ಬೆಂಗಳೂರು(ಮಾ.25): ಕೊರೋನಾ ವೈರಸ್‌ ಹರಡದಂತೆ ಸರ್ಕಾರ ಲಾಕ್‌ ಡೌನ್‌ ಆದೇಶಿಸಿರುವ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು ಹಾಗೂ ಹೂವು, ಬೇಳೆ-ಕಾಳುಗಳ ಬೆಲೆ ಮಂಗಳವಾರ ಏರಿಳಿತ ಕಂಡಿತು. ಮುಂಜಾನೆ ಇದ್ದ ಬೆಲೆ ಮಧ್ಯಾಹ್ನ ಹಾಗೂ ಸಂಜೆ ಹೊತ್ತಿಗೆ ಸಂಪೂರ್ಣವಾಗಿ ಇಳಿಕೆಯಾಯಿತು.

ಯುಗಾದಿ ಹಬ್ಬಕ್ಕೆ ತರಕಾರಿ, ಹಣ್ಣು ಸೇರಿದಂತೆ ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗಿದೆ. ಆದರೆ, ಮುಂಜಾನೆ ಮುಗಿಬಿದ್ದು ಖರೀದಿಸಿದ ಜನರು ಸಂಜೆ ವೇಳೆಗೆ ಮಾರುಕಟ್ಟೆಗೆ ಸುಳಿದಿಲ್ಲ. ಇದರಿಂದ ತರಕಾರಿ, ಹಣ್ಣು, ಹೂವು ಕೇಳುವವರಿಲ್ಲದೆ ಬೆಲೆ ಕುಸಿತವಾಯಿತು.

ಕೇರಳ, ಮಹಾರಾಷ್ಟ್ರ: 100ರ ಗಡಿ ದಾಟಿದ ಸೋಂಕಿತರು!

ಸೋಮವಾರ ಮಾರುಕಟ್ಟೆಯಲ್ಲಿ ತರಕಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟವಾಗಿದ್ದವು. ತರಕಾರಿ ಪೂರೈಕೆ ಪ್ರಮಾಣದಲ್ಲೂ ಕಡಿಮೆಯಾಗಿ ಬೆಲೆ ಏರಿಕೆಯಾಗಿತ್ತು. ಬಂದ್‌ ಮುಂದುವರೆಯಬಹುದು ಎಂಬ ಭಯದಲ್ಲಿ ಪದಾರ್ಥಗಳನ್ನು ಜನರು ಖರೀದಿಸಿದ್ದರು. ಹಬ್ಬದ ಮುನ್ನಾ ದಿನವಾದ ಮಂಗಳವಾರ ಮುಂಜಾನೆಯೂ ತರಕಾರಿ, ಹಣ್ಣು, ಹೂವು, ದಿನಸಿ ವ್ಯಾಪಾರವಾಗಿತ್ತು. ಆದರೆ, ಸಂಜೆ ವೇಳೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿ ಬೆಲೆ ದಿಢೀರನೆ ಇಳಿಕೆಯಾಗಿದೆ.

200 ಗಡಿ ದಾಟಿದ್ದ ಬೆಲೆ:

ಸೌತೇಕಾಯಿ, ಬೀನ್ಸ್‌, ಬಟಾಣೆ, ಕ್ಯಾರೆಟ್‌, ಬೆಳ್ಳುಳ್ಳಿ, ಶುಂಠಿ ದರ ಏಕಾಏಕಿ ಏರಿಕೆಯಾಗಿತ್ತು. ಕೆ.ಜಿ. 40-50 ರು. ಒಳಗೆ ದೊರೆಯುತ್ತಿದ್ದ ಕೆಲ ತರಕಾರಿಗಳ ಬೆಲೆ 200ರ ಗಡಿ ದಾಟಿತ್ತು ಎಂದು ಸಗಟು ಹಾಗೂ ಚಿಲ್ಲರೆ ವ್ಯಾಪಾರಿ ಜಯನಗದ ದೇವಿಗನ್‌ ಹೇಳಿದರು. ಬೆಳಗ್ಗೆ ಬಟಾಣೆ ಕೆಜಿಗೆ 300 ರು. ಇದ್ದದ್ದು ಸಂಜೆ ಹೊತ್ತಿಗೆ 100, ಅದೇ ರೀತಿ ಬೀನ್ಸ್‌ 120-130 ಇದ್ದದ್ದು ಸಂಜೆ ವೇಳೆಗೆ 25-30 ರು.ಗೆ ಕುಸಿಯಿತು
ಇತ್ತೀಚೆಗೆ ಬೇಳೆ ಕಾಳುಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ. ಇದರಿಂದ ಶೇ.10ರಿಂದ 30ರಷ್ಟುಬೆಲೆ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಪದಾರ್ಥಗಳು ಸಿಗದಿರಬಹುದು ಎಂಬ ಭಯ ಜನರಲ್ಲಿದೆ. ಜತೆಗೆ ಹಬ್ಬವೂ ಇರುವುದರಿಂದ ಬೆಲೆ ಹೆಚ್ಚಿದ್ದರೂ ಜನರು ಕೊಳ್ಳುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದರು.

ಕೊರೋನಾ ಎಫೆಕ್ಟ್: ಬೆಂಗಳೂರಲ್ಲಿ ಮರುಕಳಿಸಿದ 30 ವರ್ಷಗಳ ಹಿಂದಿನ ಹವಾಗುಣ!

ಹಣ್ಣುಗಳ ಬೆಲೆ ಇಳಿಕೆ:

ಸಗಟು ಮಾರುಕಟ್ಟೆಯಲ್ಲಿ ವಿವಿಧ ಹಣ್ಣುಗಳ ಬೆಲೆ ಇಳಿಕೆಯಾಗಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯ ದರ ಸ್ವಲ್ಪ ಹೆಚ್ಚಿದೆ. ಮಾರುಕಟ್ಟೆ ಈ ಹಿಂದಿನಂತೆ ಹಣ್ಣುಗಳು ಪೂರೈಕೆಯಾಗುತ್ತಿಲ್ಲ. ಲಾಕ್‌ಡೌನ್‌ನಿಂದಾಗಿ ಸಗಟು ಮಾರುಕಟ್ಟೆಗಳಲ್ಲಿ ಹಣ್ಣುಗಳು ತುಂಬಿದ ಗಾಡಿಗಳು ನಿಂತಿವೆ. ಇದರಿಂದ ವ್ಯಾಪಾರ ಸಂಪೂರ್ಣವಾಗಿ ಕುಸಿತವಾಗಿದೆ. ವಿದೇಶಿ ಹಣ್ಣುಗಳನ್ನು ಕೊಳ್ಳುವವರಿಲ್ಲ. ಪ್ರತಿದಿನ 30 ಗಾಡಿಗಳಲ್ಲಿ ಹಣ್ಣು ಸರಬರಾಜಾಗುತ್ತದೆ. ಆದರೆ, ಇದೀಗ ಬಂದ್‌ ಇರುವುದರಿಂದ ಹಣ್ಣುಗಳು ಬೇರೆ ಜಿಲ್ಲೆ, ರಾಜ್ಯಗಳಿಗೂ ಪೂರೈಕೆಯಾಗುತ್ತಿಲ್ಲ ಎಂದು ಫಾತಿಮಾ ಫ್ರೂಟ್ಸ್ ಸೆಂಟರ್‌ನ ಮಾಲೀಕರಾದ ಮೆಹಬೂಬ್‌ ಮಾಹಿತಿ ನೀಡಿದ್ದಾರೆ.