆಲೌಟಾಯಿತು. ಕಮಿಂಡು ಮೆಂಡಿಸ್‌ 31 ರನ್‌ ಗಳಿಸಿದರು. ರಚಿನ್‌ ರವೀಂದ್ರ 4 ವಿಕೆಟ್‌ ಪಡೆದರು.

ಸ್ಕೋರ್‌: ನ್ಯೂಜಿಲೆಂಡ್‌ 20 ಓವರ್‌ನಲ್ಲಿ 168/7 (ಸ್ಯಾಂಟ್ನರ್‌ 47, ರಚಿನ್‌ 32, ಕೋಲೆ 31*, ತೀಕ್ಷಣ 3-30, ಚಮೀರ 3-38), ಶ್ರೀಲಂಕಾ 20 ಓವರ್‌ನಲ್ಲಿ 107/8 (ಕಮಿಂಡು 31, ರಚಿನ್‌ 27/4 ----)

2015 ಬಳಿಕ ಯಾವುದೇ ಐಸಿಸಿ ಟೂರ್ನಿಗಳಲ್ಲೂ ಸೆಮಿಗೆ ತಲುಪಿಲ್ಲ ಲಂಕಾ!

2014ರಲ್ಲಿ ಟಿ20 ವಿಶ್ವಕಪ್‌ ಗೆದ್ದಿದ್ದ ಶ್ರೀಲಂಕಾ, 2015ರ ಬಳಿಕ ಯಾವುದೇ ಐಸಿಸಿ ಟೂರ್ನಿಯಲ್ಲೂ ಸೆಮಿಫೈನಲ್‌ ತಲುಪಿಲ್ಲ. 2015ರ ಏಕದಿನ ವಿಶ್ವಕಪ್‌, 2016ರ ಟಿ20 ವಿಶ್ವಕಪ್‌, 2017ರ ಚಾಂಪಿಯನ್ಸ್‌ ಟ್ರೋಫಿ, 2019ರ ಏಕದಿನ ವಿಶ್ವಕಪ್‌, 2021, 2022ರ ಟಿ20 ವಿಶ್ವಕಪ್‌, 2023ರ ಏಕದಿನ ವಿಶ್ವಕಪ್‌, 2024ರ ಟಿ20 ವಿಶ್ವಕಪ್‌, 2025ರ ಚಾಂಪಿಯನ್ಸ್‌ ಟ್ರೋಫಿ ಹಾಗೂ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸೆಮೀಸ್‌ ತಲುಪಲು ವಿಫಲವಾಗಿದೆ.

ಕಿವೀಸ್‌ ಕೈನಲ್ಲಿ ಪಾಕ್‌ನ ಭವಿಷ್ಯ

ಕಿವೀಸ್‌ 2 ಪಂದ್ಯದಲ್ಲಿ 3 ಅಂಕ ಸಂಪಾದಿಸಿದೆ. ಕೊನೆ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಗೆದ್ದರೆ ಕಿವೀಸ್‌ ಸೆಮಿಫೈನಲ್‌ ತಲುಪಲಿದ್ದು, ಆಗ ಪಾಕ್‌ ಹೊರಬೀಳಲಿದೆ. ಒಂದು ವೇಳೆ ಕಿವೀಸ್‌ ತಂಡ ಇಂಗ್ಲೆಂಡ್‌ ವಿರುದ್ಧ ಸೋತರೆ ಮಾತ್ರ ಪಾಕ್‌ಗೆ ಅವಕಾಶವಿದೆ. ಕೊನೆ ಪಂದ್ಯದಲ್ಲಿ ಲಂಕಾವನ್ನು ದೊಡ್ಡ ಅಂತರದಲ್ಲಿ ಸೋಲಿಸಿ, ನೆಟ್‌ ರನ್‌ರೇಟ್‌ನಲ್ಲಿ ನ್ಯೂಜಿಲೆಂಡ್‌ನ ಹಿಂದಿಕ್ಕಿದರೆ ಮಾತ್ರ ಪಾಕ್‌ ಸೆಮೀಸ್‌ ತಲುಪಬಹುದು. ಪಾಕ್‌ 2 ಪಂದ್ಯದಲ್ಲಿ ಕೇವಲ 1 ಅಂಕ ಸಂಪಾದಿಸಿದೆ.