ಮಾಧ್ಯಮಗಳಿಗೆ ಮೋದಿ ಶಹಬ್ಬಾಸ್‌| ನೈಜ ಮಾಹಿತಿಗೆ ಅವಶ್ಯ: ಕೇಂದ್ರ|  24 ತಾಸೂ ನಿಮಗಾಗಿ ದುಡಿಯುತ್ತಿದ್ದಾರೆ| ಮಾಧ್ಯಮದ ಸಿಬ್ಬಂದಿಗೆ ಅಡ್ಡಿಪಡಿಸಬೇಡಿ| ಪತ್ರಿಕೆ, ಸುದ್ದಿವಾಹಿನಿ| ಕರ್ತವ್ಯ ನಿರ್ವಹಿಸಲು| ಕೇಂದ್ರ ಗ್ರೀನ್‌ಸಿಗ್ನಲ್‌

ನವದೆಹಲಿ(ಮಾ.25): ಕೊರೋನಾ ಭೀತಿ ಹಿನ್ನೆಲೆಯಲ್ಲಿ ದೇಶಕ್ಕೆ ದೇಶವೇ ಲಾಕ್‌ಡೌನ್‌ ಆಗಿದ್ದರೂ ಜನತೆಗೆ ಕರಾರುವಾಕ್‌ ಸುದ್ದಿ ತಲುಪಿಸಲು ಶ್ರಮಿಸುತ್ತಿರುವ ಮಾಧ್ಯಮ ಸಿಬ್ಬಂದಿ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ ಆಗಿದ್ದರೂ ಮಾಧ್ಯಮ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆಯೂ ಯೋಚಿಸಿ. ನಿಮ್ಮ ಕುಟುಂಬಗಳನ್ನು ರಕ್ಷಿಸಲು ತಮ್ಮ ಕುಟುಂಬಗಳನ್ನು ಮರೆತು ಅವರೆಲ್ಲಾ ಹಗಲು- ರಾತ್ರಿ ದುಡಿಯುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಇದೇ ವೇಳೆ, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಕಾರ್ಯನಿರ್ವಹಣೆಗೆ ತೊಡಕಾಗದಂತೆ ನೋಡಿಕೊಳ್ಳಿ ಎಂದು ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಮೋದಿ ಹೇಳಿದ್ದು:

ರಾಷ್ಟ್ರವನ್ನುದ್ದೇಶಿಸಿ ಭಾನುವಾರ ರಾತ್ರಿ ಭಾಷಣ ಮಾಡಿದ ಮೋದಿ, ಕೈಮುಗಿದು ಕೇಳಿಕೊಳ್ಳುತ್ತೇನೆ. ಮನೆಯಲ್ಲೇ ಇರಿ. ನಿಮ್ಮನ್ನೆಲ್ಲಾ ಸುರಕ್ಷಿತವಾಗಿಡಲು ಕಷ್ಟಗಳನ್ನು ಎದುರಿಸುತ್ತಿರುವವರ ಬಗ್ಗೆಯೂ ಯೋಚಿಸಿ. ವೈದ್ಯರು, ಅರೆ ವೈದ್ಯರು, ಆ್ಯಂಬುಲೆನ್ಸ್‌ ಚಾಲಕರು ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಪೊಲೀಸರು, ಮಾಧ್ಯಮ ಸಿಬ್ಬಂದಿ ಕೂಡ ದುಡಿಯುತ್ತಿದ್ದಾರೆ. ಅವರ ಬಗ್ಗೆಯೂ ಯೋಚಿಸಿ ಎಂದು ಹೇಳಿದರು.

ರಸ್ತೆಯಲ್ಲಿ ನಿಂತು, ಆಸ್ಪತ್ರೆಗಳಿಗೆ ಹೋಗಿ ನಿಮಗೆ ಖಚಿತ ಮಾಹಿತಿ ನೀಡಲು ಮಾಧ್ಯಮ ಸಿಬ್ಬಂದಿ ಹಗಲು- ರಾತ್ರಿ ದುಡಿಯುತ್ತಿದ್ದಾರೆ. ಅವರ ಬಗ್ಗೆಯೂ ಆಲೋಚಿಸಿ ಎಂದು ಮನವಿ ಮಾಡಿದರು.

