ಬೆಂಗಳೂರು(ಮಾ.25): ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಘೋಷಿಸಿರುವ ಹಿನ್ನೆಲೆಯಲ್ಲಿ ನಗರದ ಕೆ.ಆರ್‌.ಮಾರುಕಟ್ಟೆ ಸಂಪೂರ್ಣ ಬಂದ್‌ ಆಗಿರುವ ಹಿನ್ನೆಲೆಯಲ್ಲಿ ಮಂಗಳವಾರ ದಿನವಿಡೀ ಪೌರ ಕಾರ್ಮಿಕರು ಮಾರುಕಟ್ಟೆಯನ್ನು ಸ್ವಚ್ಛಗೊಳಿಸಿದ್ದಾರೆ.

ಮಾರುಕಟ್ಟೆಆರಂಭವಾದಾಗಿನಿಂದ ಈ ವರೆಗಿನ ಇತಿಹಾಸದಲ್ಲೇ ಕೆ.ಆರ್‌.ಮಾರುಕಟ್ಟೆಇಡೀ ದಿನ ಈ ರೀತಿ ಸಂಪೂರ್ಣ ಬಂದ್‌ ಆಗಿರಲಿಲ್ಲ. ಇದರಿಂದ ಆಗಾಗ ಮಾರುಕಟ್ಟೆಸ್ವಚ್ಛಗೊಳಿಸಿದರೂ ಪೂರ್ಣ ಪ್ರಮಾಣದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ಮಾರುಕಟ್ಟೆಯಲ್ಲಿ ಎಲ್ಲ ಅಂಗಡಿಯವರು ಬಂದ್‌ ಮಾಡಿಕೊಂಡು ಹೋಗಿದ್ದಾರೆ. ಅಂಗಡಿಗಳ ಮುಂದೆ ಒತ್ತುವರಿ ಮಾಡಿಕೊಂಡಿದ್ದ ಪಾದಚಾರಿ ಮಾರ್ಗವನ್ನೂ ಸ್ವಯಂ ಪ್ರೇರಿತ ತೆರವು ಮಾಡಿ ಬಂದ್‌ ಮಾಡಿದ್ದಾರೆ. ಇದರಿಂದ ಮಾರುಕಟ್ಟೆಯ ಪೂರ್ಣ ಸ್ವಚ್ಛತೆ ಸಾಧ್ಯವಾಗಿದೆ ಎಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರಕಾರ್ಮಿಕರು ಹೇಳಿದರು.

ನಡೆದೇ ಮನೆಗೆ ಸಾಗಿದ ಪೌರ ಕಾರ್ಮಿಕರು

ಕೊರೋನಾ ಸೋಂಕು ಆತಂಕದ ನಡುವೆಯೇ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆ ಸಲ್ಲಿಸುುತ್ತಿರುವಂತೆ ಪೌರ ಕಾರ್ಮಿಕರು ಕೂಡ ಮಂಗಳವಾರ ರಸ್ತೆ, ಮಾರುಕಟ್ಟೆಸೇರಿದಂತೆ ನಗರದ ಸ್ವಚ್ಛತಾ ಕಾರ್ಯ ನಡೆಸಿದರು.

ಆದರೆ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಸ್‌, ಆಟೋ ಸೇರಿದಂತೆ ಯಾವುದೇ ವಾಹನಗಳು ರಸ್ತೆಗಿಳಿಯದ ಕಾರಣ ಮನೆಯಿಂದ ನಡೆದುಕೊಂಡೇ ಹಲವಾರು ಕಿ.ಮೀ ದೂರದಲ್ಲಿರುವ ತಮಗೆ ನಿಗದಿಯಾದ ರಸ್ತೆ, ಮಾರುಕಟ್ಟೆಪ್ರದೇಶಕ್ಕೆ ಬಂದು, ಸ್ವಚ್ಛಗೊಳಿಸಿ ಅನಂತರ ನಡೆದುಕೊಂಡೇ ಹಿಂತಿರುಗುವಂತಾಗಿದೆ.

