ಅಯ್ಯೋ, ಅಮೇರಿಕಾದ ಹೆಣ್ಣು ಹುಲಿಗೂ ತಗುಲಿತು ಕೊರೋನಾ!
ಕೊರೋನಾಗೆ ಅಕ್ಷರಶಃ ನಡುಗಿರುವ ಅಮೆರಿಕದಲ್ಲಿ ಮತ್ತೊಂದು ತಲೆನೋವು| ಮನುಷ್ಯರ ಬೆನ್ನಲ್ಲೇ ಹುಲಿಯಲ್ಲೂ ಕಾಣಿಸಿಕೊಂಡ ಕೊರೋನಾ ಸೋಂಕು| ಬ್ರಾಂಕ್ಸ್ ಮೃಗಾಲಯದಲ್ಲಿರುವ ಹೆಣ್ಣು ಹುಲಿಗೆಕೊರೋನಾ ಸೋಂಕು ತಗುಲಿರುವುದು ದೃಢ| ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ
ನ್ಯೂಯಾರ್ಕ್ (ಏಪ್ರಿಲ್ 06): ವಿಶ್ವದಾದ್ಯಂತ ಮನುಷ್ಯರಲ್ಲಿ ಆತಂಕ ಮೂಡಿಸಿರುವ ಕೊರೋನಾ ವೈರಸ್ ಸದ್ಯ ಪ್ರಾಣಿಗಳ ಮೇಲೂ ತನ್ನ ಪ್ರಹಾರ ಆರಂಭಿಸಿದೆ. ಹೌದು ಹಾಂಕಾಂಗ್‌ನಲ್ಲಿ ಎರಡು ನಾಯಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾದ ಬೆನ್ನಲ್ಲೇ, ಅಮೆರಿಕಾದ ನ್ಯೂಯಾರ್ಕ್‌ನಲ್ಲಿರುವ ಬ್ರಾಂಕ್ಸ್ ಮೃಗಾಲಯದಲ್ಲಿರುವ ಹುಲಿಯಲ್ಲೂ ಈ ವೈರಸ್ ಪತ್ತೆಯಾಗಿದೆ. ಈ ವಿಚಾರ ಈಗಾಗಲೇ ಕೊರೋನಾ ಪ್ರಕೋಪಕ್ಕೆ ನಲುಗುತ್ತಿರುವ ಅಮೆರಿಕಾಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆ ಮಾರ್ಚ್ 16ರಿಂದ ಬ್ರಾಂಕ್ಸ್ ಮೃಗಾಲಯದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
"
ಈ ಸಂಬಂಧ ಪ್ರತಿಕ್ರಿಯಿಸಿರುವ ನ್ಯೂಯಾರ್ಕ್‌ನ ಬ್ರಾಂಕ್ಸ್ ಮೃಗಾಲಯದ ಅಧಿಕಾರಿಗಳು 'ಇಲ್ಲಿರುವ ಹುಲಿಯೊಂದನ್ನು ಪರೀಕ್ಷಿಸಲಾಗಿದ್ದು, ವರದಿಯಲ್ಲಿ ಹುಲಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢವಾಗಿದೆ. ಹುಲಿಗಳ ಪಾಲನೆ ಪೋಷಣೆ ಮಾಡುವಾತನಿಂದ ಈ ಸೋಂಕು ಹುಲಿಗೆ ತಗುಲಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಪ್ರಕಟಣೆಯೊಂದನ್ನೂ ಹೊರಡಿಸಲಾಗಿದ್ದು, 'ಬ್ರಾಂಕ್ಸ್ ಮೃಗಾಲಯದ ನಾಡಿಯಾ ಎಂಬ 4 ವರ್ಷದ ಹುಲಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಆಕೆಯನ್ನು ಹೊರತುಪಡಿಸಿ ಇನ್ನೂ ಮೂರು ಹುಲಿ ಮತ್ತು ಮೂರು ಆಫ್ರಿಕನ್ ಸಿಂಹಗಳು ಕೂಡಾ ಒಣ ಕೆಮ್ಮಿನಿಂದ ಬಳಲುತ್ತಿವೆ. ಇವೆಲ್ಲವೂ ಶೀಘ್ರದಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ' ಎಂದು ಪ್ರಾಣಿ ಸಂಗ್ರಹಾಲಯದ ವನ್ಯಜೀವಿ ಸಂರಕ್ಷಣಾ ಸೊಸೈಟಿ ತಿಳಿಸಿದೆ.
ಕೊರೋನಾ ತಾಂಡವ: ಭಾರತದ ಸಹಾಯ ಯಾಚಿಸಿದ ವಿಶ್ವದ ದೊಡ್ಡಣ್ಣ!
