ರಾಜ್ಯದಲ್ಲಿ ಮತ್ತೆ 8 ಮಂದಿಗೆ ಸೋಂಕು: ಈವರೆಗಿನ 1 ದಿನದ ಗರಿಷ್ಠ ಪ್ರಕರಣ ದಾಖಲು!
ರಾಜ್ಯದಲ್ಲಿ ನಿನ್ನೆ ಮತ್ತೆ 8 ಮಂದಿಗೆ ಸೋಂಕು!| ಈವರೆಗಿನ 1 ದಿನದ ಗರಿಷ್ಠ ಪ್ರಕರಣ ದಾಖಲು| ಒಟ್ಟಾರೆ ವೈರಸ್ ಸೋಂಕಿತರ ಸಂಖ್ಯೆ 41ಕ್ಕೇರಿಕೆ| ಕರುನಾಡಿಗೆ ಕೊರೋನಾ ಕಾಟ
ಬೆಂಗಳೂರು(ಮಾ.25): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಮಂಗಳವಾರ ಒಂದೇ ದಿನ ಬರೋಬ್ಬರಿ ಎಂಟು ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.
ಈ 41 ಮಂದಿಯಲ್ಲಿ ಆರು ಮಂದಿ ಕೇರಳ ಮೂಲದವರಾಗಿದ್ದು, ಬೆಂಗಳೂರು ಹಾಗೂ ಮಂಗಳೂರು ಮೂಲಕ ಕೇರಳಕ್ಕೆ ತೆರಳುತ್ತಿದ್ದರು. ಮಂಗಳವಾರ ವರದಿಯಾಗಿರುವ ಎಂಟು ಪ್ರಕರಣಗಳಲ್ಲಿ ಮೂರು ವ್ಯಕ್ತಿಗಳು ಕೇರಳದ ಕಾಸರಗೋಡು ಮೂಲದವರಾಗಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಾಗಲೇ ಸೋಂಕು ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿ ಮಂಗಳೂರಿನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ 7 ಪ್ರಕರಣ ವರದಿಯಾಗಿ ಸೋಂಕಿತರ ಸಂಖ್ಯೆ 33ಕ್ಕೆ ಮುಟ್ಟಿತ್ತು. ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಸೋಂಕಿತರ ಸಂಖ್ಯೆ 41ಕ್ಕೆ ಹೆಚ್ಚಾಗಿದೆ. ಬಳಿಕ ಈ ಸಂಖ್ಯೆ ಇನ್ನಷ್ಟುಹೆಚ್ಚಳ ಆಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದು, ಈ ಬಗ್ಗೆ ಬುಧವಾರ ಬೆಳಗ್ಗೆ ಮಾಹಿತಿ ನೀಡುವುದಾಗಿ ಹೇಳಿದರು.
ಈ ನಡುವೆ, ಮಂಗಳವಾರ ಬೆಂಗಳೂರಿನ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು ಮೂರು ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದ್ದು, ಇವರು ಹದಿನಾಲ್ಕು ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಗಿರಲಿದ್ದಾರೆ.
