ಮಂಗಳೂರು(ಮಾ.24): ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ದಟ್ಟಣೆ ಹಾಗೂ ಮಂಗಳೂರು ನಗರ ಪ್ರದೇಶಕ್ಕೆ ತೊಕ್ಕೊಟ್ಟು ಕಡೆಯಿಂದ ಬರುವ ವಾಹನಗಳನ್ನು ನಿಯಂತ್ರಿಸಲು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಜೆಪ್ಪುವಿನ ಮಂಗಳಾದೇವಿ ಕ್ರಾಸ್‌ ಬಳಿ ಬ್ಯಾರಿಕೇಡ್‌ ಅಳವಡಿಸಿದರೂ, ಕಾರಣ ನೀಡಿ ನುಸುಳಲು ಯತ್ನಿಸುತ್ತಿದ್ದ ವಾಹನ ಸವಾರರಿಗೆ ಸಮಾಜಸೇವಕ ಯುವಕ ಕಾಳಜಿಯುತ ಮಾತುಗಳನ್ನು ಹೇಳುವ ಮೂಲಕ ಎಚ್ಚರಿಸಿದರು.

ಬೆಳಗ್ಗಿನಿಂದ ರಾ.ಹೆ.ಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ನಗರಕ್ಕೂ ವಾಹನ ಸಂಚಾರ ಸರಾಗವಾಗಿ ಹರಿದುಬರುತ್ತಿದ್ದಂತೆ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ ಸೂಚಿಸಿತು. ಅದರಂತೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ನಾಗುರಿ ಸಂಚಾರಿ ಠಾಣಾ ಪೊಲೀಸರು ರಾ.ಹೆ. 66ರ ಜೆಪ್ಪು ಬಳಿ ಬ್ಯಾರಿಕೇಡ್‌ ಅಳವಡಿಸಿ ಮಂಗಳೂರು ಕಡೆಗೆ ತೆರಳದಂತೆ ಸೂಚಿಸಿದರು. ಆರೋಗ್ಯ ಸೇವೆ, ಗೂಡ್ಸ್‌ ಲಾರಿ, ಆ್ಯಂಬು​ಲೆನ್ಸ್‌, ಲಾರಿ ಹೀಗೆ ತುರ್ತಾಗಿ ಹೋಗುವವರಿಗೆ ರಿಯಾಯಿತಿ ನೀಡಲಾಗಿತ್ತು.

ಕೊರೋನಾ ತಾಂಡವ: ಸದ್ಯ ಭಾರತದ ಸ್ಥಿತಿಗತಿ ಹೇಗಿದೆ? ರಾಜ್ಯವಾರು ಚಿತ್ರಣ

ಆದರೂ ವಾಹನ ಸವಾರರು ಹಲವು ಕಾರಣಗಳನ್ನು ನೀಡುತ್ತ ಪೊಲೀಸರ ಬಳಿ ವಿನಂತಿಸುತ್ತಾ ಮುಂದೆ ಹೋಗಲು ಯತ್ನಿಸುತ್ತಲೇ ಇದ್ದರು. ಇದರಿಂದಾಗಿ ನೇತ್ರಾವತಿ ಸೇತುವೆಯುದ್ದಕ್ಕೂ ವಾಹನಗಳು ಸರತಿ ಸಾಲಿನಲ್ಲಿ ನಿಂತಿತ್ತು.

ಪೊಲೀಸರ ಮಾತುಗಳನ್ನು ಆಲಿಸದ ಜನರನ್ನು ಕಂಡು, ಜೆಪ್ಪು ನಿವಾಸಿ ಅಬ್ದುಲ್‌ ರೆಹಮಾನ್‌ ಎಂಬವರು ರಸ್ತೆ ಮಧ್ಯದಲ್ಲಿ ನಿಂತು ವಾಹನ ಸವಾರರಿಗೆ ಕೈ ಮುಗಿದು, ‘ಅಗತ್ಯ ಬಿದ್ದರೆ ಮಾತ್ರ ಹೊರಬನ್ನಿ, ಇದು ನಿಮ್ಮ ಒಳ್ಳೆಯದಕ್ಕಾಗಿ ಪೊಲೀಸರು ಬಿಸಿಲಿನಲ್ಲಿ ನಿಂತು ಮಾಡುತ್ತಿರುವ ಕೆಲಸ, ಸುಖಾಸುಮ್ಮನೆ ತಿರುಗಿ ಮನೆಯವರನ್ನು ಅಪಾಯಕ್ಕೆ ಸಿಲುಕಿಸದಿರಿ’ ಎಂದು ಪರಿ ಪರಿಯಾಗಿ ವಿನಂತಿಸಿಕೊಂಡರು.

ಕಸದ ಜೊತೆಯಲ್ಲೇ ಗ್ಲೌಸ್, ಮಾಸ್ಕ್: ಪೌರ ಕಾರ್ಮಿಕರಿಗೆ ಆತಂಕ

ರೆಹಮಾನ್‌ ಮೂಲತಃ ಕೃಷ್ಣಾಪುರ ನಿವಾಸಿ. ಮಂಗಳೂರಿನಲ್ಲಿ ಉದ್ಯಮ ನಡೆಸುತ್ತಿರುವ ಇವರು ಜೆಪ್ಪು ಫ್ಲಾಟ್‌ನಲ್ಲಿ ನೆಲೆಸಿದ್ದಾರೆ. ಸಮಾಜ ಸೇವಕರಾಗಿರುವ ಇವರು ಮಾನವ ಹಕ್ಕು ಸಮಿತಿ ರಾಜ್ಯ ಯುವ ಅಧ್ಯಕ್ಷರೂ ಆಗಿದ್ದು, ನೆರೆ ಪರಿಹಾರ ಸಂದರ್ಭ ಕೇರಳ, ಮಡಿಕೇರಿ ಭಾಗದಲ್ಲಿಯೂ ಸಮಾಜ ಸೇವೆ ಮಾಡಿ​ದ್ದ​ರು. ರಸ್ತೆ ಬದಿಯಲ್ಲಿರುವ ಭಿಕ್ಷುಕರನ್ನು, ಅಸಹಾಯಕರನ್ನು ಆಶ್ರಮಕ್ಕೆ ಸೇರಿಸುವ ಕಾರ್ಯ ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ.