ವಿಜಯಪುರ(ಮಾ.27): ಕೆಲಸ ಅರಸಿ ಜಿಲ್ಲೆಯಿಂದ ಗೋವಾಕ್ಕೆ ಗುಳೆ ಹೋಗಿದ್ದ ನೂರಾರು ಕನ್ನಡಿಗರು ಗೋವಾದ ಮಾಪ್ಸಾದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮಾಡಿದ್ದರಿಂದಾಗಿ ಅನ್ನ, ನೀರು ಇಲ್ಲದೆ ಪರಿತಪಿಸುವ ಪರಿಸ್ಥಿತಿ ಬಂದಿದೆ.

ಕಳೆದೆರಡು ದಿನಗಳಿಂದ ಕನ್ನಡಿಗರಿಗೆ ಮನೆಯಿಂದ ಹೊರ ಹೋಗದಂತೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದ್ದರಿಂದ ಬಹಿರ್ದೆಸೆಗೂ ಪರದಾಡುವಂತಾಗಿದೆ. ದಿನಸಿ ಅಂಗಡಿಗಳು ತೆರೆಯುತ್ತಿಲ್ಲ. ದಿನಸಿ ಸಾಮಗ್ರಿಗಳನ್ನು ಪೂರೈಸುತ್ತಿಲ್ಲ. ಹೀಗಾಗಿ ಈ ಕನ್ನಡಿಗರು ಮನೆಯಲ್ಲೇ ಉಪವಾಸ ಬೀಳುವಂತಾಗಿದೆ. ಸಣ್ಣ ಮಕ್ಕಳಿಗೆ ಹಾಲು ಸಹ ಸಿಗದಂತಾಗಿದೆ. ಹಸಿವಿನಿಂದ ಮಕ್ಕಳು ಅಳು ನಿಲ್ಲಿಸುತ್ತಿಲ್ಲ. ಇಂತಹ ಗೋಳು ಯಾರಿಗೂ ಬರಬಾರದು ಎಂದು ಅಲ್ಲಿರುವ ಕನ್ನಡಿಗರು ಗೋಳಿಡುತ್ತಿದ್ದಾರೆ.

ನಮಾಜ಼್ ಗೆ ನಿಷೇಧವಿದ್ರೂ ಮಸೀದಿಗೆ ಆಗಮಿಸಿದ ಜನ: ಪೊಲೀಸರಿಂದ ಲಾಠಿ ಚಾರ್ಜ್‌

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ, ಬೀರೂರು, ಬಸವನ ಬಾಗೇವಾಡಿ ತಾಲೂಕಿನ ಕನ್ನಾಳ, ನರಸಲಗಿ, ಇವಣಗಿ, ನಿಡಗುಂದಿ ತಾಲೂಕಿನ ಅರೇಶಂಕರ, ತಾಳಿಕೋಟೆ ತಾಲೂಕಿನ ಕೊಡೆಕಲ್‌, ಬೂದಿಹಾಳ ಮುಂತಾದ ಕಡೆಗಳಿಂದ ನೂರಾರು ಮಂದಿ ಕನ್ನಡಿಗರು ಜಿಲ್ಲೆಯಿಂದ ಕೆಲಸ ಅರಸಿ ಹೋಗಿ ಗೋವಾದ ಮಾಪ್ಸಾದಲ್ಲಿ ಕಳೆದ 20 ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಈಗ ಕೊರೋನಾ ಅವರ ಜೀವನವನ್ನೇ ತಲ್ಲಣಗೊಳಿಸಿದೆ.

ಕೊರೋನಾ ಆತಂಕ: ಸ್ವಯಂಪ್ರೇರಿತರಾಗಿ ಡೆಟಾಯಿಲ್‌ ನೀರಿನಿಂದ ರಸ್ತೆ ಶುಚಿಗೊಳಿಸಿದ ಗ್ರಾಮಸ್ಥರು!

ನಮಗೆ ಜೀವನಾವಶ್ಯಕ ವಸ್ತುಗಳನ್ನು ಪೂರೈಸುತ್ತಿಲ್ಲ. ನಾವು ಉಪವಾಸ ಬೀಳುವುದು ಬಂದೈತಿ. ನಮ್ಮ ವಾಹನಗಳಿವೆ. ನಮ್ಮನ್ನು ವಿಜಯಪುರ ಜಿಲ್ಲೆಯ ನಮ್ಮ ಸ್ವಗ್ರಾಮಗಳಿಗೆ ಹೋಗುವುದಕ್ಕಾದರೂ ಅನುಮತಿ ನೀಡುತ್ತಿಲ್ಲ. ಹೀಗಾಗಿ ನಮ್ಮ ಗೋಳು ಯಾರೂ ಕೇಳುವವರಿಲ್ಲವಾಗಿದ್ದಾರೆ. ಕರ್ನಾಟಕ ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ನಮ್ಮನ್ನು ನಮ್ಮ ಊರಿಗೆ ತಲುಪಿಸವಂತಾಗಬೇಕು ಎಂದು ಮುದ್ದೇಬಿಹಾಳ ತಾಲೂಕಿನ ಹಾಲಿ ಮಾಪ್ಸಾ ನಿವಾಸಿ ಸುಮಂಗಲಾ ಹೂಗಾರ, ಗುಂಡಕರ್ಜಗಿ ಹೇಳಿದ್ದಾರೆ.