ಮಂಗಳೂರು(ಮಾ.25): ಮಹಾಮಾರಿ ಕೊರೋನಾ ಸೋಂಕು ಸಮುದಾಯಕ್ಕೆ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯಾದ್ಯಂತ ಮಾ.31ರವರೆಗೆ ಸೆ.144 ಹಾಗೂ ಲಾಕ್‌ಡೌನ್‌ ಆದೇಶ ಜಾರಿಗೊಳಿಸಿದ್ದರೂ ಈ ಆದೇಶ ಉಲ್ಲಂಘಿಸಿದ ಏಳು ಮಂದಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಅಂಗಡಿ ತೆರೆಯುವವರು, ಬೀದಿಗಳಲ್ಲಿ ತಿರುಗುವವರಿಗೆ ಬಿಸಿ ಮುಟ್ಟಿಸಿದ್ದಾರೆ.

ಪ್ರಧಾನಿ ಮೋದಿ ಕರೆ ನೀಡಿದಂತೆ ಭಾನುವಾರ ಇಡೀ ದಿನ ಜನತಾ ಕಫä್ರ್ಯಗೆ ಸಂಪೂರ್ಣವಾಗಿ ಬೆಂಬಲ ನೀಡಿದ್ದ ಜನತೆ ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಅಂಗಡಿಗಳು, ಮಾರುಕಟ್ಟೆಯಲ್ಲಿ ಗುಂಪು ಗುಂಪಾಗಿ ಖರೀದಿಗೆ ಮುಗಿಬಿದ್ದು ಕೊರೋನಾ ಸೋಂಕು ಸಮುದಾಯಕ್ಕೂ ಹರಡುವ ತೀವ್ರ ಆತಂಕ ಸೃಷ್ಟಿಯಾಗಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಸೋಮವಾರವೇ ಜನರಿಗೆ ಅನಗತ್ಯವಾಗಿ ಹೊರಬಾರದಂತೆ ಖಡಕ್‌ ಎಚ್ಚರಿಕೆ ನೀಡಿತ್ತು. ಅರೆಸ್ಟ್‌ ಮಾಡುವುದಲ್ಲದೆ ಪ್ರಕರಣ ದಾಖಲಿಸುವುದಾಗಿಯೂ ಎಚ್ಚರಿಸಿತ್ತು. ಆದರೂ ಮಂಗಳವಾರ ಕೆಲವರು ಅಂಗಡಿ ತೆರೆದಿರುವುದು, ಅನವಶ್ಯಕವಾಗಿ ತಿರುಗುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಏಳು ಮಂದಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

'ಚಹಾಕ್ಕೆ ಬೆಲ್ಲ, ಅರಿಶಿಣ ಹಾಕಿ ಕುಡಿದ್ರೆ ಕೊರೋನಾ ಬರಲ್ಲ'..!

ಜಿಲ್ಲಾ ದಂಡಾಧಿಕಾರಿಯ ಆದೇಶ (ಸೆ.144) ಮತ್ತು ಪೊಲೀಸರ ನಿರ್ದೇಶನವನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ.ಹರ್ಷ ತಿಳಿಸಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ದಿನ್ನೆಕೊಪ್ಲು ನಿವಾಸಿ ಜೇಮ್ಸ್‌ (45), ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ವಿಮೇಶ (30), ಉತ್ತರ ಪ್ರದೇಶದ ಬರ್ಲಾಪುರು ನಿವಾಸಿ ಅಮೀರಾ ಹಾಜು ಅನ್ಸಾರಿ, ರಾಜಸ್ತಾನದ ಜಾಲೂರು ನಿವಾಸಿ ಬಲರಾಮ್‌ ಚೌಧರಿ (18), ಉಳ್ಳಾಲದ ಸಿದ್ದಿಕ್‌, ತೊಕ್ಕೊಟ್ಟಿನ ವಿನಯ್‌ ಬಂಧಿತರು.