ಹೊಸದಾಗಿ 8 ಮಂದಿಗೆ ಸೋಂಕು:
ಮಂಗಳವಾರ ದೃಢಪಟ್ಟಪ್ರಕರಣಗಳ ಪೈಕಿ ಮಾ.20ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಕಾಸರಗೋಡು ಮೂಲದ 32 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದ್ದು, ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದಲ್ಲದೆ, ಮಾ.21ರಂದು ದುಬೈನಿಂದ ಆಗಮಿಸಿದ್ದ ಉತ್ತರ ಕನ್ನಡ ಮೂಲದ 40 ವರ್ಷದ ವ್ಯಕ್ತಿಯಲ್ಲಿ ಸೋಂಕು ಖಚಿತಪಟ್ಟಿದ್ದು, ಉತ್ತರ ಕನ್ನಡ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮಾ.18ರಂದು ದುಬೈನಿಂದ ಮುಂಬೈ ಮಾರ್ಗವಾಗಿ ರಾಜ್ಯಕ್ಕೆ ಬಂದಿದ್ದ ಉತ್ತರ ಕನ್ನಡ ಜಿಲ್ಲೆಯ 65 ವರ್ಷದ ಹಿರಿಯ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇವರನ್ನೂ ಪ್ರತ್ಯೇಕ ನಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಗೌರೀಬಿದನೂರಿನಲ್ಲಿ 3ನೇ ಪ್ರಕರಣ:
ಇತ್ತೀಚೆಗೆ ಮೆಕ್ಕಾ ಪ್ರವಾಸ ಹೋಗಿ ಬಂದು ಕೊರೋನಾ ಸೋಂಕಿತರಾಗಿದ್ದ ಚಿಕ್ಕಬಳ್ಳಾಪುರದ ಗೌರೀಬಿದನೂರು ವ್ಯಕ್ತಿಗಳ ಸಹ ಪ್ರಯಾಣಿಕರಾಗಿದ್ದ 56 ವರ್ಷದ ಮಹಿಳೆಯಲ್ಲಿ ಸೋಂಕು ದೃಢವಾಗಿದ್ದು, ಚಿಕ್ಕಬಳ್ಳಾಪುರದ ಪ್ರತ್ಯೇಕ ನಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಯು ಮಾ.14ರಂದು ಸೌದಿ ಅರೇಬಿಯಾದಿಂದ ಹೈದರಾಬಾದ್‌ಗೆ ಆಗಮಿಸಿದ್ದು, ಅಲ್ಲಿಂದ ಹಿಂದೂಪುರಕ್ಕೆ ರೈಲಿನಲ್ಲಿ ಪ್ರಯಾಣ ಮಾಡಿದ್ದರು. ಹಿಂದೂಪುರದಿಂದ ಗೌರೀಬಿದನೂರಿಗೆ ಆಗಮಿಸಿದ್ದ ಅವರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾ ವಹಿಸಲಾಗಿತ್ತು. ಇದೀಗ ಇವರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಗೌರೀಬಿದನೂರು ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನ ಕೊರೋನಾ ಸೋಂಕಿತರೊಬ್ಬರೊಡನೆ (ಸೋಂಕಿತ -13) ಸಂಪರ್ಕ ಹೊಂದಿದ್ದ 56 ವರ್ಷದ ಮಹಿಳೆಯೊಬ್ಬರಿಗೂ ಸೋಂಕು ತಗುಲಿದೆ. ಇವರನ್ನು ಪ್ರತ್ಯೇಕ ನಿಗಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 56 ವರ್ಷದ ಮಹಿಳೆಗೆ (ಸೋಂಕಿತ-13) ಮಾ.18 ರಂದು ಸೋಂಕು ದೃಢಪಟ್ಟಿತ್ತು. ಇವರೊಂದಿಗೆ 50 ಮಂದಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಇದರಲ್ಲಿ ಒಬ್ಬರಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ. ಇನ್ನೂ 49 ಮಂದಿ ಮನೆಯಲ್ಲೇ ಪ್ರತ್ಯೇಕವಾಗಿ ಸ್ವಯಂ ನಿಗಾದಲ್ಲಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಮೂವರಿಗೆ ಮಂಗಳೂರಿನಲ್ಲಿ ಸೋಂಕು ದೃಢ:
ಮಂಗಳವಾರ ಪ್ರಕಟಗೊಂಡಿರುವ ಸೋಂಕಿತರ ಪಟ್ಟಿಯಲ್ಲಿ ಕೇರಳದ ಕಾಸರಗೋಡು ಮೂಲದ ಮೂವರು ವ್ಯಕ್ತಿಗಳಿಗೆ ಮಂಗಳೂರಿನಲ್ಲಿ ಸೋಂಕು ದೃಢಪಟ್ಟಿದೆ. ಕೇರಳದ ಕಾಸರಗೋಡಿನ 47 ವರ್ಷದ ವ್ಯಕ್ತಿಯು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ರೋಗದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಹತ್ತಿರದ ನಿಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ.
