ಬಿ.ವಿ. ಶೇಷಗಿರಿ

ಶಿರಾಳಕೊಪ್ಪ(ಏ.01): ಕೊರೋನಾ ಮಹಾಮಾರಿ ವಿರುದ್ಧ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಲಾಕ್‌ಡೌನ್‌ ಘೋಷಿಸಿದ್ದರೂ, ಪಟ್ಟಣ ಪಂಚಾಯ್ತಿ ವಿವಿಧ ಭಾಗಗಳಲ್ಲಿನ ಖಾಲಿ ಸ್ಥಳಗಳಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವ ನೂರಾರು ಅಲೆಮಾರಿಗಳಿಗೆ ಇದ್ಯಾವುದರ ಅರಿವಿಲ್ಲ. ಪಟ್ಟಣ ಪಂಚಾಯ್ತಿ ಕೂಡ ಇವರಿಗೆ ಅರಿವು ಮೂಡಿಸಲು ಮುಂದಾಗಿಲ್ಲ. ಹೀಗಾಗಿ ಕೊರೋನಾ ನಿಯಂತ್ರಣ ನಿಯಮಗಳಿಗೆ ಇಲ್ಲಿ ಬೆಲೆಯೇ ಇಲ್ಲ.

ಎಲ್ಲೆಂದರಲ್ಲಿ ಅಲೆದಾಡುವ, ಮುನ್ನೆಚ್ಚರಿಕೆ ವಹಿಸದ ಈ ಅಲೆಮಾರಿಗಳು ಯಥಾ ಪ್ರಕಾರ ಜೀವನ ನಡೆಸುತ್ತಿದ್ದಾರೆ. ತೀರಾ ಅನಕ್ಷರಸ್ಥರಾದ ಇವರಿಗೆ ಕೊರೋನಾ ಸೂಚನೆಗಳು ತಲುಪಿಯೇ ಇಲ್ಲ. ಆದರೆ ಇವರ ಯಥಾಸ್ಥಿತಿ ಜೀವನ ನಗರದ ನಾಗರಿಕರಲ್ಲಿ ಆತಂಕ ಮೂಡಿಸಿದೆ. ಪ.ಪಂ. ಕಾರ್ಯವೈಖರಿ ಬಗ್ಗೆ ಜನರಲ್ಲಿ ಆಕ್ರೋಶ ಮಡುಗಟ್ಟಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸುವಂತೆಯೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರೈತರ ನೆರವಿಗೆ ಧಾವಿಸಿದ ಸಿಎಂ: ಇಂದಿನ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಇಂತಿವೆ

ಎಲ್ಲರೂ ಹೊರಗೆ ಬಾರದೆ ಮನೆಯಲ್ಲಿಯೇ ಜೀವನ ನಡೆಸುತ್ತಿದ್ದರೆ, ಈ ಅಲೆಮಾರಿಗಳು ಮಾತ್ರ ಎಲ್ಲೆಂದರಲ್ಲಿ ಅಲೆಯುತ್ತಿದ್ದಾರೆ. ಕೇರಿ ಕೇರಿಗೆ ಬಂದು ನೀರು ತೆಗೆದುಕೊಂಡು ಹೋಗುತ್ತಾರೆ. ಮಕ್ಕಳು ಭಿಕ್ಷೆ ಬೇಡುವುದು ನಿಂತಿಲ್ಲ. ಸ್ವಚ್ಛತೆ ಇವರಿಗೆ ಗೊತ್ತೇ ಇಲ್ಲ. ಸಾಮಾಜಿಕ ಅಂತರವಂತೂ ಕೇಳುವುದೇ ಬೇಡ. ಇಷ್ಟೆಲ್ಲಾ ಇದ್ದರೂ ಸಂಬಂಧಿಸಿದ ಅಧಿಕಾರಿಗಳ ಜಾಣ ಕುರುಡು ಮುಂದುವರಿದೇ ಇದೆ.

