ಗದಗ(ಏ.09): ಜಿಲ್ಲೆಯಲ್ಲಿ ಮೊದಲ ಕೊರೋನಾ ಪ್ರಕರಣ ಬೆಳಕಿಗೆ ಬಂದರೂ ಅವಳಿ ನಗರದ ಜನರು ಮಾತ್ರ ತಮ್ಮ ವರಸೆಯನ್ನು ಬದಲಿಸದೇ, ಲಾಕ್‌ಡೌನ್‌ ನಿಯಮ ಪಾಲನೆ ಮಾಡದೇ ಬೇಜವಾಬ್ದಾರಿತನ ಮೆರೆಯುತ್ತಿದ್ದಾರೆ.

ಹೌದು.. ಮಂಗಳವಾರ 80 ವರ್ಷದ ವೃದ್ಧೆಗೆ ಕೊರೋನಾ ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆಯಾದರೂ ಕೆಲ ಜನರು ಮಾತ್ರ ಇನ್ನೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವುದು ಬುಧವಾರ ನಗರದಲ್ಲಿ ಕಂಡು ಬಂದಿತು.

ಯಾವುದೇ ಲಿಂಕ್‌ ಇಲ್ಲದ ಗದಗದ 80ರ ಅಜ್ಜಿಗೆ ಕೊರೋನಾ! 3ನೇ ಹಂತಕ್ಕೆ ಕರ್ನಾಟಕ?

ಪ್ರಕರಣದ ತೀವ್ರತೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಶಾಸಕ ಎಚ್‌.ಕೆ. ಪಾಟೀಲ, ಡಿಸಿ ಎಂ.ಜಿ. ಹಿರೇಮಠ ಸುದ್ದಿಗೋಷ್ಠಿ ನಡೆಸಿ ಲಾಕ್‌ಡೌನ್‌ ಪಾಲನೆಗೆ ಎಚ್ಚರಿಸಿದ್ದಾರೆ. ಸಾರ್ವಜನಿಕರು ಮಾತ್ರ ಬುಧವಾರ ಬೇಕಾ ಬಿಟ್ಟಿಯಾಗಿ ಸಂಚರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಎಂದಿನಂತೆ ವರ್ತಿಸುತ್ತಿರುವುದು ತೀರಾ ಬೇಸರದ ಸಂಗತಿಯಾಗಿದೆ.

ಪಡಿತರಕ್ಕಾಗಿ ಜನಜಂಗುಳಿ

ಲಾಕ್‌ಡೌನ್‌ ವೇಳೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಪಡಿತರದಾರರಿಗೆ 2 ತಿಂಗಳ ರೇಷನ್‌ ನೀಡಲು ಮುಂದಾಗಿದೆ. ಆದರೆ ಅವಳಿ ನಗರದ ನ್ಯಾಯ ಬೆಲೆ ಅಂಗಡಿಗಳಲ್ಲಿ ರೇಷನ್‌ಗಾಗಿ ಜನ ಮುಗಿಬಿಳುತ್ತಿದ್ದು, ಗುಂಪು ಗುಂಪಾಗಿ ನಿಂತು ಸಾಮಾಜಿಕ ಅಂತರದ ಅರ್ಥವನ್ನೇ ಕಳೆದಿದ್ದಾರೆ. 

ಬುಧವಾರ ಗದಗ ನಗರದ ಪಂಚಾಕ್ಷರಿ ನ್ಯಾಯ ಬೆಲೆ ಅಂಗಡಿಯಲ್ಲಿಯೂ ತೀವ್ರ ಗದ್ದಲ ಉಂಟಾಗಿತ್ತು. ಬೆಟಗೇರಿಯ ಮಲ್ಲಿಕಾರ್ಜುನ ನಗರದಲ್ಲಿಯೂ ಇದೇ ರೀತಿ ಸ್ಥಿತಿ ಬಂದಿತು. ಅಂಚೆ ಕಚೇರಿ ಮುಂದೆ ವಿಧವಾ ವೇತನ, ವೃದ್ಧಾಪ್ಯ ವೇತನಕ್ಕಾಗಿ ಜನರು ಸುಮಾರು 2 ಮೀಗೂ ಹೆಚ್ಚು ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಸಾಮಾಜಿಕ ಅಂತರವೂ ಇರಲಿಲ್ಲ, ಮಾಸ್ಕ್‌ ಸಹ ಧರಿಸಿರಲಿಲ್ಲ. ಸರ್ಕಾರ ಎಷ್ಟೇ ಹೇಳಿದರೂ ಕೇಳದೇ, ಪೊಲೀಸರ ಮಾತಿಗೆ ಬೆಲೆ ಕೊಡದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಾಗೂ ಲಾಕ್‌ ಡೌನ್‌ ನಿಯಮ ಪಾಲಿಸದ ಕೆಲವರಿಂದ ಇಡೀ ಸಮುದಾಯಕ್ಕೆ ಆತಂಕ ಎದುರಾಗಿದ್ದು, ಜಿಲ್ಲಾಡಳಿತ ಇನ್ನು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಬಡವರ ತುತ್ತಿನ ಚಿಲಕ್ಕೂ ಕೊರೋನಾ ಕಾಟ: ಊಟ ಸಿಗದೆ ಅಲೆಮಾರಿಗಳ ಪರದಾಟ!

