ಎನ್‌.ಎಲ್‌. ಶಿವಮಾದು

ಬೆಂಗಳೂರು(ಮಾ.25): ಕೊರೋನಾ ಪರಿಣಾಮ ಇಡೀ ನಗರ ಸ್ತಬ್ಧವಾಗಿರುವುದರಿಂದ ಮಾಲಿನ್ಯ ಪ್ರಮಾಣ ಕೂಡ ದಾಖಲೆ ಮಟ್ಟದಲ್ಲಿ ಇಳಿಮುಖವಾಗಿದೆ. ಅಷ್ಟೇ ಅಲ್ಲ ಮೂರು ದಶಕಗಳ ಹಿಂದಿನ ಹವಾಗುಣ ಬೆಂಗಳೂರಿಗೆ ಮತ್ತೆ ಪ್ರಾಪ್ತಿಯಾಗಿದೆ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಖಾಸಗಿ ವಾಹನಗಳು ಸೇರಿದಂತೆ ಇಡೀ ವಾಹನಗಳು ಮಾತ್ರವಲ್ಲ, ವ್ಯಾಪಾರ ವಹಿವಾಟು, ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಆಗಿವೆ. ಹಾದಿ ಬೀದಿಗಳಲ್ಲಿಯೂ ವಾಹನ ಸಂಚಾರ ಸ್ಥಗಿತವಾಗಿರುವ ಜೊತೆಗೆ ಕೈಗಾರಿಕೆಗಳು ಬಂದ್‌ ಆಗಿರುವುದರಿಂದ ಮಾಲಿನ್ಯ ಪ್ರಮಾಣ ಇಳಿಮುಖವಾಗಿದ್ದು, 90ರ ದಶಕದಲ್ಲಿ ಇದ್ದ ಹವಾಗುಣ ಹಿಂತಿರುಗಿದೆ.

ಮಾಧ್ಯಮಗಳಿಗೆ ತೊಂದರೆ ಆಗದಂತೆ ನೋಡ್ಕೊಳ್ಳಿ, ನಿಮಗಾಗಿ ದುಡಿಯುತ್ತಿದ್ದಾರೆ: ಮೋದಿ ಶ್ಲಾಘನೆ!

ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ವಾಯು ಗುಣಮಟ್ಟ ಸೂಚ್ಯಂಕ ಮಾ.9ರಿಂದ 22ರ ಅವಧಿಯಲ್ಲಿ ಸರಾಸರಿ ಶೇ.50ರಷ್ಟು ಕುಸಿದಿದೆ. ಮಾ.9ರಂದು ಗರಿಷ್ಠ 115 ರಿಂದ ಕನಿಷ್ಠ 70ರ ನಡುವಿದ್ದ ಮಾಲಿನ್ಯ ಪ್ರಮಾಣ, ಮಾ.22ರಂದು ಗರಿಷ್ಠ 65ರಿಂದ ಕನಿಷ್ಠ 35ಕ್ಕೆ ಕುಸಿದಿದೆ. ಈ ಲೆಕ್ಕದ ಪ್ರಕಾರ ನಗರದ ಮಾಲಿನ್ಯ ಅರ್ಧಕ್ಕರ್ಧ ಕುಸಿದಿದೆ. ವಾಹನಗಳ ಎಂಜಿನ್‌ಗಳಿಂದ ಉಗುಳುವ ಹೊಗೆ ಹಾಗೂ ವಾಹನ ಸಂಚರಿಸುವಾಗ ಉಂಟಾಗುವ ಧೂಳಿನ ಕಣಗಳಿಂದ ಮಾಲಿನ್ಯ ಪ್ರಮಾಣ ಸಂಪೂರ್ಣ ಇಲ್ಲದಿರುವುದರಿಂದ ವಾತಾವರಣದಲ್ಲಿನ ಇಂಗಾಲ, ಧೂಳಿನ ಕಣಗಳ ಪ್ರಮಾಣ (ಪಿಎಂ 2.5, 10) ಕಡಿಮೆಯಾಗಿದೆ. ಇದರ ಜೊತೆಗೆ ಮಾ.20ರಂದು ನಗರದಲ್ಲಿ ಮಳೆ ಸುರಿದ ಕಾರಣದಿಂದಲೂ ಮಾಲಿನ್ಯ ಪ್ರಮಾಣ ಸಂಪೂರ್ಣವಾಗಿ ಸ್ವಚ್ಛಂದ ಗಾಳಿ ಬೀಸುತ್ತಿದೆ.

ಈ ಕುರಿತು ಮಾತನಾಡಿದ ಮಾಲಿನ್ಯ ನಿಯಂತ್ರಣ ಮಂಡಳಿ ನಿವೃತ್ತ ಪರಿಸರ ಅಧಿಕಾರಿ ನಾಗಪ್ಪ, ನನ್ನ ವೃತ್ತಿ ಜೀವನದಲ್ಲಿಯೇ ಇಂತಹದೊಂದು ಪರಿಸ್ಥಿತಿ ಕಂಡಿರಲಿಲ್ಲ. ಮಾಲಿನ್ಯ ಪ್ರಮಾಣ ಕೂಡ ಇಷ್ಟು ಇಳಿಮುಖವಾಗಿರಲಿಲ್ಲ. ನನ್ನ 35 ವರ್ಷಗಳ ವೃತ್ತಿಯಲ್ಲಿ ಇಷ್ಟು ಕಡಿಮೆ ಮಟ್ಟಕ್ಕೆ ಕುಸಿದ ಉದಾಹರಣೆಗಳಿಲ್ಲ. ಇದೀಗ ಕೊರೋನಾದಿಂದ ಸಂಪೂರ್ಣವಾಗಿ ಎಲ್ಲಾ ರೀತಿಯ ವಹಿವಾಟುಗಳು, ಸಂಚಾರ ಕ್ಷೀಣಿಸಿರುವುದರಿಂದ ಮಾಲಿನ್ಯವೂ ಕಡಿಮೆಯಾಗಿದೆ ಎನ್ನುತ್ತಾರೆ.

ಮಾ.22ರ ಮಾಲಿನ್ಯ ಪ್ರಮಾಣ:

ನಗರದ ಮಾಲಿನ್ಯ ಪ್ರಮಾಣದಲ್ಲಿ ಅತಿ ಹೆಚ್ಚು ಪ್ರಮಾಣ ಇರುವ ಸಿಟಿ ರೈಲ್ವೆ ನಿಲ್ದಾಣ, ಸಿಲ್ಕ್ ಬೋರ್ಡ್‌ಗಳಲ್ಲಿ ಕೂಡ ನಿರೀಕ್ಷೆಗೂ ಮೀರಿ ಕಡಿಮೆಯಾಗಿದೆ. ಸಿಟಿ ರೈಲ್ವೆ ನಿಲ್ದಾಣದಲ್ಲಿ ಮಾ.9 ಮತ್ತು ಮಾ.22ರ ಮಾಲಿನ್ಯ ಪ್ರಮಾಣ 115ರಿಂದ 66ಕ್ಕೆ ಕುಸಿದಿದೆ. ಹೆಬ್ಬಾಳ (ಪಶು ವೈದ್ಯಕೀಯ)ದಲ್ಲಿ 86ರಿಂದ 40, ಹೊಸೂರು ರಸ್ತೆ (ನಿಮ್ಹಾನ್ಸ್‌) ಬಳಿ 90ರಿಂದ 40ಕ್ಕೆ, ಮೈಸೂರು ರಸ್ತೆ (ಕವಿಕ)ಯಲ್ಲಿ 89ರಿಂದ 35ಕ್ಕೆ, ಸಿಲ್ಕ್  ಬೋರ್ಡ್‌ 87ರಿಂದ 41, ಜಯನಗರದ (ಶಾಲಿನಿ ಮೈದಾನ)ದಲ್ಲಿ 78ರಿಂದ 35, ಸಾಣೆಗುರುವನಹಳ್ಳಿಯಲ್ಲಿ 70ರಿಂದ 45ಕ್ಕೆ ಕುಸಿದಿದೆ.

21 ದಿವಸ ಇಡೀ ದೇಶವೇ ಲಾಕ್‌ ಡೌನ್: ಏನು ಸಿಗುತ್ತೆ? ಏನು ಸಿಗೋಲ್ಲ?

ಸಾಮಾನ್ಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯು ವಾಯು ಗುಣಮಟ್ಟ ಸೂಚ್ಯಂಕದ ಪ್ರಮಾಣ 0-50ರ ವರೆಗೆ ಗುಣಮಟ್ಟದ ಗಾಳಿ, 51-100ರ ವರೆಗೆ ಸಮಾಧಾನಕರ ಎಂದು ಪರಿಗಣಿಸಲಾಗುತ್ತಿದೆ. 50ಕ್ಕಿಂತ ಕಡಿಮೆ ವಾಯು ಗುಣಮಟ್ಟಸೂಚ್ಯಂಕ ಇರುವುದರಿಂದ ನಗರದ ಗಾಳಿ ಆಹ್ಲಾದಕರವಾಗಿದೆ ಎನ್ನುತ್ತಾರೆ.

ಮಾಪನ ಸ್ಥಳ ವಾಯು ಗುಣಮಟ್ಟಸೂಚ್ಯಂಕ

ಮಾ.9 ಮಾ.22
ನಗರ ರೈಲ್ವೆ ನಿಲ್ದಾಣ 115 66
ಸಾಣೆಗುರುವನಹಳ್ಳಿ 70 45
ಸಿಲ್ಕ್ ಬೋರ್ಡ್‌ 87 41
ಹೆಬ್ಬಾಳ 86 40
ನಿಮ್ಹಾನ್ಸ್‌ 90 40
ಮೈಸೂರು ರಸ್ತೆ 89 35
ಜಯನಗರ 78 35

ನಗರದಲ್ಲಿ ವಾಹನಗಳು, ಕೈಗಾರಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿರುವುದರಿಂದ ಮತ್ತು ಮಾ.20ರಂದು ಮಳೆ ಸುರಿದಿದ್ದರಿಂದ ಮಾಲಿನ್ಯ ಪ್ರಮಾಣ ಅರ್ಧಕ್ಕರ್ಧ ಕಡಿಮೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರಮಾಣಕ್ಕೆ ಕುಸಿದಿರುವ ಉದಾಹರಣೆಗಳಿಲ್ಲ ಎಂದು ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಬಸವರಾಜ ಪಾಟೀಲ್‌ ಹೇಳಿದ್ದಾರೆ.