ಮುಂಬೈ/ತಿರುವನಂತಪುರ(ಮಾ.25): ದೇಶಾದ್ಯಂತ ಕೊರೋನಾ ತಡೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಹೊರತಾಗಿಯೂ, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 100ರ ಗಡಿ ದಾಟಿದೆ.

ಮಹಾರಾಷ್ಟ್ರದಲ್ಲಿ ಮಂಗಳವಾರ ಒಂದೇ ದಿನ 10 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ತನ್ಮೂಲಕ ಸೋಮವಾರ 97 ಕೊರೋನಾ ಪೀಡಿತರಿದ್ದ ಸಂಖ್ಯೆ ಮಂಗಳವಾರ 107ಕ್ಕೆ ಜಿಗಿದಿದೆ. ರಾಜ್ಯದಲ್ಲಿ 12 ಮಂದಿ ಕೊರೋನಾದಿಂದ ಗುಣವಾಗಿದ್ದಾರೆ.

ಇನ್ನು ಕೇರಳದಲ್ಲಿ ಮಂಗಳವಾರ 14 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾ ಪೀಡಿತರ ಸಂಖ್ಯೆ 105ಕ್ಕೆ ಜಿಗಿದಿದೆ.

ಕೇರಳದಲ್ಲಿ 72 ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, 467 ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಲಾಗಿದೆ.