ವಿದ್ಯಾ, ಶಿವಮೊಗ್ಗ

ಶಿವಮೊಗ್ಗ(ಮಾ.25): ಕೊರೋನಾ ಕೆಎಸ್‌ಆರ್‌ಟಿಸಿಗೆ ಈ ಬಾರಿ ಬಿಗ್‌ ಶಾಕ್‌ ನೀಡಿದೆ. ಕಷ್ಟ ನಷ್ಟದಲ್ಲಿ ಹೇಗೋ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಶಿವಮೊಗ್ಗ ಡಿಪೋ ವಿಭಾಗಕ್ಕೆ ಕೊರೋನಾ ಭಾರೀ ಪೆಟ್ಟು ನೀಡಿದ್ದು, ದೊಡ್ಡ ನಷ್ಟಕ್ಕೆ ಕಾರಣವಾಗಿದೆ. ಈ ನಷ್ಟ ಪ್ರತಿದಿನ ಬರೋಬ್ಬರಿ 45 ಲಕ್ಷ ರು.!

ವೈರಸ್‌ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಏಪ್ರಿಲ್ 14 ರವರೆಗೆ ಇಡೀ ಲಾಕ್‌ಡೌನ್‌ ಮಾಡಿದ್ದು, ವಾಹನ ಸಂಚಾರಕ್ಕೆ ನಿರ್ಬಂಧ ಹೇರಿತು. ಇದರಂತೆ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಇದು ದೊಡ್ಡ ನಷ್ಟಕ್ಕೆ ಕಾರಣವಾಗಿದೆ.

ಮೊದಲ ಬಾರಿ ಕೆ.ಆರ್‌.ಮಾರುಕಟ್ಟೆ ಫುಲ್‌ ಕ್ಲೀನ್‌!

ಶಿವಮೊಗ್ಗ ಡಿಪೋ ವಿಭಾಗದಲ್ಲಿ ಒಟ್ಟು 320 ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆಗಳನ್ನು ರದ್ದುಪಡಿಸಲಾಗಿದೆ. ಈ ಮೊದಲು ಒಂಬತ್ತು ಜಿಲ್ಲೆಗಳಿಗೆ ಲಾಕ್‌ ಡೌನ್‌ ಕರೆ ನೀಡಿದ್ದು, ಆ ಒಂಬತ್ತು ಜಿಲ್ಲೆಗಳಿಗೆ ಸಂಚರಿಸುವ 75 ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಆದರೆ ನಂತರ ರಾಜ್ಯ ಸರ್ಕಾರ ಇಡೀ ರಾಜ್ಯಕ್ಕೆ ಲಾಕ್‌ಡೌನ್‌ ವಿಸ್ತರಿಸಿದ ನಂತರ ಮಂಗಳವಾರ ಬೆಳಿಗ್ಗೆಯಿಂದ ಎಲ್ಲಾ ಬಸ್‌ಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ರಾಜ್ಯ ಲಾಕ್‌ ಡೌನ್‌ ಮತ್ತು ಬಸ್‌ ಸೇವೆಗಳನ್ನು ರದ್ದುಗೊಳಿಸುವುದರಿಂದ ಕೆಎಸ್‌ಆರ್‌ಟಿಸಿಗೆ ಸುಮಾರು ದಿನಕ್ಕೆ 45 ಲಕ್ಷ ರು. ನಷ್ಟವಾಗಿದೆ ಎಂದು ಕೆಎಸ್‌ಆರ್‌ಟಿಸಿ ಶಿವಮೊಗ್ಗ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ನವೀನ್‌ ತಿಳಿಸಿದ್ದಾರೆ.

ನಗರದಿಂದ ಪುಣೆ, ಪನಾಜಿ, ಹೈದರಾಬಾದ್‌, ಚೆನ್ನೈ, ಕೊಯಮತ್ತೂರು, ತಿರುವಣ್ಣಾಮಲೈ, ಕೊಲ್ಹಾಪುರ, ಊಟಿ, ತಿರುಪತಿ, ಹೈದರಾಬಾದ್‌, ಬೆಂಗಳೂರು, ಮೈಸೂರು, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾವೇರಿ ಮತ್ತು ಕಲರ್ಬುಗಿಗೆ ಸೇರಿದಂತೆ ವಿವಿಧ ಊರುಗಳಿಗೆ ನೇರ ಬಸ್ಸುಗಳ ಸೇವೆಗಳು ಇದ್ದವು. ಆದರೆ ಸೋಮವಾರ ಸಂಜೆಯಿಂದ ರಾಜ್ಯಬೀಗ ಹಾಕಿದ ಹಿನ್ನೆಲೆಯಲ್ಲಿ ಈ ಎಲ್ಲಾ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಬೆಂಗಳೂರು ಡಿಪೋಗೆ ಸೇರಿದ ಬಸ್ಸುಗಳು ಮಾತ್ರ ಸೋಮವಾರ ಸಂಜೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಹೊತ್ತು ನಗರ ತೊರೆದವು ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ತೊಂದರೆ ಆಗದಂತೆ ನೋಡ್ಕೊಳ್ಳಿ, ನಿಮಗಾಗಿ ದುಡಿಯುತ್ತಿದ್ದಾರೆ: ಮೋದಿ ಶ್ಲಾಘನೆ!

ಬಸ್‌ಗಳ ಸೇವೆ ಸ್ಥಗಿತವಾದ ಮಾಹಿತಿ ಇಲ್ಲದೆ ಮಂಗಳವಾರವೂ ಸಹ ಅನೇಕ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಹೊಳೆಹೊನ್ನೂರಿನ ಅರಬಿಳಚಿಯ ನಿವಾಸಿ ರತ್ನಮ್ಮ ಎಂಬುವವರು ತಮ್ಮ ಮಗಳು ರೇಖಾ ಎಂಬುವವರ ಕಾಲಿನ ಸಣ್ಣ ಶಸ್ತ್ರ ಚಿಕಿತ್ಸೆಗಾಗಿ ಇಲ್ಲಿನ ಮೆಗ್ಗಾನ್‌ ಆಸ್ಪತ್ರೆಗೆ ಆಗಮಿಸಿದ್ದರು. ಶಸ್ತ್ರ ಚಿಕಿತ್ಸೆ ಮುಗಿದಿದ್ದು, ಅವರು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಅವರನ್ನು ಕಳುಹಿಸಿದ್ದಾರೆ. ಇವರಿಗೆ ಬಸ್‌ಗಳ ಸಂಚಾರ ರದ್ದು ಪಡಿಸಿರುವ ಮಾಹಿತಿ ಇಲ್ಲದ ಕಾರಣ ಬಸ್‌ನಿಲ್ದಾಣಕ್ಕೆ ಬಂದು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.