ರೋಣ(ಏ.05): ತಾಲೂಕಿನ ಕೊತಬಾಳ ಗ್ರಾಮದಲ್ಲಿ ಎರಡು ಅಲೆಮಾರಿ ಕುಟುಂಬಗಳು ಕೊರೋನಾ ಲಾಕ್‌ಡೌನ್‌ ಹೊಡೆತಕ್ಕೆ ತತ್ತರಿಸಿ, ತುತ್ತು ಅನ್ನಕ್ಕೂ ಪರಿತಪಿಸುತ್ತಿವೆ.

ಮಹಾರಾಷ್ಟ್ರ ಪಂಢರಾಪುರ ಜಿಲ್ಲೆಯ ಮಂಗಳವಾಡೆ ಪಟ್ಟಣದ ನಾಮದೇವ ಸಿಂಧೆ ಮತ್ತು ಮಾರುತಿ ಬೋಸ್ಲೆ ಅಲೆಮಾರಿ ಕುಟುಂಬಗಳು ಕಳೆದ 15 ದಿನಗಳಿಂದ ತಾಲೂಕಿನ ಕೊತಬಾಳ ಗ್ರಾಮದಲ್ಲಿಯೇ ಲಾಕ್‌ಡೌನ್‌ ಆಗಿದ್ದಾರೆ. ಸದ್ಯ ಅಂಕಲಗಿ ಅಡವಿಸಿದ್ದೇಶ್ವರ ಮಠದ ಸಮೀಪ ತಾತ್ಕಾಲಿಕ ಟೆಂಟ್‌ ಹಾಕಿಕೊಂಡು ವಾಸವಾಗಿದ್ದಾರೆ. ನಿತ್ಯ ಮೂರು ಹೊತ್ತಿನ ಅನ್ನಕ್ಕೆ ತೀವ್ರ ಪರಿತಪಿಸುತ್ತಿದ್ದಾರೆ. ಗ್ರಾಮದಲ್ಲಿ ಯಾರಾದ್ದಾದರೂ ಮನೆಗೆ ಹೋಗಿ ರೊಟ್ಟಿ, ಅನ್ನ, ಚಪಾತಿ ಏನಾದರೂ ಬೇಡಲು ಕೊರೋನಾದಿಂದ ಗ್ರಾಮಾದೊಳು ಪ್ರವೇಶ ನಿಷೇಧವಾಗಿದೆ.

ಲಾಕ್‌ಡೌನ್‌ನಿಂದಾಗಿ ಅತಂತ್ರವಾಗಿ ಕುಳಿತಿವೆ ಅಲೆಮಾರಿ ಕುಟುಂಬಗಳು

ಲಾಕ್‌ಡೌನ್‌ ಆದೇಶ ಜಾರಿಯಾಗುತ್ತಿದ್ದಂತೆ ತಹಸೀಲ್ದಾರ್‌ ಜೆ.ಬಿ. ಜಕ್ಕನಗೌಡ್ರ, ಈ ಅಲೆಮಾರಿ ಕುಟುಂಬ ನೆಲೆಸಿದ ಸ್ಥಳಕ್ಕೆ ತೆರಳಿ, ನೀವು ಲಾಕ್‌ಡೌನ್‌ ಮುಗಿಯುವವರೆಗೂ ಯಾವುದೇ ಊರಿಗೆ ಹೋಗುವಂತಿಲ್ಲ, ಊರಲ್ಲಿ (ಕೊತಬಾಳ)ಯೂ ಸುತ್ತುವಂತಿಲ್ಲ ಎಂದು ತಾಕೀತು ಮಾಡಿದ್ದಾರಂತೆ. ಅಲ್ಲದೇ ಸ್ಥಳೀಯ ಗ್ರಾಪಂ ಸಹ ಇವರಿಗೆ ಊರಲ್ಲಿ ಸುತ್ತಾಡದಂತೆ ನಿರ್ಬಂಧ ವಿಧಿಸಿದೆ. ಈ ಹಿಂದೆ ತಾವು ಭಿಕ್ಷೆ ಬೇಡಿ ಕೂಡಿಟ್ಟ ದವಸ ಧಾನ್ಯಗಳನ್ನು ವಾರದ ಹಿಂದೆಯೇ ಖಾಲಿ ಮಾಡಿದ್ದಾರೆ. ಕಾಟಾಚಾರಕ್ಕೆ ಎಂಬಂತೆ ಸ್ಥಳೀಯ ಗ್ರಾಪಂ 10 ದಿನಗಳ ಹಿಂದೆ ನ್ಯಾಯಬೆಲೆ ಅಂಗಡಿ ಮೂಲಕ ಕೇವಲ 10 ಕೆಜಿ ಅಕ್ಕಿ ಕೊಡಿಸಿ ಕೈತೊಳೆದುಕೊಂಡಿದೆ. ಆ 10 ಕೆ.ಜಿ ಅಕ್ಕಿಯಿಂದಲೇ 7 ಜನರು ಕೇವಲ ಗಂಜಿ ಕುಡಿದು ಬದುಕಿದ್ದಾರೆ. ಎಲ್ಲಿ ಹೋದರೂ ಕೊರೋನಾ ಕಾಟ ತಪ್ಪಿದ್ದಲ್ಲವೆಂದು ಸಂಕಷ್ಟದಿಂದ ದಿನ ದೂಡುತ್ತಿದ್ದೇವೆ ಎನ್ನುತ್ತಾರೆ ಅಲೆಮಾರಿ ಮಾರುತಿ ಸಿಂಧೆ.

ಸದ್ಯ ಗಂಜಿ ಕುಡಿದು ಬದುಕು ಸಾಗಿಸುತ್ತಿರುವ ಅಲೆಮಾರಿ ಕುಟುಂಬಕ್ಕೆ ಕೂಡಲೇ ತಾಲೂಕು ಆಡಳಿತ ಮತ್ತು ಸ್ಥಳೀಯ ಗ್ರಾಪಂ ಆಡಳಿತ ಮಂಡಳಿ ನೆರವಿಗೆ ಧಾವಿಸಬೇಕಿದೆ. ಜತೆಗೆ ಯಾರಾದರೂ ದಾನಿಗಳಿದ್ದಲ್ಲಿ ಅಲೆಮಾರಿ ಕುಟುಂಬ ಸಂಕಷ್ಟಕ್ಕೆ ಸಹಾಯಹಸ್ತ ಚಾಚಲು ಮುಂದಾಗಬೇಕು ಎಂದು ಕೊತಬಾಳದ ಸ್ನೇಕ ಸ್ವಾಮಿ ಮೇಘಯ್ಯಸ್ವಾಮಿ ಹಿರೇಮಠ ಅವರು ಹೇಳಿದ್ದಾರೆ.