ಉಡುಪಿ(ಏ.04): ಉಡುಪಿ ಜಿಲ್ಲೆ​ಯಲ್ಲಿ ಫೆಬ್ರವರಿಯಿಂದ ಮೇ ತಿಂಗಳವರೆಗೆ ಮಲ್ಲಿಗೆ ಬೆಳೆಗಾರರ ಸಂಪಾದನೆಯ ಕಾಲ. ಅದರಲ್ಲೂ ಮಾಚ್‌ರ್‍ ಮತ್ತು ಏಪ್ರಿಲ್‌ 2 ತಿಂಗಳಲ್ಲಿ ಅವರು ಉಳಿದ 10 ತಿಂಗಳ ಸಂಪಾದನೆಯನ್ನು ಮಾಡುತ್ತಾರೆ. ಆದರೆ ಈ ಬಾರಿ ಕೊರೋನಾ ಲಾಕ್‌ಡೌನ್‌ ಅವರಿಗೆ ಈ 2 ತಿಂಗಳಲ್ಲಿಯೇ ಮಲ್ಲಿಗೆ ಮಾರಾಟವಾಗದಂತೆ ಮಾಡಿ ಬರೆ ಎಳೆದು ಬಿಟ್ಟಿದೆ.

ಈ 2 ತಿಂಗಳು ಕರಾವಳಿಯಲ್ಲಿ ದೇವಾಲಯಗಳ ಜಾತ್ರೆ, ಉತ್ಸವ, ದೈವಗಳ ನೇಮ, ಬಲಿ, ಮುದುವೆ ಮುಂಜಿಗಳ ಸೀಸನ್‌. ಈ ಸೀಸನ್‌ನಲ್ಲಿ ಮಲ್ಲಿಗೆ ಹೂವೂ ಸಾಕಷ್ಟುಬೆಳೆಯುತ್ತದೆ, ಬೇಡಿಕೆಯೂ ಹೆಚ್ಚಿದ್ದು, ಬೆಲೆಯೂ ಹೆಚ್ಚಿರುತ್ತದೆ.

ಲಾಕ್‌ಡೌನ್: 8 ಎಕರೆ ಕಲ್ಲಂಗಡಿ ನಾಶ ಮಾಡಿದ ರೈತ

ಒಂದು ಅಂದಾಜು ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಈ ಸೀಸನ್‌ನಲ್ಲಿ ಹತ್ತಾರು ಕೋಟಿ ರು.ಗಳ ಮಲ್ಲಿಗೆ ಹೂವಿನ ವ್ಯವಹಾರ ನಡೆಯುತ್ತದೆ. ಈ ವ್ಯವಹಾರ ನಿಂತು, ಜೀವನ ನಿರ್ವಹಣೆಗೆ ಮಲ್ಲಿಗೆ ಹೂವನ್ನೇ ಅವಲಂಭಿಸಿರುವ ಸಾವಿರಾರು ಕುಟುಂಬಗಳು ತಲೆ ಮೇಲೆ ಕೈಹೊತ್ತು ಕುಳಿತಿವೆ. ಜತೆಗೆ ಮಲ್ಲಿಗೆ ಸಂಗ್ರಹಿಸುವವರು, ಸಗಟು-ರಖಂ ವ್ಯಾಪರಸ್ಥರು ಕೂಡ ಕೈಚೆಲ್ಲಿ ಕೂತಿದ್ದಾರೆ.

ಹೂವು ಕೊಯ್ಯದಿದ್ದರೂ ಅಪಾಯ

ಇನ್ನೊಂದು ಅಪಾಯ ಎಂದರೇ ಮಲ್ಲಿಗೆ ಹೂವನ್ನು ಕೊಯ್ಯದೇ ಗಿಡದಲ್ಲೇ ಬಿಟ್ಟರೆ ಅದು ಕೊಳೆತು ಗಿಡವನ್ನೇ ನಾಶ ಮಾಡುತ್ತದೆ. ಆದ್ದರಿಂದ ಮಾರಾಟವಾಗದಿದ್ದರೂ ಹೂವನ್ನಂತೂ ಕೊಯ್ಯವ ಶ್ರಮ ವಹಿಸಲೇಬೇಕು. ಬಹುತೇಕ ಬೆಳೆಗಾರರು ಕೊಯ್ದ ಹೂವನ್ನು ಮನೆ ದೇವರಿಗೆ ಅಥವಾ ಊರಿನ ದೇವಾಲಯಕ್ಕೆ ಅರ್ಪಿಸಿ ಅಷ್ಟರಲ್ಲಿ ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ.

ಕೊಳೆಯಲಾರಂಭಿಸಿದೆ 70 ಟನ್‌ ಕಲ್ಲಗಂಡಿ, 300 ಲೋಡ್ ಅನನಾಸು

ಈ ಸೀಸನ್‌ನಲ್ಲಿ ಪ್ರತಿದಿನ 2 ಟೆಂಪೋಗಳಷ್ಟುಮಲ್ಲಿಗೆ ಹೂವು ಮಾರುಕಟ್ಟೆಗೆ ಹೋಗುತ್ತಿತ್ತು. ಆದರೆ ಈಗ ಲಾಕ್‌ಡೌನ್‌ನಿಂದಾಗಿ ಹಿಡಿ ಹೂವೂ ಮಾರುಕಟ್ಟೆಗೆ ಕಳಿಸುವಂತಿಲ್ಲ. ಸದ್ಯಕ್ಕಂತೂ ಈ ಸಂಕಷ್ಟಮುಗಿಯುವ ಲಕ್ಷಣಗಳಿಲ್ಲ. ಇಡೀ ದೇಶಕ್ಕೆ ಒದಗಿರುವ ಪರಿಸ್ಥಿತಿಯ ಜತೆಗೆ ನಾವು ಮಲ್ಲಿಗೆ ಬೆಳೆಗಾರರು ಹೊಂದಿಕೊಳ್ಳಲೇಬೇಕಾಗಿದೆ ಎಂದು ಹಿರಿಯ ಮಲ್ಲಿಗೆ ಬೆಳೆಗಾರ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದ್ದಾರೆ.