ಮಂಗಳೂರು(ಮಾ.25): ಕೊರೋನಾ ಮುಂಜಾಗ್ರತಾ ಕ್ರಮವಾಗಿ ಅಂತರ್‌ಜಿಲ್ಲಾ ಗಡಿ ಪ್ರದೇಶದಿಂದ ಪ್ರಯಾಣ ನಿಷೇಧದ ಹಿನ್ನೆಲೆಯಲ್ಲಿ ಚಾರ್ಮಾಡಿ ಚೆಕ್‌ಪೋಸ್ಟ್‌ ಬಳಿ ಲಾಕ್‌ಡೌನ್‌ ಮಾಡಲಾಗಿದ್ದು, ಅವಶ್ಯ ದಿನ ಬಳಕೆ ಸರಕು ಸಾಗಾಟ ವಾಹನಗಳಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ.

ಈಗಾಗಲೇ ತಾಲೂಕಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ತಾಲೂಕಿನಗೆ ಆಗಮಿಸುವ ವಾಹನಗಳ ಕುರಿತು ನಿಗಾ ವಹಿಸಲಾಗುತ್ತಿದೆ. ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಬರುವ ಚಾರ್ಮಾಡಿ ಬಳಿ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದ್ದು, ಇಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ ಹಾಗೂ ಧರ್ಮಸ್ಥಳ ಠಾಣೆಯ ಹೊರಠಾಣೆಯ ಚೆಕ್‌ಪೋಸ್ಟ್‌ ಕೂಡಾ ಇಲ್ಲಿದೆ.

'ಚಹಾಕ್ಕೆ ಬೆಲ್ಲ, ಅರಿಶಿಣ ಹಾಕಿ ಕುಡಿದ್ರೆ ಕೊರೋನಾ ಬರಲ್ಲ'..!

ಚಿಕ್ಕಮಗಳೂರು ಹಾಗೂ ದ.ಕ. ಈ ಎರಡು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿಯಲ್ಲಿ ಗಡಿ ಭಾಗದಲ್ಲಿ ಜಿಲ್ಲಾಡಳಿತದ ಆದೇಶದಂತೆ ಪೊಲೀಸರು ಲಾಕ್‌ಡೌನ್‌ ಚೆಕ್‌ಪೋಸ್ಟ್‌ ಮಾಡಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಅನಾರೋಗ್ಯ ಪೀಡಿತರು, ತರಕಾರಿ, ದಿನ ಬಳಕೆ ಸಾಮಗ್ರಿಗಳ ಹಾಗೂ ಪೊಲೀಸ್‌ ಇಲಾಖೆಯ ವಿಶೇಷ ಅನುಮತಿ ಪಡೆದ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಉಳಿದಂತೆ ಯಾರಿಗೂ ಈ ಭಾಗದ ರಸ್ತೆಯ ಮೂಲಕ ಸಂಚರಿಸಲು ಅವಕಾಶ ನೀಡುತ್ತಿಲ್ಲ. ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಸಂದೇಶ್‌ ಪಿ.ಜಿ. ಅವರ ನೇತೃತ್ವದಲ್ಲಿ ಧರ್ಮಸ್ಥಳ ಎಸ್‌ಐ ಒಡಿಯಪ್ಪ ಅವರ ತಂಡ ಈ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

'ಭಾನುವಾರ ಇಡೀ ದೇಶಕ್ಕೇ ಮದ್ದು ಸಿಂಪಡಿಸ್ತಾರಂತೆ ಮೋದಿ'..!

ಮಂಗಳವಾರ ಚಾರ್ಮಾಡಿ ಚೆಕ್‌ಪೋಸ್ಟ್‌ ಬಳಿ ಚಿಕ್ಕಮಗಳೂರು ಕಡೆಯಿಂದ ಬರುವ ವಾಹನಗಳೇ ಅಧಿಕವಾಗಿದ್ದವು. ಚಾರ್ಮಾಡಿ ಕಡೆಯಿಂದ ಆ ಕಡೆಗೆ ಹೋಗುವ ವಾಹನಗಳು ಇದ್ದವು. ರಾಜ್ಯಾದ್ಯಂತ ಕಟ್ಟೆಚ್ಚರ ಇದ್ದರೂ ಓಡಾಟ ನಡೆಸುವ ವಾಹನಗಳಿಗೆ ಬರ ಇರಲಿಲ್ಲ. ತಮ್ಮ ಕುಟುಂಬ ಸಮೇತ ಖಾಸಗಿ ವಾಹನಗಳಲ್ಲಿ ಓಡಾಟ ಮಾತ್ರ ಎಂದಿನಂತೆ ಇದ್ದವು.