ಬೆಂಗಳೂರು(ಮಾ.25): ಪ್ರತಿ ವರ್ಷ ಯುಗಾದಿ ಹಬ್ಬದಲ್ಲಿ ವರ್ಷದ ತೊಡಕು ಆಚರಿಸಿ ಸಂಭ್ರಮಿಸುತ್ತಿದ್ದವರಿಗೆ ಕೊರೋನಾ ತಡೆಯೊಡ್ಡಿದೆ.

ದೇಶಾದ್ಯಂತ ಲಾಕ್‌ಡೌನ್‌ ಜಾರಿ ಇರುವುದರಿಂದ ಕುರಿ ಮಾಂಸದ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳು, ರೈತರಿಗೂ ನಿರಾಸೆಯಾಗಿದೆ. ಈ ಬಾರಿ ಮಾಂಸದೂಟ ಮಾಡುವ ಭಾಗ್ಯವೂ ಇಲ್ಲವಾಗುವ ಸಾಧ್ಯತೆ ಹೆಚ್ಚಿದೆ.
ಯುಗಾದಿ ಹಬ್ಬವನ್ನು ಸಂಭ್ರಮದಿಂದ ಬರಮಾಡಿಕೊಂಡವರು ಅದ್ಧೂರಿಯಾಗಿ ವರ್ಷದ ತೊಡಕು ಆಚರಿಸಿ ಖುಷಿ ಪಡುತ್ತಿದ್ದರು. ರಾಜ್ಯದಲ್ಲಿ ವಿವಿಧ ಜಿಲ್ಲೆಯ ಗಡಿಗಳೂ ಬಂದ್‌ ಆಗಿರುವುದರಿಂದ ಕುರಿಗಳ ಸರಬರಾಜು ಸಹ ಆಗುತ್ತಿಲ್ಲ. ಇದರಿಂದ ಅಂಗಡಿಗಳಲ್ಲಿ ಖರೀದಿಗೆ ಕುರಿ ಮಾಂಸ ಅಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಕಂಪ್ಲೀಟ್ ಲಾಕ್‌ಡೌನ್: ಅಗತ್ಯ ವಸ್ತು ಪೂರೈಕೆ ಸರ್ಕಾರಕ್ಕೆ ಸವಾಲು!

ಕೊರೋನಾ ಸೋಂಕು ವ್ಯಾಪಿಸುತ್ತಿರುವುದಿಂದ ಸರ್ಕಾರ ಕೆಲವೆಡೆ ಕುರಿ-ಕೋಳಿ ಮಾಂಸದಂಗಡಿಗಳನ್ನು ಮುಚ್ಚಿಸಿದೆ. ಕೆಲ ಮಾಂಸ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ತೆರೆಯದಿರಲು ನಿರ್ಧರಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಆಯಾ ಊರುಗಳಲ್ಲಿ ಕುರಿಗಳನ್ನು ಕಡಿದು ಮಾಂಸ ಮಾರಾಟ ಮಾಡಲಾಗುತ್ತದೆ. ಜಿಲ್ಲೆಗಳ ಗಡಿಗಳನ್ನು ಬಂದ್‌ ಮಾಡಿರುವುದರಿಂದ ಕುರಿ, ಮೇಕೆ ಸಾಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ವ್ಯಾಪಾರಿಗಳು ಹೇಳಿದರು.
ಯುಗಾದಿ ಸಂದರ್ಭದಲ್ಲಿ ಮಾಂಸ ಮಾರಾಟದಲ್ಲಿ ಶೇ.10ರಷ್ಟು ಹೆಚ್ಚಳವಾಗುತ್ತಿತ್ತು. ಬೆಂಗಳೂರಿನಲ್ಲಿ ಒಂದು ಕೆ.ಜಿ. ಕುರಿ ಮಾಂಸಕ್ಕೆ 650 ರಿಂದ 800 ರು.ಗೆ ಖರೀದಿಯಾಗುತ್ತಿತ್ತು. ಯುಗಾದಿ, ಬಕ್ರೀದ್‌, ಆಯುಧ ಪೂಜೆಯಲ್ಲಿ ಶೇ.20-25ರಷ್ಟು ಹೆಚ್ಚಿನ ಲಾಭವಾಗುತ್ತದೆ. ಇದರಿಂದ ರೈತರಿಗೂ ಉತ್ತಮ ಬೆಲೆ ಸಿಗುತ್ತಿತ್ತು ಎಂದು ಕುರಿ-ಮೇಕೆ ಸಾಕಾಣಿಕೆದಾರರ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್‌ಗೌಡ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಮತ್ತೆ 8 ಮಂದಿಗೆ ಸೋಂಕು: ಈವರೆಗಿನ 1 ದಿನದ ಗರಿಷ್ಠ ಪ್ರಕರಣ ದಾಖಲು!

ರಾಜ್ಯ ಸರ್ಕಾರ ಲಾಕ್‌ಡೌನ್‌ ಆದೇಶಿಸಿದೆ. ಹೀಗಾಗಿ ಅಂಗಡಿ ಬಂದ್‌ ಮಾಡಿ ಬೆಂಬಲ ಸೂಚಿಸಿದ್ದೇವೆ. ಯುಗಾದಿ ಸಂದರ್ಭದಲ್ಲಿ 50-60 ಕುರಿಗಳನ್ನು ಕೊಯ್ದು ಮಾರಾಟ ಮಾಡಲಾಗುತ್ತಿತ್ತು. ಈ ಬಾರಿ ಕೊರೋನಾ ವ್ಯಾಪಿಸಿರುವುದರಿಂದ ಮಾಂಸ ಮಾರಾಟ ಮಾಡುತ್ತಿಲ್ಲ. ಕಳೆದ ಒಂದು ವಾರದಿಂದಲೇ ಅಂಗಡಿ ಮುಚ್ಚಲಾಗಿದೆ. ವ್ಯಾಪಾರಕ್ಕಿಂತ ಜನರ ಆರೋಗ್ಯವೂ ಬಹುಮುಖ್ಯ ಎಂದು ಬ್ಯಾಟರಾಯನಪುರದ ಪಾಪಣ್ಣ ಮಟನ್‌ ಸ್ಟಾಲ್‌ ನ ಮಾಲೀಕ ಸಂತೋಷ್‌ ಪಾಪಣ್ಣ ಹೇಳಿದ್ದಾರೆ.