ಮಧ್ಯಾಹ್ನ ಬಳಿಕ ಸ್ತಬ್ಧ:

ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರದಿಂದ ಮಾ.31ರವರೆಗೆ ಕೇವಲ ಅವಶ್ಯ ವಸ್ತುಗಳ (ಹಾಲು ತರಕಾರಿ, ದಿನಸಿ, ಮೀನು ಮಾಂಸ) ಅಂಗಡಿಗಳನ್ನು ಬೆಳಗ್ಗೆ 6ರಿಂದ 12ರವರೆಗೆ ತೆರೆಯಲು ಅವಕಾಶ ನೀಡಲಾಗಿತ್ತು. ಬೆಳಗ್ಗಿನಿಂದಲೇ ಜನರು ಅಂಗಡಿಗಳತ್ತ ತೆರಳುತ್ತಿದ್ದರೂ ಸೋಮವಾರದಷ್ಟುಜನಸಂದಣಿ ಕಂಡುಬರಲಿಲ್ಲ. ಆದರೂ ಕೇಂದ್ರ ಮಾರುಕಟ್ಟೆಸುತ್ತಮುತ್ತ ಹತ್ತಾರು ಮಂದಿ ಒಟ್ಟೊಟ್ಟಿಗೆ ಸಾಮಗ್ರಿ ಕೊಳ್ಳುತ್ತಿರುವುದು ಕಂಡುಬಂದಿದೆ. ಪೊಲೀಸರು ಬೆಳಗ್ಗಿನಿಂದಲೇ ಕಾರ್ಯಪ್ರವೃತ್ತರಾಗಿದ್ದು, ಜನರು ಗುಂಪುಗೂಡುವಲ್ಲೆಲ್ಲ ತೆರಳಿ ಅಂತರ ಕಾಯ್ದುಕೊಳ್ಳುವಂತೆಯೂ, ಅನಗತ್ಯವಾಗಿ ತಿರುಗಾಡದಂತೆಯೂ ಸೂಚಿಸುತ್ತಿದ್ದರು.

ಹಲವರಿಗೆ ಲಾಠಿ ರುಚಿ:

ನಗರದ ಕೆಲವು ಪ್ರದೇಶಗಳಲ್ಲಿ ಪೊಲೀಸರ ಮಾತು ಕೇಳದೆ ಅಂಗಡಿ ತೆರೆದವರು, ಅನಗತ್ಯವಾಗಿ ತಿರುಗುತ್ತಿದ್ದವರನ್ನು ನಿಯಂತ್ರಿಸಲು ಲಾಠಿ ರುಚಿಯನ್ನೂ ತೋರಿಸಬೇಕಾಯಿತು. 12 ಗಂಟೆವರೆಗೆ ಅವಕಾಶವಿದ್ದರೂ ಮುನ್ನೆಚ್ಚರಿಕೆಯಾಗಿ 11 ಗಂಟೆಯಿಂದಲೇ ಜನರನ್ನು ಚದುರಿಸಲು ಸೂಚಿಸಲಾಯಿತು. 11.30ರ ವೇಳೆಗೆ ಬಹುತೇಕ ಅಂಗಡಿ, ಮಾರುಕಟ್ಟೆಗಳನ್ನು ಬಂದ್‌ ಮಾಡಲಾಯಿತು. ನಗರದಲ್ಲಿ ದಢೀರನೆ ಜನಸಂದಣಿ ವಿರಳವಾಗುತ್ತ ಬಂತು. ಮಧ್ಯಾಹ್ನದ ಬಳಿಕ ಇಡೀ ನಗರದ ರಸ್ತೆಗಳಲ್ಲಿ ಜನರೂ ಇರಲಿಲ್ಲ, ವಾಹನಗಳು ಅತಿ ವಿರಳ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದವು.

ಕೊರೋನಾ ಕೇಸ್‌ ಪತ್ತೆಯಾದ ಜಾಗದಲ್ಲೇ ಕೊರೋನಾ ಜಾಗೃತಿ ಯಕ್ಷಗಾನ..!

ಬೇಕರಿಗೆ ಮುಗಿಬಿದ್ದ ಜನ: ಈ ನಡುವೆ ಸೆಂಟ್ರಲ್‌ ಮಾರುಕಟ್ಟೆಯ ಬೇಕರಿಯೊಂದರಲ್ಲಿ ಬಾಗಿಲು ಅರ್ಧ ಹಾಕಿ ಸ್ವೀಟ್‌ ಮತ್ತಿತರ ಸಾಮಗ್ರಿಗಳನ್ನು ವಿತರಿಸುತ್ತಿದ್ದುದರಿಂದ ನೂರಕ್ಕೂ ಅಧಿಕ ಸಂಖ್ಯೆಯ ಜನರು ಅಲ್ಲಿ ಜಮಾಯಿಸಿದ್ದರು. ಒಬ್ಬರನ್ನೊಬ್ಬರು ದೂಡಿ ತಿಂಡಿ ಪಡೆಯುತ್ತಿದ್ದರು. ಮಾರುಕಟ್ಟೆಗೆ ಹಣ್ಣು, ತರಕಾರಿ ಕೊಳ್ಳಲು ಆಗಮಿಸಿದವರೂ ಬೇಕರಿಯತ್ತ ಹೆಜ್ಜೆ ಹಾಕಿದ್ದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಜನರನ್ನು ಚದುರಿಸಿ, ಬೇಕರಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಹಸಿದವರಿಗೆ ಅನ್ನ