ಇವರಲ್ಲಿ ಕೆಲವರು ಪಕ್ಕದ ಹಾವೇರಿ ಜಿಲ್ಲೆಯವರಾದರೆ, ಇನ್ನು ಕೆಲವರು ಅಕ್ಕಪಕ್ಕದ ಜಿಲ್ಲೆಯವರು. ಅವರೆಲ್ಲರಿಗೂ ಈ ಹಿಂದೆಯೇ ಊರು ಬಿಟ್ಟು ಹೋಗುವಂತೆ ತಿಳಿಸಿದ್ದರೆ ಬಹುಶಃ ಹೋಗುತ್ತಿದ್ದರೇನೋ. ಜೆಸಿಐ ಮಂಗಳವಾರ ಇವರಿಗೆ ಆಹಾರದ ಕಿಟ್‌ ನೀಡಲು ಮುಂದಾದರೂ ಸಾರ್ವಜನಿಕರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲೆಮಾರಿಗಳಲ್ಲಿ ಕೆಲವರಲ್ಲಿ ಮೋಟಾರ್‌ ಬೈಕ್‌, ಇನ್ನು ಕೆಲವರಲ್ಲಿ ಕಾರು, ಟಾಟಾ ಏಸ್‌ ವಾಹನಗಳಿದ್ದು, ನಿತ್ಯ ಬೇರೆ ಕಡೆ ತೆರಳುತ್ತಿದ್ದಾರೆ.

ಎಲ್ಲಿಗೆಂದು ಮಾತ್ರ ಯಾರಿಗೂ ಗೊತ್ತಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯದ ನಡುವೆಯೂ ಇದುವರೆಗೆ ಏನೂ ಆಗದಿರುವುದೇ ಸಮಾಧಾನ ಎನ್ನುತ್ತಾರೆ ನಾಗರಿಕರು. ಈಗಲಾದರೂ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು. ಈ ಅಲೆಮಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕೊರೋನಾ ಕುರಿತಾಗಿ ಅರಿವು ಮೂಡಿಸಬೇಕು. ಮನೆಯಲ್ಲಿಯೇ ಇರುವಂತೆ ಸೂಚಿಸಬೇಕು. ಮಹಾಮಾರಿಯಿಂದ ರಕ್ಷಣೆ ನೀಡಬೇಕು ಎನ್ನುತ್ತಾರೆ ಸ್ಥಳೀಯರು.

ಭಾರತ್‌ ಲಾಕ್‌ಡೌನ್‌: 'ವಿನಾಕಾರಣ ಮನೆಯಿಂದ ಹೊರಬಂದ್ರೆ ಪೊಲೀಸರಿಂದ ಕಠಿಣ ಕ್ರಮ'

ಈ ಬಗ್ಗೆ ಮಾತನಾಡಿದ ಶಿಕಾರಿಪುರ ತಹಸೀಲ್ದಾರ್‌ ಕವಿರಾಜ್‌ ಅವರು, ಈ ಅಲೆಮಾರಿಗಳ ಕುರಿತು ಪಪಂ. ಪಂಚಾಯ್ತಿ ಮುಖ್ಯಾಧಿಕಾರಿಗಳ ಬಳಿ ಈ ಹಿಂದೆಯೇ ಮಾತನಾಡಿದ್ದು, ಕೆಲವು ಸೂಚನೆಗಳನ್ನು ನೀಡಿದ್ದೆ. ಎಲ್ಲವೂ ಸರಿಯಾಗಿದೆ ಎಂದೇ ಭಾವಿಸಿದ್ದೆ. ಏನೂ ಕ್ರಮ ಕೈಗೊಂಡಿಲ್ಲ ಎನ್ನುವುದು ಬೇಸರದ ಸಂಗತಿ. ತಕ್ಷಣವೇ ಈ ಕುರಿತು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.