ಮಂಗಳೂರು(ಮಾ.21): ಕೊರೋನಾ ವೈರಸ್‌ ನಾಶಪಡಿಸಲು ರಾತ್ರಿವೇಳೆ ರಾಸಾಯನಿಕಯುಕ್ತ ಔಷಧಿ ಸಿಂಪಡಿಸಲಾಗುತ್ತದೆ ಎನ್ನುವ ವದಂತಿ ಕುರಿತು ಅಧಿಕಾರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಈ ಸುಳ್ಳು ಸುದ್ದಿಯನ್ನು ಪಸರಿಸುತ್ತಿರುವುದು ಕಂಡುಬಂದಿದೆ.

ಇಂತಹ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದ್ದರೂ ಕಿಡಿಗೇಡಿಗಳು ಪಸರಿಸುತ್ತಿದ್ದಾರೆ. ಇನ್ನು ಕೊರೋನಾ ಕುರಿತು ತಪ್ಪುಮಾಹಿತಿ ನೀಡಿದ ಕೆಲವು ವೆಬ್‌ಸೈಟ್‌ಗಳ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ.

ಜನಸಂಚಾರ ವಿರಳ:

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಾಲ್‌, ಶಾಲೆ ಕಾಲೇಜುಗಳು, ಕಾರ್ಯಕ್ರಮಗಳೆಲ್ಲವೂ ಬಂದ್‌ ಆಗಿರವುದರಿಂದ ನಗರದಲ್ಲಿ ಜನಸಂಚಾರ ವಿರಳವಾಗಿತ್ತು. ಬ್ಯಾಂಕ್‌ಗಳು, ಬಸ್ಸು- ರೈಲು ನಿಲ್ದಾಣಗಳು, ಮಾರುಕಟ್ಟೆಪ್ರದೇಶಗಳಲ್ಲಿ ಜನರ ಸಂಖ್ಯೆ ಎಂದಿನಂತಿರಲಿಲ್ಲ.

ಸರ್ಕಾರಿ ಸೇವೆ ಸ್ಥಗಿತ: ತುರ್ತು ಸೇವೆಗೆ ಮಾತ್ರ ಅವಕಾಶ

ರಾಜ್ಯದಲ್ಲಿ ನಿರ್ಬಂಧ ಹೇರಿ ಒಂದು ವಾರ ಕಳೆದಿದ್ದು, ನಗರ ಸಂಪೂರ್ಣವಾಗಿ ಟ್ರಾಫಿಕ್‌ ಜ್ಯಾಂನಿಂದ ಮುಕ್ತವಾಗಿರುವುದು ಒಂದೆಡೆಯಾದರೆ ವ್ಯಾಪಾರ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಕುರಿತು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕಾರ್ಮಿಕರು ವಾಪಸ್‌ ಊರಿಗೆ ತೆರಳುತ್ತಿರುವುದರಿಂದ ಸರ್ಕಾರಿ, ಖಾಸಗಿ ಕಾರ್ಯಕ್ರಮಗಳಿಗೆ ಕಾರ್ಮಿಕರು ಸಿಗದೆ ವಿಳಂಬವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಮಾತ್ರವಲ್ಲದೆ, ಬಂದರು ಪ್ರದೇಶದಲ್ಲಿ ನಡೆಯುವ ಹೋಲ್‌ಸೇಲ್‌ ವ್ಯಾಪಾರದಲ್ಲೂ ಕುಸಿತವಾಗಿದೆ.