ಮಾನವಿಯತೆ ಮೆರೆದ ಪೊಲೀಸರು

ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಮೂರ್ಛೆ ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ಉಪಚರಿಸಿ ಮನೆಗೆ ಕಳಿಸುವ ಮೂಲಕ ಗದಗ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಬುಧವಾರ ಬೆಳಗ್ಗೆ ಮಾರುಕಟ್ಟೆಗೆ ಬಂದಿದ್ದ ಗದಗ ಪಂಚಾಕ್ಷರಿ ನಗರದ ನಿವಾಸಿ ಶಿವಾ​ನಂದ ಎಂಬುವರು ಮೂರ್ಛೆ ರೋಗ ಕಾಣಿಸಿಕೊಂಡು ನರಳುತ್ತಿದ್ದರು. ಇದನ್ನು ಕಂಡ ಪೊಲೀಸ್‌ ಸಿಬ್ಬಂದಿ ವ್ಯಕ್ತಿಯನ್ನು ಉಪಚರಿಸಿ ಕೂಡಲೇ ಆಟೋ ಮೂಲಕ ಆಸ್ಪತ್ರೆಗೆ ಕಳುಹಿಸಿದರು.

ಲಾಕ್‌ಡೌನ್‌ ಬಿಗಿ: ಬಂಕ್‌ ಬಂದ್‌

ಜಿಲ್ಲೆಯಲ್ಲಿ ಮಂಗಳವಾರ ಕೊರೋ​ನಾ ಕಾಲಿಟ್ಟಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಲಾಕ್‌ಡೌನ್‌ ಇನ್ನೂ ಬಿಗಿಗೊಳಿಸಿದ ಭಾಗವಾಗಿ ಅವಳಿ ನಗರದಲ್ಲಿ ಪೆಟ್ರೋಲ್‌ ಬಂಕ್‌ ಸಹ ಬಂದ್‌ ಮಾಡಿ ಆದೇಶಿಸಿದೆ. ಲಾಕ್‌ಡೌನ್‌ ಉಲ್ಲಂಘಿಸಿ ಅನಗತ್ಯವಾಗಿ ವಾಹನಗಳ ಓಡಾಟ ತಡೆಗೆ ಕ್ರಮ ವಹಿಸಿ ಹೊರಡಿಸಿದ ಜಿಲ್ಲಾಡಳಿತದ ಆದೇಶದ ಮೇರೆಗೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಎಲ್ಲ ಬಂಕ್‌ಗಳು ಸಂಪೂರ್ಣ ಬಂದ್‌ ಆಗಿವೆ. ಆದರೆ ಅಗತ್ಯ ಸೇವೆಗಳ ವಾಹನಗಳಿಗೂ ಸಹ ಪೆಟ್ರೋಲ್‌, ಡೀಸೆಲ್‌ ಲಭ್ಯವಾಗುತ್ತಿಲ್ಲ. ಇದು ಒಂದೆಡೆಯಾದರೆ ಆ್ಯಂಬುಲೆಸ್ಸ್‌ಗಳಿಗೂ ಡಿಸೇಲ್‌ ಸಿಗದೇ ಪರದಾಡಿದ್ದು ನಂತರ ಜಿಲ್ಲಾಡಳಿತ ಸೂಚನೆಯಂತೆ ಡಿಸೇಲ್‌ ನೀಡಲಾಗಿದೆ.

ಅಕ್ರಮ ಮದ್ಯ ವಶ

ಲಾಕ್‌ಡೌನ್‌ ಮಧ್ಯದಲ್ಲೇ ಗದಗ ಜಿಲ್ಲೆಯಲ್ಲಿ ಸುಮಾರು 173 ಕಡೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಅಪಾರ ಪ್ರಮಾಣದ ಮದ್ಯ ವಶಕ್ಕೆ ಪಡೆದು 22 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರ್ಕಾರ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಆದರೂ ಅಕ್ರಮವಾಗಿ ಮದ್ಯ ಮಾರಾಟ ನಡೆದಿರುವ ಕುರಿತು ತಿಳಿದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಬಕಾರಿ ಡಿಸಿ ಮೋತಿಲಾಲ್‌ ನೇತೃತ್ವದಲ್ಲಿ ದಾಳಿ ನಡೆಸಿ 47 ಲೀಟರ್‌ ಮದ್ಯ, 18 ಲೀಟರ್‌ ಬಿಯರ್‌, 55 ಲೀಟರ್‌ ಕಳ್ಳಭಟ್ಟಿ ಸಾರಾಯಿ, 15 ಬೈಕ್‌ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡಿದವರ ವಿರುದ್ಧ ಒಟ್ಟು 22 ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

"