ಬೆಳಗ್ಗೆಯೇ ಕೆಲಸಕ್ಕೆ ಬರುವುದರಿಂದ ಮನೆಯಲ್ಲಿ ಊಟ, ತಿಂಡಿ ಮಾಡಲಾಗಲ್ಲ. ಹೋಟೆಲ್‌ಗಳಲ್ಲಿ ಊಟ ಮಾಡುತ್ತಿದ್ದೆವು. ಈಗ ಹೋಟೆಲ್‌ಗಳು ಬಂದ್‌ ಆಗಿರುವುದರಿಂದ ಮಧ್ಯಾಹ್ನ ಮನೆಗೆ ಹೋಗಿ ಊಟ ಮಾಡಬೇಕಾಯಿತು. ಬಿಬಿಎಂಪಿಯಿಂದ ನಮಗೆ ಯಾವುದೇ ಸಾರಿಗೆ, ಉಪಹಾರದ ವ್ಯವಸ್ಥೆ ಇಲ್ಲ ಎಂದು ಪೌರ ಕಾರ್ಮಿಕರು ಬೇಸರ ವ್ಯಕ್ತಪಡಿಸಿದರು.

ನಿತ್ಯ 100 ರು. ಸಾರಿಗೆ ಭತ್ಯೆ

ಲಾಕ್‌ಡೌನ್‌ ಆದೇಶದಿಂದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಪೌರ ಕಾರ್ಮಿಕರು ಕರ್ತವ್ಯಕ್ಕೆ ಬರಲು ಪ್ರತಿದಿನ 100 ರು. ಸಾರಿಗೆ ಭತ್ಯೆ ನೀಡಲು ಬಿಬಿಎಂಪಿ ನಿರ್ಧರಿಸಿದೆ.

ಕೊರೋನಾ ಸೋಂಕು ಹತೋಟಿ ತರುವ ಉದ್ದೇಶದಿಂದ ನಗರದ ಎಲ್ಲ ಸಾರಿಗೆ ವ್ಯವಸ್ಥೆ ಸಂಚಾರವನ್ನು ನಿರ್ಬಂಧಿಸಿರುವುದರಿಂದ ಪ್ರತಿನಿತ್ಯ ಕರ್ತವ್ಯಕ್ಕೆ ಆಗಮಿಸುವ ಪೌರಕಾರ್ಮಿಕರಿಗೆ ತೊಂದರೆ ಉಂಟಾಗಿದೆ. ಹಾಗಾಗಿ, ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಲು ಪೌರಕಾರ್ಮಿಕರಿಗೆ ದಿನಕ್ಕೆ ತಲಾ 100 ರು. ನೀಡಲಾಗುವುದು ಎಂದು ಪಾಲಿಕೆ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಆದೇಶಿದ್ದಾರೆ.

ರಜೆ ಹಾಕುವರರ ಗುಪ್ತ ವರದಿ ನೀಡಿ

ಮುನ್ಸೂಚನೆ ನೀಡದೆ 15 ದಿನಗಳ ಕಾಲ ರಜೆ ಹಾಕಿದ ಪೌರಕಾರ್ಮಿಕರನ್ನು ಸೇವೆಯಿಂದ ತೆಗೆದುಹಾಕಬೇಕು. ವಾರ್ಡ್‌ಗಳಲ್ಲಿನ ಮಾರ್ಷಲ್‌ಗಳು ದೀರ್ಘ ರಜೆಯ ಮೇಲೆ ಹಾಗೂ ಗೈರಾಗಿರುವ ಪೌರಕಾರ್ಮಿಕರು ಹಾಗೂ ಮೇಲ್ವಿಚಾರಕರನ್ನು ಗಮನಿಸಿ ಅದರ ಸಂಪೂರ್ಣ ಮಾಹಿತಿಯನ್ನು ಪ್ರಧಾನ ಮಾರ್ಷಲ್‌ರವರಿಗೆ ನೀಡಬೇಕು. ಪ್ರಧಾನ ಮಾರ್ಷಲ್‌ ಗೌಪ್ಯ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಅನಿಲ್‌ ಕುಮಾರ್‌ ಸೂಚಿಸಿದ್ದಾರೆ.