ಇನ್ನು 'ಮೃಗಾಲಯದಲ್ಲಿರುವ ಹುಲಿ ಹಾಗೂ ಸಿಂಹಗಳ ಮೇಲೆ ಹೆಚ್ಚಿನ ನಿಗಾ ವಹಿಸುತ್ತೇವೆ. ವಿಶೇಷ ಆರೈಕೆ ಮಾಡುತ್ತೇವೆ ಹೀಗಿದ್ದರೂ ಪ್ರಾಣಿಗಳಲ್ಲಿ ಈ ಮಾರಕ ಈ ಕಾಣಿಸಿಕೊಂಡಿದ್ದು, ಇದು ಯಾವ ಪರಿಣಾಮ ಬೀರುತ್ತದೆ ಎಂಬ ಕುರಿತು ಯಾವುದೇ ಮಾಹಿತಿ ಇಲ್ಲ. ಸದ್ಯಕ್ಕೆ ಝೂನಲ್ಲಿ ಇತರೆ ಯಾವುದೇ ಪ್ರಾಣಿಗಳಲ್ಲಿ ಕೊರೋನಾ ಲಕ್ಷಣ ಕಾಣಿಸಿಲ್ಲ. ಅನಾರೋಗ್ಯಕ್ಕೀಡಾಗಿರೋ ಹುಲಿ ಹಾಗೂ ಸಿಂಹಗಳಿಗೆ ಚಿಕಿತ್ಸೆ ಕೊಟ್ಟು ನಿಗಾ ವಹಿಸಲಾಗುತ್ತಿದ್ದು, ಹುಲಿ ಸಂಪೂರ್ಣ ಗುಣಮುಖವಾಗುವ ನಿರೀಕ್ಷೆ ಇದೆ. ಇವುಗಳಿಗೆ ಚಿಕಿತ್ಸೆ ನೀಡಲೆಂದೆ ವಿಶೇಷ ತಂಡ ಇದೆ' ಎಂದೂ ಈ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲಿದೆ ಈ ಬ್ರಾಂಕ್ಡ್ ಮೃಗಾಲಯ?
ನ್ಯಾಯಾರ್ಕ್‌ನ ಹಾರ್ಡ್‌ವುಡ್ ಅರಣ್ಯದಲ್ಲಿರುವ ಬ್ರಾಂಕ್ಸ್‌ನ 265 ಎಕರೆ ಪ್ರದೇಶ ವಿಸ್ತೀರ್ಣದಲ್ಲಿ ಈ ವನ್ಯಜೀವಿ ಮೃಗಾಲಯವಿದೆ. 1899ರ ನವೆಂಬರ್ 8 ರಂದು ಆರಂಭಗೊಂಡ ಪ್ರಾಣಿ ಸಾಕಾಣಿಕೆ, ಪಶುವೈದ್ಯಕೀಯ ಆರೈಕೆ, ಶಿಕ್ಷಣ, ವಿಜ್ಞಾನ ಮತ್ತು ಸಂರಕ್ಷಣೆಗಾಗಿ ವಿಶ್ವ ಪ್ರಸಿದ್ಧವಾಗಿದೆ.
ಕೊರೋನಾ ತಾಂಡವ: ಅಮೆರಿಕದಲ್ಲಿ ಒಂದೇ ದಿನ ಸಾವಿರಕ್ಕೂ ಅಧಿಕ ಮಂದಿ ಸಾವು!
ಅಮೆರಿಕದಲ್ಲಿ ಕೊರೋನಾ ಅಟ್ಟಹಾಸ
ವಿಶ್ವದ ದೊಡ್ಡಣ್ಣ ಎಂದೇ ಕರೆಯಲಾಗುವ ಅಮೆರಿಕ ಸದ್ಯ ಕೊರೋನಾ ಪ್ರಕೋಪಕ್ಕೆ ಅಕ್ಷರಶಃ ನಡುಗಿದೆ. ನ್ಯೂಯಾರ್ಕ್ನಲ್ಲೇ ಬರೋಬ್ಬರಿ 1,23,160 ಮಂದಿಗೆ ಸೋಂಕು ತಗುಲಿದ್ದು, 4159 ಜನರು ಸಾವನ್ನಪ್ಪಿದ್ದಾರೆ. ನ್ಯೂಜರ್ಸಿಯಲ್ಲಿ 37,505 ಜನರಿಗೆ ಕೊರೋನಾ ಸೋಂಕು ಹರಡಿದ್ದು, 917 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮಿಚಿಗನ್ನಲ್ಲಿ 15,718 ಜನರಿಗೆ ಕೊರೋನಾ ತಗುಲಿದ್ದು, 617 ಜನರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 15,151 ಪ್ರಕರಣಗಳು ಪತ್ತೆಯಾದರೆ 349 ಮಂದಿ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಪ್ರಾಣಿಗಳಲ್ಲೂ ಈ ಸೋಂಕು ಕಾಣಿಸಿಕೊಂಡಿರುವುದು ಮತ್ತಷ್ಟು ಆಘಾತ ಉಂಟು ಮಾಡಿದೆ.
"