ಕೊರೋನಾ ತಾಂಡವ: ಅಮೆರಿಕದಲ್ಲಿ ಒಂದೇ ದಿನ ಸಾವಿರಕ್ಕೂ ಅಧಿಕ ಮಂದಿ ಸಾವು!
ಕೊರೋನಾ ತಾಂಡವಕ್ಕೆ ಅಕ್ಷರಶಃ ನಲುಗಿ ಹೋಗಿರುವ ಅಮೆರಿಕ| ಈ ಸೋಂಕಿಗೆ 24 ಗಂಟೆಯೊಳಗೆ 1500 ಮಂದಿ ಬಲಿ| 10 ವಾರಗಳ ಲಾಕ್‌ಡೌನ್ ಘೋಷಿಸಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಅಮೆರಿಕ ಸರ್ಕಾರಕ್ಕೆ ಸಲಹೆ
ವಾಷಿಂಗ್ಟನ್(ಏ.04): ಕೊರೋನಾ ತಾಂಡವಕ್ಕೆ ಅಕ್ಷರಶಃ ನಲುಗಿ ಹೋಗಿರುವ ಅಮೆರಿಕದಲ್ಲಿ ಗುರುವಾರ ಒಂದೇ ದಿನ ಸುಮಾರು 30 ಸಾವಿರ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೆ, ಈ ಸೋಂಕಿಗೆ 24 ಗಂಟೆಯೊಳಗೆ 1500 ಮಂದಿ ಬಲಿಯಾಗಿದ್ದಾರೆ. ಇದು ಈವರೆಗೆ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಸಂಖ್ಯೆಯ ಸೋಂಕಿತರ ಸಂಖ್ಯೆಯಾಗಿದೆ.
ಮುಂದಿನ 2 ವಾರ ಅಮೆರಿಕಕ್ಕೆ ನರಕಸದೃಶ ಸಾಧ್ಯತೆ!
ಇನ್ನು ಶುಕ್ರವಾರ ಕೂಡಾ 15000ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು, 500ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 2.56 ಲಕ್ಷಕ್ಕೆ ತಲುಪಿದೆ. ಸಾವಿನ ಸಂಖ್ಯೆ 6500 ದಾಟಿದೆ
10 ವಾರ ಲಾಕ್‌ಡೌನ್: ಟ್ರಂಪ್‌ಗೆ ಗೇಟ್ಸ್ ಸಲಹೆ
ಅಮೆರಿಕದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಸೋಂಕು ನಿಗ್ರಹಕ್ಕಾಗಿ ದೇಶವ್ಯಾಪಿ 10 ವಾರಗಳ ಲಾಕ್‌ಡೌನ್ ಘೋಷಿಸಬೇಕು ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಅಮೆರಿಕ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಅಮೆರಿಕದಲ್ಲಿ ಪ್ರತಿ ಎರಡೂವರೆ ನಿಮಿಷಕ್ಕೊಂದು ಸಾವು: ವುಹಾನ್ ಹಿಂದಿಕ್ಕಿದ ನ್ಯೂಯಾರ್ಕ್!
‘ಸೋಂಕು ವ್ಯಾಪಿಸದಂತೆ ತಡೆಯಲು ಶಟ್‌ಡೌನ್ ಮಾಡುವಂತೆ ಸಲಹೆ ನೀಡಿದ್ದರೂ, ಬಹುತೇಕ ರಾಜ್ಯಗಳಲ್ಲಿ ಅದಿನ್ನೂ ಜಾರಿಗೆ ಬಂದಿಲ್ಲ. ಹಲವು ರಾಜ್ಯಗಳಲಿ ಈಗಲೇ ಬೀಚ್‌ಗಳು ತೆರೆದಿವೆ. ರೆಸ್ಟೋರೆಂಟ್‌ಗಳಲ್ಲಿ ಈಗಲೂ ಕುಳಿತು ಊಟ ಮಾಡುವ ವ್ಯವಸ್ಥೆ ಮುಂದುವರೆದಿದೆ. ಇವೆಲ್ಲವೂ ಮತ್ತಷ್ಟು ಅನಾಹುತಕ್ಕೆ ಹೇಳಿ ಮಾಡಿಸಿದ ವಿಷಯಗಳು. ಹೀಗಾಗಿ ಸರ್ಕಾರ ಕೂಡಲೇ ದೇಶವ್ಯಾಪಿ 10 ವಾರಗಳ ಕಾಲ ಲಾಕ್‌ಡೌನ್ ಘೋಷಿಸಬೇಕು. ಈ ಹಂತದಲ್ಲೇನಾದರೂ ಆರ್ಥಿಕ ನಷ್ಟದ ವಿಷಯ ಮುಂದಿಟ್ಟುಕೊಂಡು ಗೊಂದಲ ಮಾಡಿಕೊಂಡರೆ, ಅದು ಆರ್ಥಿಕ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತದೆ ಎಂದು ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ಸಂಪಾದಕೀಯ ಲೇಖನದಲ್ಲಿ ಬಿಲ್‌ಗೇಟ್ಸ್ ಬರೆದುಕೊಂಡಿದ್ದಾರೆ.
"