ಲಿಂಗರಾಜು ಕೋರಾ

ಬೆಂಗಳೂರು(ಮಾ.25): ‘ನಾನು ನಿತ್ಯ ಕೆ.ಆರ್‌.ಮಾರುಕಟ್ಟೆಯಲ್ಲಿ ಕೂಲಿ ಮಾಡಿ ರಾತ್ರಿ ಇಲ್ಲೇ ಅಂಗಡಿ ಕೆಳಗೆ ಮಲಗುತ್ತಿದ್ದೆ. ಈಗ ಮಾಡೋಕೆ ಕೂಲಿ ಇಲ್ಲ... ತಿನ್ನಲು ಊಟ ಇಲ್ಲ... ಕುಡಿಯೋಕೆ ನೀರೂ ಇಲ್ಲ... ಪೊಲೀಸರು ಎಲ್ಲೂ ನಿಲ್ಲಲು ಕೂರಲು ಬಿಡುತ್ತಿಲ್ಲ... ಊರಿಗೆ ಹೋಗೋಣ ಎಂದರೆ ಬಸ್ಸುಗಳಿಲ್ಲ...’

ಇದು ನನ್ನೊಬ್ಬನ ಕಥೆಯಲ್ಲ ಸ್ವಾಮಿ ಕೆ.ಆರ್‌.ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ನನ್ನಂತಹ ನೂರಾರು ಜನ ದಿನಗೂಲಿಯನ್ನೇ ನೆಚ್ಚಿಕೊಂಡು ಜೀವಿಸುತ್ತಿದ್ದೇವೆ. ನಮ್ಮೆಲ್ಲರ ಸ್ಥಿತಿ ಇದು. ನಮಗೆ ಕೊರೋನಾ ಆತಂಕಕ್ಕಿಂತ ಹೊಟ್ಟೆಗಿಲ್ಲದೆ ಸಾಯುತ್ತೇವಾ ಎನ್ನುವ ಆತಂಕ ಕಾಡುತ್ತಿದೆ.ಹೀಗೆ ರಾಜ್ಯ ಲಾಕ್‌ಡೌನ್‌ ಆದ ಒಂದೇ ದಿನದಲ್ಲಿ ತಮಗೆ ಎದುರಾಗಿರುವ ಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು ಹುಬ್ಬಳ್ಳಿ ಮೂಲದ ಕೂಲಿ ಕಾರ್ಮಿಕ ಹರೀಶ್‌.

ಬೆಂಗ್ಳೂರಲ್ಲಿರೋ ಮಂಗಳೂರಿಗರೇ ಊರಿಗೆ ಹೋಗ್ಬೇಡಿ, ಚಾರ್ಮಾಡಿ ಬಂದ್..!

ಇದು ಹರೀಶ್‌ ಒಬ್ಬರ ಕಥೆಯಲ್ಲ. ಇವರಂತೆಯೇ ನಿತ್ಯ ಕೆ.ಆರ್‌.ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿ ಮಾರ್ಕೆಟ್‌ ಅನ್ನೇ ತಮ್ಮ ಮನೆಯಾಗಿಸಿಕೊಂಡು ಜೀವಿಸುತ್ತಿದ್ದ ಇನ್ನೂ ಹತ್ತಾರು ಕೂಲಿ ಕಾರ್ಮಿಕರು, ನಿರ್ಗತಿಕರ ಗೋಳು ಇದು.