ಇನ್ನು ಸೌದಿ ಅರೇಬಿಯಾದಿಂದ ಆಗಮಿಸಿದ್ದ 70 ವರ್ಷದ ಕಾಸರಗೋಡು ಮೂಲದ ಮಹಿಳೆ ಹಾಗೂ ದುಬೈನಿಂದ ಮಾ.20 ರಂದು ಆಗಮಿಸಿದ 23 ವರ್ಷದ ಕಾಸರಗೋಡಿನ ಯುವಕನಿಗೂ ಸೋಂಕು ದೃಢಪಟ್ಟಿದೆ. ಮೂರೂ ಮಂದಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರು
* ಜಿಲ್ಲಾವಾರು ಆಸ್ಪತ್ರೆಯಲ್ಲಿರುವ ಕೊರೊನಾ ಸೋಂಕಿತರು (ಮಾಚ್‌ರ್ 24 ಸಂಜೆವರೆಗೆ)
ಬೆಂಗಳೂರು - 24 (ಮೂವರು ಗುಣಮುಖರಾಗಿ ಮನೆಗೆ)
ಕಲಬುರಗಿ - 3 (ಒಬ್ಬರು ಸಾವು)
ದಕ್ಷಿಣಕನ್ನಡ -5
ಚಿಕ್ಕಬಳ್ಳಾಪುರ - 3
ಕೊಡಗು -1
ಮೈಸೂರು - 2
ಧಾರವಾಡ - 1
ಉತ್ತರ ಕನ್ನಡ - 2
ಒಟ್ಟು - 41
ಶಂಕಿತರ ವಿವರ
ಜಿಲ್ಲೆ - ಆಸ್ಪತ್ರೆಯಲ್ಲಿರುವ ಶಂಕಿತರು (ಮಾಚ್‌ರ್ 24)
ಬೆಂಗಳೂರಿನ - 25
ಮೈಸೂರು - 2
ಕೊಡಗು - 4
ಕಲಬುರಗಿ - 8
ದಕ್ಷಿಣ ಕನ್ನಡ - 34
ಬಳ್ಳಾರಿ - 3
ಉಡುಪಿ - 40
ಉತ್ತರ ಕನ್ನಡ - 7
ಶಿವಮೊಗ್ಗ - 4
ಗದಗ -14
ದಾವಣಗೆರೆ - 2
ಧಾರವಾಡ - 3
ರಾಯಚೂರು - 1
ತುಮಕೂರು - 3
ಚಿತ್ರದುರ್ಗ - 2
ಚಾಮರಾಜನಗರ - 3
ಮಂಡ್ಯ - 2
ಬೀದರ್ - 5
ಹಾಸನ - 3
ಚಿಕ್ಕಮಗಳೂರು- 3
* ಆಸ್ಪತ್ರೆಗೆ ಮಂಗಳವಾರ ದಾಖಲಾದ ಕೊರೋನಾ ಶಂಕಿತರು - 48
* ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಯಾದವರು - 19
* ಸದ್ಯ ರಾಜ್ಯದ ಆಸ್ಪತ್ರೆಯಲ್ಲಿರುವವರು - 197
* ಮಂಗಳವಾರ ನೆಗೆಟಿವ್ ಬಂದ ವರದಿಗಳು - 43
* ಮಂಗಳವಾರ ಪಾಸಿಟಿವ್ ಬಂದ ವರದಿಗಳು - 8
* ಮನೆಯಲ್ಲಿ ಪ್ರತ್ಯೇಕ ನಿಗಾದಲ್ಲಿರುವವರು- 4000ಕ್ಕೂ ಅಧಿಕ
* ಜನವರಿ 21ರಿಂದ ಮಾಚ್‌ರ್ 23 ರವರೆಗೆ ರಾಜ್ಯದ ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಟ್ಟವರು - 1,27,9411