ಮಂಗಳೂರು(ಮಾ.24): ಮುಂದಿನ ದಿನಗಳಲ್ಲಿ ಅಗತ್ಯ ಸಾಮಗ್ರಿಗಳು ಸಿಗದಿದ್ದರೆ ಎನ್ನುವ ಆತಂಕದಿಂದ ಸೋಮವಾರ ಅಂಗಡಿಗಳು, ಮಾರುಕಟ್ಟೆಗೆ ಧಾವಿಸಿದ ಜನರಿಗೆ ಆಘಾತ ಕಾದಿತ್ತು. ಹಣ ಗಳಿಕೆಗೆ ಇದೇ ಸರಿಯಾದ ಸಮಯ ಎಂದು ಕೆಲ ವ್ಯಾಪಾರಸ್ಥರು ತರಕಾರಿಗೆ ದಿಢೀರನೆ ದರ ಏರಿಕೆ ಮಾಡಿದ್ದರು! ಇದರಿಂದಾಗಿ ಮೊದಲೇ ಆತಂಕಗೊಂಡಿದ್ದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ದ.ಕ. ಜಿಲ್ಲೆ ಲಾಕ್‌ಡೌನ್‌ ಆಗಿರುವ ಕಾರಣ ಹೊರ ಜಿಲ್ಲೆಗಳಿಂದ ತರಕಾರಿ ಪೂರೈಕೆಗೆ ತಡೆ ಉಂಟಾಗಿದೆ. ಇದರ ದುರ್ಲಾಭ ಪಡೆದ ತರಕಾರಿ ವ್ಯಾಪಾರಸ್ಥರು ದರ ಏರಿಕೆ ಮಾಡಿದ್ದರು. ಕೆಜಿಗೆ 15-20 ರು. ಇರುವ ಟೊಮ್ಯಾಟೊ ಮಂಗಳೂರಿನ ಕೆಲ ಅಂಗಡಿಗಳಲ್ಲಿ 40 ರು.ಗೆ ಮಾರಾಟ ಮಾಡಿದ್ದಾರೆ. ಅಲಸಂಡೆಗೆ ಬರೋಬ್ಬರಿ 80 ರು., ಬೆಂಡೆ 90 ರು., ಈರುಳ್ಳಿ 40-50 ರು.ಗೆ ಮಾರಾಟ ಮಾಡಿರುವುದು ಕಂಡುಬಂದಿದೆ.

ನಾನು ಸಮಾಜದ ಶತ್ರು: ನಿಷೇಧಾಜ್ಞೆ ಉಲ್ಲಂಘನೆ ಮಾಡಿದವರ ಕೈಗೆ ಪೋಸ್ಟರ್‌!

ಇಂಥ ಪರಿಸ್ಥಿತಿಯಲ್ಲಿ ಮಾನವೀಯತೆ ಮೆರೆಯಬೇಕಿತ್ತು. ಸ್ವಲ್ಪ ಬೆಲೆ ಏರಿಕೆ ಮಾಡಿದ್ದರೆ ಸಹಿಸಬಹುದಿತ್ತು. ದುಪ್ಪಟ್ಟು ಏರಿಕೆ ಮಾಡುತ್ತಿದ್ದಾರೆ. ಹೀಗೆ ಮಾಡಿದರೆ ಕೂಲಿ ಕಾರ್ಮಿಕರು, ಬಡಜನರ ಪಾಡೇನು ಎಂದು ಗ್ರಾಹಕರೊಬ್ಬರು ವಿಷಾದ ವ್ಯಕ್ತಪಡಿಸಿದರು.

ಮೀನು, ಮಾಂಸ ಬೆಲೆಯೂ ಏರಿಕೆ: ತರಕಾರಿ ಮಾತ್ರವಲ್ಲ, ಮೀನು ಬೆಲೆಯೂ ಸೋಮವಾರ ಅಧಿಕವಾಗಿತ್ತು. ಮೀನುಗಾರರಿಗೆ ಡೀಸೆಲ್‌ ಪೂರೈಕೆ ನಿಲ್ಲಿಸಲಾಗಿದ್ದು, ಹೊಸದಾಗಿ ಮೀನುಗಾರಿಕೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇರುವ ಮೀನನ್ನು ಮಾರುತ್ತಿದ್ದೇವೆ ಎಂದು ದಕ್ಕೆಯ ಮೀನುಗಾರರು ತಿಳಿಸಿದ್ದಾರೆ. ದಕ್ಕೆಯಲ್ಲಿ ಮೀನಿನ ಬೆಲೆ ಕುಸಿದಿದ್ದರೂ ಇತರ ಮೀನು ಮಾರುಕಟ್ಟೆಗಳಲ್ಲಿ ದರ ಅಧಿಕವಾಗಿತ್ತು.

'ದಯವಿಟ್ಟು ಹೊರಗೆ ಬರ್ಬೇಡಿ', ನಡು ರಸ್ತೆಯಲ್ಲೇ ಕೈ ಮುಗಿದು ಕೇಳಿಕೊಂಡ ಯುವಕ..!

ಕೆಲ ದಿನಗಳ ಹಿಂದೆ ಕೋಳಿ ಮಾಂಸ ಕೆಜಿಗೆ 50 ರು.ಗೆ ಇಳಿದಿತ್ತು. ಸೋಮವಾರ ಕೆಲವೆಡೆ 70-80 ರು.ಗೆ ಕೋಳಿ ಮಾಂಸ ಮಾರಾಟವಾಗಿದೆ. ಒಂದೊಂದು ಸ್ಟಾಲ್‌ಗಳಲ್ಲಿ ಒಂದೊಂದು ರೀತಿಯ ದರದಲ್ಲಿ ಮಾಂಸ ಮಾರಾಟ ನಡೆಯುತ್ತಿತ್ತು.