‘ಕನ್ನಡಪ್ರಭ’ ನಡೆಸಿದ ರಿಯಾಲಿಟಿ ಚೆಕ್‌ ವೇಳೆ ಕೆ.ಆರ್‌.ಮಾರುಕಟ್ಟೆಯ ಅಂಗಡಿಗಳ ಸಾಲಿನಲ್ಲಿ ಏನೂ ತೋಚದೆ ಮುಂದೇನು ಎಂದು ಯೋಚಿಸುತ್ತಾ ಕೂತಿದ್ದ ನಾಲ್ಕೈದು ಜನರ ಸಾಲೊಂದು ಕಣ್ಣಿಗೆ ಬಿತ್ತು. ಅವರನ್ನು ಮಾತನಾಡಿಸಿದಾಗ ಕೊರೋನಾ ಲಾಕ್‌ಡೌನ್‌ನಿಂದ ತಾವು ಅನುಭವಿಸುತ್ತಿರುವ ಶೋಚನೀಯ ಸ್ಥಿತಿಯನ್ನು ಬಿಚ್ಚಿಟ್ಟರು.

ಹುಬ್ಬಳ್ಳಿ ಮೂಲದವರಾದ ಹರೀಶ್‌, ಕೆಲ ವರ್ಷಗಳಿಂದ ನಾನು ಊರು ಬಿಟ್ಟು ಬೆಂಗಳೂರಿಗೆ ಬಂದೆ. ಊರಲ್ಲೂ ಜೀವನಕ್ಕೆ ಯಾವುದೇ ಆಧಾರ ಇಲ್ಲ. ಕೆ.ಆರ್‌.ಮಾರುಕಟ್ಟೆಯಲ್ಲೇ ನಿತ್ಯ ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಇಂದಿರಾ ಕ್ಯಾಂಟೀನ್‌ ಅಥವಾ ಇನ್ಯಾವುದಾದರೂ ಹೋಟೆಲ್‌ನಲ್ಲಿ ಊಟ ಮಾಡಿ ಇಲ್ಲೇ ಎಲ್ಲಾದರೂ ಅಂಗಡಿ ಕೆಳಗೆ ಮಲಗುತ್ತಿದ್ದೆ. ಈಗ ಲಾಕ್‌ಡೌನ್‌ನಿಂದ ಮಾರುಕಟ್ಟೆ ಬಂದ್‌ ಆಗಿದೆ. ಏನು ಮಾಡಬೇಕೆಂದು ದಿಕ್ಕೇ ತೋಚುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಊಟಕ್ಕೆ ಏನು ಮಾಡುವುದು:

ಮತ್ತೊಬ್ಬ ಕೂಲಿ ಕಾರ್ಮಿಕ ಮಾದಪ್ಪ ನಾನು ಚಾಮರಾಜನಗರದವನು. ಹಲವು ವರ್ಷಗಳಿಂದ ಕೆ.ಆರ್‌.ಮಾರುಕಟ್ಟೆಯಲ್ಲೇ ಕೂಲಿ ಕೆಲಸ ಮಾಡಿಕೊಂಡಿದ್ದೇನೆ. ಮಾರುಕಟ್ಟೆಮುಚ್ಚಿದ್ದರಿಂದ ಹೊಟ್ಟೆಗೆ ಏನು ಮಾಡುವುದು ಎಂಬ ಯೋಚನೆ ಆಗಿತ್ತು. ಆದರೆ, ಸರ್ಕಾರ ಇಂದಿರಾ ಕ್ಯಾಂಟೀನ್‌ನಲ್ಲಿ ನಮ್ಮಂತಹವರಿಗೆ ಉಚಿತ ಊಟ ನೀಡುವುದಾಗಿ ಘೋಷಿಸಿದ್ದರಿಂದ ನಿಟ್ಟುಸಿರು ಬಿಟ್ಟಿದ್ದೆವು. ಮಂಗಳವಾರ ಕ್ಯಾಂಟೀನ್‌ನಲ್ಲಿ ಊಟ ನೀಡಿದರು. ಆದರೆ, ಬುಧವಾರದಿಂದ ಇಂದಿರಾ ಕ್ಯಾಂಟೀನ್‌ ಅನ್ನೂ ಬಂದ್‌ ಮಾಡುವುದಾಗಿ ಹೇಳುತ್ತಿದ್ದಾರೆ. ಏನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ. ಪೊಲೀಸರು ನಮ್ಮನ್ನು ಇಲ್ಲಿ ಕೂರಲೂ ನಿಲ್ಲಲೂ ಬಿಡುತ್ತಿಲ್ಲ. ಎಲ್ಲಿಗೆ ಹೋಗುವುದೋ ತೋಚುತ್ತಿಲ್ಲ ಎಂದರು.