ಮಂಗಳೂರು ನಗರದಲ್ಲಿ ಹೊಟೇಲ್‌ಗಳು ಸಂಪೂರ್ಣ ಬಂದ್‌ ಆಗಿದ್ದವು. ಆದರೆ ಸರ್ಕಾರದ ವ್ಯವಸ್ಥೆಯಡಿ ನಡೆಯುತ್ತಿರುವ ಇಂದಿರಾ ಕ್ಯಾಂಟೀನ್‌ಗಳು ನಿಯಮ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದವು. ಸಾಮಾನ್ಯ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ನತ್ತ ಮುಖ ಮಾಡದವರೂ ಕೂಡ ಅಲ್ಲಿಗೆ ಹೋಗಿ ಉಪಹಾರ ಸೇವಿಸುತ್ತಿದ್ದರು. ಬೆಳಗ್ಗಿನ ಹೊತ್ತು ಉಪಹಾರಕ್ಕೆ ಭರ್ಜರಿ ಬೇಡಿಕೆಯಿತ್ತು. ಹೊಟೇಲ್‌ಗಳಿಲ್ಲದೆ ಕಂಗಾಲಾಗಿದ್ದ ಬಡ ಕಾರ್ಮಿಕರು, ಬೀದಿ ಬದಿಯ ಅಲೆಮಾರಿ ಜನರ ಹಸಿವನ್ನು ಇಂದಿರಾ ಕ್ಯಾಂಟೀನ್‌ ನೀಗಿಸಿತು. ಆದರೆ ಮಧ್ಯಾಹ್ನ ಬಳಿಕ ಈ ಕ್ಯಾಂಟೀನ್‌ ಕೂಡ ಬಂದ್‌ ಆಗಿದ್ದರಿಂದ ಭಿಕ್ಷುಕರು, ಅಲೆಮಾರಿಗಳು ಆಹಾರವಿಲ್ಲದೆ ತೀವ್ರ ಸಂಕಷ್ಟಅನುಭವಿಸಿದ್ದಾರೆ.

ಜಿಲ್ಲಾ ಗಡಿಗಳಲ್ಲಿ ಮತ್ತಷ್ಟುಕಟ್ಟೆಚ್ಚರ

ದಕ್ಷಿಣ ಕನ್ನಡ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗಗಳಲ್ಲಿ ಹೊರಜಿಲ್ಲೆಗಳಿಂದ ವಾಹನಗಳು, ಜನರು ಬಾರದಂತೆ ಪೊಲೀಸ್‌ ಕಟ್ಟೆಚ್ಚರ ವಹಿಸಲಾಗಿದೆ. ಅತ್ಯಂತ ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ಕೇರಳದಿಂದ ಬರುವ 17 ರಸ್ತೆಗಳು ಕೂಡ ಸಂಪೂರ್ಣ ಬಂದ್‌ ಆಗಿದ್ದವು. ಕೇರಳ ರಾಜ್ಯಕ್ಕೆ ಹೊಂದಿಕೊಂಡ 12 ಕಡೆ ಅಂತಾರಾಜ್ಯ ಚೆಕ್‌ ಪೋಸ್ವ್‌ಗಳನ್ನು ತೆರೆಯಲಾಗಿದ್ದರೆ, ಚಾರ್ಮಾಡಿ, ಗುಂಡ್ಯ, ಕಲ್ಲುಗುಂಡಿ ಮತ್ತು ನಾರಾವಿಯಲ್ಲಿ ಹೊರಜಿಲ್ಲಾ ಚೆಕ್‌ ಪೋಸ್ವ್‌ಗಳನ್ನು ಆರಂಭಿಸಲಾಗಿದ್ದು, ಕಟ್ಟುನಿಟ್ಟಿನಿಂದ ಜನರನ್ನು ನಿಯಂತ್ರಿಸಲಾಗುತ್ತಿದೆ. ಇದಕ್ಕಾಗಿ ಕಮಿಷನರೇಟ್‌ ಹೊರತುಪಡಿಸಿ ಗ್ರಾಮಾಂತರ ವ್ಯಾಪ್ತಿಯಲ್ಲಿ 881 ಪೊಲೀಸರ ನಿಯೋಜನೆ ಮಾಡಲಾಗಿದೆ.