ಮಾಧ್ಯಮಗಳ ಕಾರ್ಯಕ್ಕೆ ಸಮ್ಮತಿ:

ಈ ನಡುವೆ, ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ನೈಜ ಮಾಹಿತಿ ಸಕಾಲಕ್ಕೆ ಪಸರಣಗೊಳ್ಳಲು ಟೀವಿ ಚಾನಲ್‌ಗಳು ಹಾಗೂ ಸುದ್ದಿಸಂಸ್ಥೆಗಳಂತಹ ದೃಢ ಮತ್ತು ಅವಶ್ಯ ಪಸರಣ ಜಾಲದ ಅವಶ್ಯಕತೆ ತೀರಾ ಮಹತ್ವದ್ದು ಎಂದು ಬಣ್ಣಿಸಿದೆ.

ಕೊರೋನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಮಾತ್ರವಲ್ಲದೇ, ತಾಜಾ ಸ್ಥಿತಿಗತಿಯನ್ನು ಜನರಿಗೆ ನೀಡಲು, ಸುಳ್ಳು ಮತ್ತು ತಪ್ಪು ವರದಿಗಳನ್ನು ತಪ್ಪಿಸಲು ಮಾಧ್ಯಮಗಳ ಸೂಕ್ತ ರೀತಿಯ ಕಾರ್ಯನಿರ್ವಹಣೆ ಅಗತ್ಯವಿದೆ ಎಂದು ಹೇಳಿದೆ.

ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮಾಧ್ಯಮಗಳ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಬೇಕು. ಟೀವಿ ಚಾನಲ್‌ಗಳು, ಸುದ್ದಿಸಂಸ್ಥೆಗಳು, ಟೆಲಿಪೋರ್ಟ್‌ ಆಪರೇಟ​ರ್‍ಸ್, ಡಿಎಸ್‌ಎನ್‌ಜಿ, ಡಿಟಿಎಚ್‌, ಹೈಯನ್‌್ಡ ಇನ್‌ ದ ಸ್ಕೈ (ಎಚ್‌ಐಟಿಎಸ್‌), ಮಲ್ಟಿಸಿಸ್ಟಂ ಆಪರೇಟ​ರ್‍ಸ್, ಕೇಬಲ್‌ ಆಪರೇಟ​ರ್‍ಸ್, ಎಫ್‌ಎಂ ರೇಡಿಯೋ, ಸಮುದಾಯ ರೇಡಿಯೋ ಸೇವೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ತಿಳಿಸಿದೆ.

ಮಾಧ್ಯಮ ಸಂಸ್ಥೆಗಳ ಸಿಬ್ಬಂದಿ ಹೊತ್ತ ವಾಹನಗಳ ಸಂಚಾರಕ್ಕೆ, ಅಗತ್ಯ ಬಿದ್ದರೆ ಇಂಧನ ಖರೀದಿಸಲು, ಅನಿಯಮಿತ ವಿದ್ಯುತ್‌ ಸರಬರಾಜು, ಸರಕು ಸಾಗಣೆ ಮತ್ತಿತರೆ ಕೆಲಸಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.

ಪತ್ರಿಕೆ, ಸುದ್ದಿವಾಹಿನಿ ಕರ್ತವ್ಯ ನಿರ್ವಹಿಸಲು ಕೇಂದ್ರ ಗ್ರೀನ್‌ಸಿಗ್ನಲ್‌

ದಿನಪತ್ರಿಕೆಗಳು ಹಾಗೂ ಸುದ್ದಿವಾಹಿನಿಗಳನ್ನು ಕೇಂದ್ರ ಸರ್ಕಾರ ಹಾಗೂ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅಗತ್ಯ ವಸ್ತುಗಳೆಂದು ಘೋಷಿಸಿದ್ದಾರೆ. ಈ ಮೂಲಕ ನಿರ್ಬಂಧದ ನಡುವೆಯೂ ದೇಶದ ಮೂಲೆಮೂಲೆಗೆ ಖಚಿತ ವರ್ತಮಾನ ತಲುಪಿಸಲು ಪ್ರೇರಣೆ, ಹಸಿರು ನಿಶಾನೆ ದೊರೆತಿದೆ. ಅಲ್ಲದೆ, ದಿನಪತ್ರಿಕೆಗಳ ಸುರಕ್ಷತೆ ಬಗ್ಗೆ ಕೆಲ ಸಾಮಾಜಿಕ ಮಾಧ್ಯಮಗಳಲ್ಲಿ ಕಿಡಿಗೇಡಿಗಳು ಹಬ್ಬಿಸಿದ ವದಂತಿಗೆ ತೆರೆ ಎಳೆದಂತಾಗಿದೆ.