ಬಳ್ಳಾರಿ(ಮಾ.25): ಕೊರೋನಾ ವೈರಾಣು ಹರಡುವ ಆತಂಕದಿಂದ ಜಿಲ್ಲಾದ್ಯಂತ ನಿಷೇಧಾಜ್ಞೆ ಹೇರಲಾಗಿದೆ. ಈ ಪ್ರಕಾರ ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಆದರೆ, ಸಂಡೂರು ತಾಲೂಕಿನ ಜಿಂದಾಲ್‌ ಕಾರ್ಖಾನೆಯಲ್ಲಿ ಸಾವಿರಾರು ಜನರು ಸೇರಿ ಕೆಲಸ ನಿರ್ವಹಿಸುತ್ತಾರೆ. ಹಾಗಾದರೆ ಸರ್ಕಾರದ ಆದೇಶ ಜಿಂದಾಲ್‌ ಅನ್ವಯವಾಗುವುದಿಲ್ಲವೇ ? 

ಜಿಂದಾಲ್‌ ಸೇರಿದಂತೆ ವಿವಿಧ ಕಾರ್ಖಾನೆಗಳನ್ನು ಮುಚ್ಚಿಸಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ? ಇಂತಹದೊಂದು ಆತಂಕದ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ. ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಎಲ್ಲೆಡೆ ಸಾರ್ವಜನಿಕರಿಗೆ ದಿಗ್ಬಂಧನ ಹಾಕಲಾಗುತ್ತಿದ್ದು ವೈರಾಣು ನಿಯಂತ್ರಣಕ್ಕೆ ಇಡೀ ಜಿಲ್ಲಾಡಳಿತ ಹರಸಾಹಸಪಡುತ್ತಿದೆ.

ವಿದ್ಯಾವಂತರಿಗೆ ಮಾದರಿಯಾದ ಅನಕ್ಷರಸ್ಥ: ರೈತನಿಗೆ ಬಿಗ್ ಸೆಲ್ಯೂಟ್ ಹೊಡೆದ PSI!

ಆರೋಗ್ಯ ದೃಷ್ಟಿಯಿಂದಾಗಿ ಸಾರ್ವಜನಿಕರು ಸಹ ಜಿಲ್ಲಾಡಳಿತ ಕರೆಗೆ ಸ್ಪಂದಿಸಿ, ಹಬ್ಬ-ಹರಿದಿನಗಳನ್ನು ಲೆಕ್ಕಿಸದೆ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದರೆ, ಜಿಂದಾಲ್‌ ಸೇರಿದಂತೆ ಜಿಲ್ಲೆಯ ವಿವಿಧ ಕಾರ್ಖಾನೆಗಳಲ್ಲಿ ಎಂದಿನಂತೆ ಸಾವಿರಾರು ಜನರು ಕೆಲಸ ಮಾಡುತ್ತಿದ್ದು ಕಾರ್ಖಾನೆ ಸ್ಥಗಿತಕ್ಕೆ ರಾಜ್ಯ ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಧ್ವನಿ ಎತ್ತಿದ್ದು, ಜಿಂದಾಲ್‌ ಕಾರ್ಖಾನೆಗೆ ಇಲ್ಲದ ಕಾನೂನು, ನಿಷೇಧಾಜ್ಞೆ ಸಾರ್ವಜನಿಕರ ಮೇಲೇಕೆ ಎಂಬುದು ಈಗ ಕೇಳಿ ಬರುತ್ತಿರುವ ಜನರ ಆಕ್ರೋಶದ ಮಾತು.

ಆತಂಕದಿಂದಲೇ ಕೆಲಸ ಮಾಡ್ತೀವಿ:

ಜಿಂದಾಲ್‌ ಕಾರ್ಖಾನೆಗೆ ಕೆಲಸಕ್ಕೆಂದು ತೆರಳಲು ಮಂಗಳವಾರ ನಗರದ ವಿವಿಧ ವೃತ್ತಗಳಲ್ಲಿ ಬಸ್‌ಗಾಗಿ ಕಾದು ನಿಂತಿದ್ದ ಜಿಂದಾಲ್‌ ನೌಕರರು ಹಾಗೂ ಕಾರ್ಮಿಕರ ಜೊತೆ ಕನ್ನಡಪ್ರಭ ಮಾತಿಗಿಳಿದಾಗ, ‘ನಮಗೂ ಆತಂಕವಿದೆ. ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲ. ನೂರಾರು ಜನರು ಸೇರಿ ಕೆಲಸ ಮಾಡ್ತೀವಿ. ಏನಾದ್ರೂ ಆದರೆ ನಮ್ಮ ಗತಿ ಏನು? ನಾವು ಮನುಷ್ಯರಲ್ಲವೇ? ನಮಗೇಕೆ ಈ ಶಿಕ್ಷೆ?’ ಎಂದು ಅಳಲು ತೋಡಿಕೊಂಡರಲ್ಲದೆ, ಕಾರ್ಖಾನೆಯವರು ಕೆಲಸಕ್ಕೆ ಬರಲೇಬೇಕು ಎಂದು ಹೇಳುತ್ತಿದ್ದಾರೆ. ಅವರ ಒತ್ತಡಕ್ಕೆ ಮಣಿಯಲೇಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕೊರೋನಾ ಹೆಚ್ಚಿದ ಭೀತಿ: ಭಯ ಬೇಡ, ಆತಂಕ ನಿವಾರಣೆಗೆ ಹೀಗ್ಮಾಡಿ

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 144 ಸೆಕ್ಷನ್‌ ಜಾರಿಗೊಳಿಸಲಾಗಿದೆ. ಇದನ್ನು ಪ್ರತಿಯೊಬ್ಬರೂ ಸ್ಪಂದಿಸುತ್ತಿದ್ದಾರೆ. ಆದರೆ, ಸಂಡೂರು ತಾಲೂಕಿನ ಜಿಂದಾಲ್‌, ಹೊಸಪೇಟೆಯ ಬಳಿಯ ಬಿಎಂಎಂ ಕಾರ್ಖಾನೆಯನ್ನು ಸ್ಥಗಿತಗೊಳಿಸಲಾಗಿಲ್ಲ. ಒಂದೆಡೆ ನೂರಾರು ಜನರು ಕೆಲಸ ಮಾಡುವಾಗ ಕೊರೋನಾ ವೈರಸ್‌ ಹರಡುವುದಿಲ್ಲ. ಸರ್ಕಾರ ಈ ರೀತಿಯ ನಿಲುವು ತೆಗೆದುಕೊಂಡಿರುವ ನಿರ್ಧಾರ ಎಷ್ಟು ಸರಿ? ಎಂದು ಬಳ್ಳಾರಿ ಕಾಂಗ್ರೆಸ್‌ ಮುಖಂಡ ಕುಡಿತಿನಿ ಶ್ರೀನಿವಾಸ್‌ ತಿಳಿಸಿದ್ದಾರೆ. 

ಜಿಂದಾಲ್‌ ಸೇರಿದಂತೆ ಕಾರ್ಖಾನೆಗಳಿಗೆ ವಿನಾಯಿತಿ ಇದೆ. ಹೀಗಾಗಿಯೇ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ. ಅಲ್ಲಿ ಸಹ ನಿರಂತರವಾಗಿ ಆರೋಗ್ಯ ತಪಾಸಣೆ ನಡೆದಿದೆ. ಅಲ್ಲಿ ಈವರೆಗೆ ಯಾವುದೇ ಕೊರೋನಾ ಪ್ರಕರಣ ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಹೇಳಿದ್ದಾರೆ.