ನಗರದಲ್ಲಿರುವ 4 ಸಾವಿರ ನಿರ್ಗತಿಕರಿಗೆ ಊಟದ ವ್ಯವಸ್ಥೆ

ಬೆಂಗಳೂರು ನಗರದಲ್ಲಿರುವ ನಾಲ್ಕು ಸಾವಿರ ಮಂದಿ ನಿರ್ಗತಿಕರಿಗೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಊಟದ ವ್ಯವಸ್ಥೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಲಿಕಾರರಿಗೆ, ಬಡವರಿಗೆ, ನಿರ್ಗತಿಕರಿಗೆ ಊಟ​-ತಿಂಡಿ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್‌ನಲ್ಲಿ ಮಂಗಳವಾರದಿಂದ ಉಚಿತವಾಗಿ ಊಟ, ತಿಂಡಿ ನೀಡುವಂತೆ ಸೂಚನೆ ನೀಡಲಾಗಿತ್ತು. ಆದರೆ, ನೂಕು ನುಗ್ಗಲು ಹಾಗೂ ಸರತಿ ಸಾಲಿನಲ್ಲಿ ಅಪಾರ ಸಂಖ್ಯೆಯ ಜನ ನಿಲ್ಲುವುದರಿಂದ ಸೋಂಕು ಹರಡುವ ಸಾಧ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ ಅನ್ನು ಸಹ ಬಂದ್‌ಗೆ ಸೂಚಿಸಿದ್ದೇನೆ. ನಗರದಲ್ಲಿರುವ ನಾಲ್ಕು ಸಾವಿರಕ್ಕೂ ಹೆಚ್ಚು ನಿರ್ಗತಿಕರಿಗೆ ಹಾಗೂ ಭಿಕ್ಷಕರಿಗೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಇಂದಿರಾ ಕ್ಯಾಂಟೀನ್‌ ತರೆಯಲ್ಲ: ಸಿಎಂ

ಇಂದಿರಾ ಕ್ಯಾಂಟೀನ್‌ಗಳಲ್ಲಿ ಬಡವರಿಗೆ ಉಚಿತ ಊಟ ನೀಡುವ ಪ್ರಸ್ತಾಪದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ.ಜನರ ನೂಕುನುಗ್ಗಲು ಉಂಟಾಗಬಹುದು ಎಂಬ ಕಾರಣದಿಂದ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಯುಗಾದಿ ವರ್ಷದ ತೊಡಕಿಗೂ ಕುತ್ತು ತಂದ ಕೊರೋನಾ: ಮಾಂಸದೂಟದ ಭಾಗ್ಯವೂ ಇಲ್ಲ!

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಡವರಿಗೆ ಅನುಕೂಲವಾಗುವಂತೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ ನೀಡುವ ಪ್ರಸ್ತಾಪವಿತ್ತು. ಆ ಬಗ್ಗೆ ಘೋಷಣೆಯನ್ನೂ ಮಾಡಿದ್ದೆವು. ಆದರೆ, ಜನರ ನೂಕುನುಗ್ಗಲು ಉಂಟಾಗಬಹುದು ಎಂಬ ಕಾರಣಕ್ಕಾಗಿ ಕ್ಯಾಂಟೀನ್‌ಗಳನ್ನು ತೆರೆಯುವುದು ಬೇಡ ಎಂಬ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.(ಚಿತ್ರ: ಸಾಂದರ್ಭಿಕ ಚಿತ್ರ)