ಕಂಪ್ಲೀಟ್ ಲಾಕ್‌ಡೌನ್: ಅಗತ್ಯ ವಸ್ತು ಪೂರೈಕೆ ಸರ್ಕಾರಕ್ಕೆ ಸವಾಲು!
ಅಗತ್ಯ ವಸ್ತು ಪೂರೈಕೆ ಸರ್ಕಾರಕ್ಕೆ ಸವಾಲು!| 21 ದಿನ ಮನೆಯಲ್ಲೇ ಇರುವಂತೆ ಜನರಿಗೆ ನಿರ್ಬಂಧ| ನಿತ್ಯ ಬಳಕೆಯ ವಸ್ತು ಸಿಗೋದು ಹೇಗೆ?| ದಿಲ್ಲಿಯಲ್ಲಿ ಲಾಕ್‌ಡೌನ್ ಬಳಿಕ ದಿನಸಿಗಾಗಿ ಮುಗಿಬಿದ್ದ ಜನ| ಇಲ್ಲೂ ಹಾಗಾಗದಂತೆ ವ್ಯವಸ್ಥೆ ಮಾಡಲು ತಜ್ಞರ ಸಲಹೆ
ಬೆಂಗಳೂರು(ಮಾ.25): ಕೇಂದ್ರ ಸರ್ಕಾರವು 21 ದಿನಗಳ ಸುದೀರ್ಘ ಕಾಲ ಕೊರೋನಾ ಲಾಕ್‌ಡೌನ್ ವಿಧಿಸುವ ಮೂಲಕ ಅತ್ಯುತ್ತಮ ಕ್ರಮ ಕೈಗೊಂಡಿದೆ. ಆದರೆ, ಇಷ್ಟುಸುದೀರ್ಘ ನಿರ್ಬಂಧದ ಹಿನ್ನೆಲೆಯಲ್ಲಿ ಜನರಿಗೆ ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಸಮರ್ಪಕ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರದಿದ್ದರೆ ಮತ್ತೊಂದು ಸ್ವರೂಪದ ಅರಾಜಕತೆಗೆ ಸಾಕ್ಷಿಯಾಗಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇಂತಹದೊಂದು ಗಂಭೀರ ಪರಿಸ್ಥಿತಿ ಈಗಾಗಲೇ ದೆಹಲಿಯಲ್ಲಿ ನಿರ್ಮಾಣವಾಗಿದೆ. ದೆಹಲಿಯಲ್ಲಿ ಲಾಕ್‌ಡೌನ್ ಅತ್ಯುತ್ತಮವಾಗಿದ್ದರೂ ದಿನಸಿ ಪಡೆಯಲು ಜನರು ಒಮ್ಮೆಗೇ ರಸ್ತೆಗೆ ಗುಂಪು-ಗುಂಪಾಗಿ ಇಳಿಯುವ ಮೂಲಕ ಈ ಮಹಾಮಾರಿ ಹಬ್ಬುವಿಕೆ ತಡೆಗೆ ತಂದಿರುವ ಲಾಕ್‌ಡೌನ್‌ಗೆ ಅರ್ಥವೇ ಇಲ್ಲದಂತೆ ಮಾಡಿದ್ದಾರೆ.
ಜನತಾ ಕಫä್ರ್ಯ ನಂತರವೂ ದೇಶಾದ್ಯಂತ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಫä್ರ್ಯ ನಂತರ ಜನರು ಯಾವುದೇ ನಿರ್ಬಂಧವಿಲ್ಲದೆ ಅಗತ್ಯ ವಸ್ತು ಖರೀದಿಗೆ ಮುಂದಾಗಿದ್ದರಿಂದ ವ್ಯಾಪಕ ಜನ-ಜಂಗುಳಿ ನಿರ್ಮಾಣವಾಗಿತ್ತು. ಕರ್ನಾಟಕದಲ್ಲೂ ಸಹ ಸೋಮವಾರ ಜನರು ರಸ್ತೆಗೆ ಇಳಿಯಲು ಮುಖ್ಯ ಕಾರಣ ಯಾವುದೇ ಕ್ಷಣದಲ್ಲಿ ಲಾಕ್‌ಡೌನ್ ಆಗುತ್ತದೆ ಎಂಬ ಭೀತಿಯೇ ಕಾರಣವಾಗಿತ್ತು.
ಹೀಗಾಗಿ ದಿನಸಿ ಖರೀದಿ ಹಾಗೂ ಮಾರಾಟಕ್ಕೂ ವ್ಯವಸ್ಥಿತ ಕ್ರಮ ಅನುಸರಿಸಬೇಕು. ದಿನಸಿ ಖರೀದಿಗಾಗಿ ವಾರ್ಡ್ ಅಥವಾ ಬ್ಲಾಕ್‌ವಾರು ನಾಗರಿಕರಿಗೆ ಪ್ರತ್ಯೇಕ ಸಮಯ ನಿಗದಿ ಮಾಡಬೇಕು ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಲಾಕ್‌ಡೌನ್ ಎಷ್ಟುದಿನ ಬೇಕಾದರೂ ಮುಂದುವರೆಯಬಹುದು ಎಂಬ ಆತಂಕದಲ್ಲಿ ಜನರಿದ್ದಾರೆ. ಹೀಗಾಗಿ ಅನಗತ್ಯವಾಗಿ ಜನರು ಆಹಾರ ಪದಾರ್ಥ ದಾಸ್ತಾನು ಮಾಡಿಕೊಳ್ಳಲು ಹೋಗದಂತೆ ಸರ್ಕಾರ ಮನವರಿಕೆ ಮಾಡಿಕೊಡಬೇಕು. ಜತೆಗೆ ಜನರು ಪದೇ ಪದೇ ಅಂಗಡಿಗಳಿಗೂ ಹೋಗದಂತೆ 10-15 ದಿನಗಳಿಗೆ ಆಗುವಷ್ಟುಕೆಡದ ಆಹಾರ ಪದಾರ್ಥಗಳನ್ನು ಒಮ್ಮೆಲೇ ಖರೀದಿಸಲು ಜಾಗೃತಿ ಮೂಡಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಹೆಚ್ಚು ಸಾರ್ವಜನಿಕರು ಮನೆಯಿಂದ ಹೊರಬಾರದಂತೆ ಆದಷ್ಟುಮನೆಗೇ ದಿನಸಿ ಒದಗಿಸಲು ಅಂಗಡಿಗಳ ಮಾಲಿಕರು ವ್ಯವಸ್ಥೆ ಮಾಡಬೇಕು. ಅಂಗಡಿಗಳಲ್ಲೇ ಖರೀದಿಸುವುದಾದರೆ ಜನದಟ್ಟಣೆ ಉಂಟಾಗದಂತೆ ಟೋಕನ್ ವ್ಯವಸ್ಥೆ ಮಾಡಿ ಆಯಾ ಟೋಕನ್ ಸಂಖ್ಯೆ ಬಂದವರಿಗೆ ಒಬ್ಬೊಬ್ಬರಿಗೆ ದಿನಸಿ ವಿತರಣೆ ಮಾಡಬೇಕು. ಈ ಮೂಲಕ ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒತ್ತು ನೀಡಬೇಕು. ಇನ್ನು ಹಾಲು, ದಿನಪತ್ರಿಕೆಗಳಿಗೆ ಸಾರ್ವಜನಿಕರು ಹೊರಬಾರದಂತೆ ಮನೆಗೆ ವಿತರಿಸುವ ವ್ಯವಸ್ಥೆ ಮುಂದುವರೆಯಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, ಸರ್ಕಾರವು ದಿನಸಿ ಪದಾರ್ಥಗಳು ಪ್ರತಿ ಪ್ರದೇಶದಲ್ಲೂ ಲಭ್ಯವಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಎಲ್ಲಾ ಕಡೆಯೂ ಎಲ್ಲಾ ಆಹಾರ ಪದಾರ್ಥ ಸಿಗುವಂತೆ ವ್ಯವಸ್ಥೆ ಮಾಡಬೇಕು. ಈ ಮೂಲಕ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನರು ಅಲೆದಾಡುವುದನ್ನು ತಪ್ಪಿಸಬೇಕು ಎಂದು ಹೇಳಿದರು.
ತಜ್ಞರ ಸಲಹೆಗಳು
1. ದಿನಸಿ ಅಂಗಡಿಗಳಲ್ಲಿ ಸಾರ್ವಜನಿಕರು ದಿನಸಿ ಖರೀದಿ ಮಾಡಲು ವಾರ್ಡ್‌ವಾರು, ಬ್ಲಾಕ್‌ವಾರು ಸಮಯ ನಿಗದಿ ಮಾಡಬೇಕು
2. ಅಂಗಡಿಗಳಲ್ಲೇ ದಿನಸಿ ಖರೀದಿಸಬೇಕಾದರೆ ನಾಗರಿಕರಿಗೆ ಟೋಕನ್ ವ್ಯವಸ್ಥೆ ಮಾಡಿ ಸಮರ್ಪಕವಾಗಿ ವಿತರಣೆ ಮಾಡುವಂತೆ ಸೂಚಿಸಬೇಕು
3. ಪ್ರತಿದಿನ ದಿನಸಿ ಪದಾರ್ಥ ಖರೀದಿಗೆ ಹೊರಬಾರದಂತೆ ಕೆಡದ ಆಹಾರ ಪದಾರ್ಥಗಳನ್ನು 10-15 ದಿನಗಳಿಗೆ ಒಮ್ಮೆಲೇ ಖರೀದಿಸುವಂತೆ ಜಾಗೃತಿ ಮೂಡಿಸಬೇಕು
4. ಅಂಗಡಿ ಮಾಲಿಕರು ಸಾರ್ವಜನಿಕರು ಹೊರಬಾರದಂತೆ ಆದಷ್ಟುಮನೆಗೇ ದಿನಸಿ ಒದಗಿಸಲು ವ್ಯವಸ್ಥೆ ಮಾಡಬೇಕು
5. ಹಾಲು-ಪೇಪರ್ ಮನೆಗೆ ಬರುತ್ತದೆಯಾದ್ದರಿಂದ ಚಿಂತೆಯಿಲ್ಲ. ಔಷಧಿಯಂತಹ ಅಗತ್ಯ ವಸ್ತುಗಳನ್ನು ಮನೆಗೆ ತಂದುಕೊಡುವ ಆನ್‌ಲೈನ್ ಸೇವೆಯನ್ನು ಜನರು ಬಳಸಿಕೊಳ್ಳಲು ಪ್ರೇರೇಪಿಸಬೇಕು