ಭದ್ರಾವತಿ(ಏ.01): ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಕೈಗೊಂಡಿರುವ ಕ್ರಮಗಳು ಶ್ಲಾಘನೀಯವಾಗಿದ್ದು, ಇದುವರೆಗೂ ಯಾವುದೇ ದೃಢಪಟ್ಟ ಪ್ರಕರಣ ದಾಖಲಾಗದಿರುವುದು ಸಮಾಧಾನಕರ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

ನಗರಸಭೆ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಕೇಂದ್ರಗಳಲ್ಲಿ ಕೋವಿಡ್‌-19 ನಿಯಂತ್ರಣ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಿನಾಕಾರಣ ಮನೆಯಿಂದ ಹೊರಬರುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು.

ರೋಡಿಗಳಿಯೋ ವಾಹನ ಸವಾರರಿಗೆ ಖಡಕ್ ಎಚ್ಚರಿಕೆ: ಇದು ಏಪ್ರಿಲ್ ಫೂಲ್ ಅಲ್ಲ

ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಎಲ್ಲ ಅಗತ್ಯ ವಸ್ತುಗಳನ್ನು ಪೂರೈಸಲು ಜಿಲ್ಲಾಡಳಿತ ಸಿದ್ಧವಿದೆ. ಯಾರು ಸಹ ಆತಂಕಪಡುವ ಅಗತ್ಯವಿಲ್ಲ. ಅಗತ್ಯ ವಸ್ತುಗಳನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ರೂಪಿಸಿದಾಗ ಮಾತ್ರ ಜನರು ಖರೀದಿಗಾಗಿ ಹೊರಬರುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.

ಕೊರೋನಾ ಸೋಕಿಂತರಿಗೆ ಸೂಕ್ತ ಚಿಕಿತ್ಸೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆಯುಷ್ಮಾನ್‌ ಕಾರ್ಡ್‌ ಬಡವರಿಗೆ ಕೇಂದ್ರ ಸರ್ಕಾರ ರೂಪಿಸಿರುವ ಮಹಾತ್ವಕಾಂಕ್ಷಿ ಯೋಜನೆಯಾಗಿದೆ. ಆಯುಷ್ಮಾನ್‌ ಕಾರ್ಡ್‌ ಹೊಂದಿರುವ ಬಡವರಿಗೆ ಯಾವುದೇ ರೀತಿ ಶುಲ್ಕ ಪಡೆದುಕೊಳ್ಳದೆ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ನೀಡಲು ಬರುವುದಿಲ್ಲ ಎಂದು ವಾಪಾಸ್ಸು ಕಳುಹಿಸುವುದು ಸರಿಯಲ್ಲ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ವಿಐಎಸ್‌ಎಲ್‌ ಕಾರ್ಖಾನೆಯಲ್ಲಿ ಯಾವುದೇ ಕಾರಣಕ್ಕೂ ಉತ್ಪಾದನೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಸಂಬಂಧಪಟ್ಟ ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಒಂದೇ ಬಾರಿ ಹೆಚ್ಚು ಕಾರ್ಮಿಕರು ಕರ್ತವ್ಯ ನಿರ್ವಹಿಸದಂತೆ, ದಿನ ಬಿಟ್ಟು ದಿನ ಕೆಲಸ ನೀಡುವುದು ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಡಿಎಚ್‌ಒ ರಾಜೇಶ್‌ ಸುರಗಿಹಳ್ಳಿ, ಎಸಿ ಟಿ.ವಿ.ಪ್ರಕಾಶ್‌, ತಹಸೀಲ್ದಾರ್‌ ಸೋಮಶೇಖರ್‌, ತಾಪಂ ಇಒ ಕೆ.ಜೆ. ತಮ್ಮಣ್ಣಗೌಡ ಮತ್ತು ನಗರಸಭೆ ಪೌರಾಯುಕ್ತ ಮನೋಹರ್‌ ಕೊರೋನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಶಾಸಕರಾದ ಬಿ.ಕೆ. ಸಂಗಮೇಶ್ವರ್‌, ಕೆ.ಬಿ. ಅಶೋಕ್‌ ನಾಯ್ಕ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು, ಜಿ.ಪಂ. ಸಿಇಒ ಎಂ.ಎಲ್‌. ವೈಶಾಲಿ ಇನ್ನಿತರರು ಉಪಸ್ಥಿತರಿದ್ದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ಉಪ ಸಹಾಯಕ ಸಂರಕ್ಷಣಾಧಿಕಾರಿ ಸುಬ್ರಮಣ್ಯ, ಪೊಲೀಸ್‌ ಉಪಾಧೀಕ್ಷಕ ಸುಧಾಕರ ನಾಯ್ಕ, ಜಿಲ್ಲಾ ಆರೋಗ್ಯಾಧಿಕಾರಿ(ಆರ್‌ಸಿಎಚ್‌) ನಾಗರಾಜ್‌ ನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್‌. ಗಾಯತ್ರಿ, ಬಿಇಒ ಟಿ.ಎನ್‌. ಸೋಮಶೇಖರಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್‌, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಚಿದಾನಂದ, ಅಗ್ನಿಶಾಮಕ ಠಾಣಾಧಿಕಾರಿ ವಸಂತ್‌ಕುಮಾರ್‌, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.