ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?
ರಾಜ್ಯದಲ್ಲಿ ಪ್ರತಿದಿನ 1 ಲಕ್ಷ ಕೊರೋನಾ ಪರೀಕ್ಷೆ| ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಏರುತ್ತಲೇ ಇವೆ| ಕೋವಿಡ್ ಟೆಸ್ಟ್ ಹೆಚ್ಚಳ ಮಾಡಲು ಸಲಹೆ ನೀಡಿದ ತಾಂತ್ರಿಕ ಸಲಹಾ ಸಮಿತಿ| ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ಪೂಲಿಂಗ್ ಟೆಸ್ಟ್‌ಗೆ ಸೂಚನೆ|
ಬೆಂಗಳೂರು(ಏ.05): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಜನರು ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಕೋವಿಡ್ ಟೆಸ್ಟಿಂಗ್ ಹೆಚ್ಚಿಸಲು ಆರೋಗ್ಯ ಇಲಾಖೆ ಪೂಲಿಂಗ್ ಟೆಸ್ಟ್ ಮೊರೆ ಹೋಗಿದೆ.
ILI ಹಾಗೂ SARI ಕೇಸ್‌ಗಳನ್ನ ಹೊರತು ಪಡಿಸಿ ಉಳಿದ ಸ್ಯಾಂಪಲ್‌ಗಳ ಪೂಲಿಂಗ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈಗಾಗಲೇ ರಾಜ್ಯದಲ್ಲಿ ಪ್ರತಿದಿನ 1 ಲಕ್ಷ ಕೊರೋನಾ ಪರೀಕ್ಷೆಗಳನ್ನ ಮಾಡಲಾಗುತ್ತಿದೆ. ಆದರೂ ಕೂಡ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಏರುತ್ತಲೇ ಇವೆ. ಹೀಗಾಗಿ ತಾಂತ್ರಿಕ ಸಲಹಾ ಸಮಿತಿ ಕೋವಿಡ್ ಟೆಸ್ಟ್ ಹೆಚ್ಚಳ ಮಾಡಲು ಸಲಹೆ ನೀಡಿದೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ಪೂಲಿಂಗ್ ಟೆಸ್ಟ್ ಮಾಡಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಏ.20ರ ವೇಳೆಗೆ ಬೆಂಗ್ಳೂರಲ್ಲಿ ನಿತ್ಯ 6500+ ಕೊರೋನಾ ಕೇಸ್..!
ಏನಿದು ಪೂಲಿಂಗ್ ಟೆಸ್ಟ್..?
ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನರ ರಿಪೋರ್ಟ್‌ಗಾಗಿ ಪೂಲಿಂಗ್ ಟೆಸ್ಟ್ ಮಾಡಲಾಗತ್ತದೆ. ಸಮಯ ಉಳಿತಾಯದ ಜೊತೆಗೆ ಹೆಚ್ಚು ಜನರ ಪರೀಕ್ಷಿಸಲು ಪೋಲಿಂಗ್ ಟೆಸ್ಟ್ ಸಹಕಾರಿಯಾಗಿದೆ. ಅಂದರೆ ಒಂದು ಮನೆಯಲ್ಲಿ 5 ಸದಸ್ಯರು ಇದ್ದರೆ ಅವರೆಲ್ಲರ ಸ್ಯಾಂಪಲ್ಸ್‌ಗಳನ್ನ ಸಂಗ್ರಹಿಸಲಾಗತ್ತದೆ. ಪರೀಕ್ಷೆಯ ವೇಳೆ ಎಲ್ಲ ಸ್ಯಾಂಪಲ್ಸ್‌ಗಳನ್ನ ಮಿಕ್ಸ್ ಮಾಡಿ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಟೆಸ್ಟ್ ವೇಳೆ ನೆಗಟಿವ್ ಬಂದರೆ ಆ ಐದು ಜನರ ವರದಿ ನೆಗಟಿವ್ ಎಂದು ನೀಡಲಾಗುತ್ತದೆ. ಒಂದು ವೇಳೆ ಪಾಸಿಟಿವ್ ಬಂದರೆ, ಪುನಃ ಪ್ರತ್ಯೇಕವಾಗಿ ಎಲ್ಲರ ಸ್ಯಾಂಪಲ್‌ಗಳನ್ನ ಪರೀಕ್ಷೆ ಮಾಡಲಾಗುತ್ತದೆ. ಈ ರೀತಿ ಮಾಡುವುದರಿಂದ ಸಮಯ ಉಳಿತಾಯದ ಜೊತೆಗೆ ಹೆಚ್ಚು ಜನರ ಕೋವಿಡ್ ಪರೀಕ್ಷೆ ಮಾಡಲು ಸಹಾಯವಾಗುತ್ತದೆ. ಆದರೆ SARI ಮತ್ತು ILI ಲಕ್ಷಣಗಳಿದ್ದರೆ RT-PCR ಪರೀಕ್ಷೆ ಕಡ್ಡಾಯವಾಗಿರುತ್ತದೆ.