ಉಡುಪಿ(ಎ.02): ಕೊರೋನಾ ಲಾಕ್‌ಡೌನ್‌ ನಿಂದ ಉಡುಪಿ ಜಿಲ್ಲೆಯಾದ್ಯಂತ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಿಕ್ಕಾಗದೆ ಗದ್ದೆಯಲ್ಲಿಯೇ ಹಾಳಾಗುತ್ತಿವೆ, ರೈತರಿಗೆ ಲಕ್ಷಾಂತರ ರು. ನಷ್ಟವಾಗುತ್ತಿದೆ.

ಕಾಪು ತಾಲೂಕಿನ ಹಿರಿಯಡ್ಕ ಸಮೀಪದ ಬೊಮ್ಮರಬೆಟ್ಟು ಎಂಬಲ್ಲಿನ ಪ್ರಗತಿಪರ ಕೃಷಿಕ ಸುರೇಶ್‌ ನಾಯಕ್‌ ಸುಮಾರು 13 ಎಕ್ರೆ ಗದ್ದೆಯಲ್ಲಿ ಕಪ್ಪು ಕಲ್ಲಂಗಡಿ ಬೆಳೆದಿದ್ದಾರೆ. ಕಟಾವಿಗೆ ಸಿದ್ಧವಾಗುತ್ತಿದ್ದಂತೆ ಕೊರೋನಾ ಮಾರಿ ಒಕ್ಕರಿಸಿ ದೇಶವೇ ಲಾಕ್‌ಡೌನ್‌ ಆಗಿದೆ. ಆದ್ದರಿಂದ ಪೇಟೆಯಲ್ಲಿ ಕಲ್ಲಂಗಡಿಗೆ ಬೇಡಿಕೆ ಇದ್ದರೂ, ಅದನ್ನು ಕೊಯ್ದು ಸಾಗಿಸುವುದಕ್ಕೆ ವಾಹನದ ವ್ಯವಸ್ಥೆ ಇಲ್ಲದಿರುವುದರಿಂದ, ಸುರೇಶ್‌ ನಾಯಕ್‌ ತೀವ್ರ ಆತಂತಕ್ಕೊಳಗಾಗಿದ್ದಾರೆ. ಇನ್ನೊಂದು ವಾರದಲ್ಲಿ ಅವರು ಬೆಳೆದಿರುವ ಸುಮಾರು 70 ಟನ್‌ ಕಲ್ಲಗಂಡಿ ಅಂಗಡಿ ತಲುಪದಿದ್ದರೆ ಗದ್ದೆಯಲ್ಲಿ ಕೊಳೆಯಲಾರಂಭಿಸುತ್ತದೆ.

ಲಾಕ್‌ಡೌನ್: 13 ಕಿ.ಮೀ ನಡೆದೇ ಆಸ್ಪತ್ರೆಗೆ ಹೋಗುವ ಸಿಬ್ಬಂದಿ..!

ಬ್ರಹ್ಮಾವರ, ಸಾಸ್ತಾನ, ಸಾಲಿಗ್ರಾಮ ಮುಂತಾದ ಕಡೆಗಳಲ್ಲಿ ನೂರಾರು ಎಕರೆ ಗದ್ದೆಗಳಲ್ಲಿ ಕಲ್ಲಂಗಡಿ ಹಣ್ಣು ಮಾಗುತ್ತಿವೆ. ಸಾಮಾನ್ಯ ಕೆ.ಜಿ.ಗೆ 13 - 15 ರು.ಗೆ ಗದ್ದೆಯಲ್ಲಿ ಮಾರಾಟವಾಗುತ್ತಿದ್ದ ಈ ಕಲ್ಲಂಗಡಿಗೆ ಈಗ 5 ರು.ಗೂ ಕೇಳುವವರಿಲ್ಲ ಎಂದು ರೈತರು ದುಃಖದಿಂದ ಹೇಳುತ್ತಿದ್ದಾರೆ.

300 ಲೋಡು ಅನನಾಸು:

ಹೆಬ್ರಿ ತಾಲೂಕಿನ ಕರ್ಜೆ ಸಮೀಪದ ಕಕ್ಕುಂಜೆ ಬೈಲು ಎಂಬಲ್ಲಿ ಕೆ.ಎನ್‌. ನಕ್ಷತ್ರಿ ಎಂಬವರು ಬೆಳೆಸಿದ ಸುಮಾರು 100 ಟನ್‌ಗಳಷ್ಟುಅನನಾಸು ಹಣ್ಣಾಗುವುದಕ್ಕೆ ಸಿದ್ಧವಾಗುತ್ತಿವೆ. ಇಲ್ಲಿಯೂ ಅದನ್ನು ಕೊಯ್ಲು ಮಾಡಿ ಅಂಗಡಿಗಳಿಗೆ ಸಾಗಿಸುವುದಕ್ಕೆ ವಾಹನದ್ದೇ ಸಮಸ್ಯೆಯಾಗಿದೆ.

ಕಳೆದ ವರ್ಷದ ಲಾಭದಿಂದಾಗಿ ಹೆಬ್ರಿ ಸುತ್ತಮುತ್ತ ಹತ್ತಾರು ಮಂದಿ ರೈತರು ಅನನಾಸು ಬೆಳೆಯುತ್ತಿದ್ದಾರೆ. ಪ್ರಸ್ತುತ ಇಲ್ಲಿ 300 ಲೋಡುಗೂ ಹೆಚ್ಚು ಅನನಾಸು ಮಾರುಕಟ್ಟೆಗೆ ಹೋಗುವುದಕ್ಕೆ ಸಿದ್ಧವಿದೆ. ಆದರೆ ಲಾಕ್‌ಡೌನ್‌ ಮುಗಿಯುವರೆಗೆ ಕಲ್ಲಂಗಡಿ - ಅನನಾಸು ಸಾಗಾಟ ಸಾಧ್ಯವಿಲ್ಲದಾಗಿದೆ.

1ರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್: ಕೊರೋನಾದಿಂದ ಸಿಕ್ತು ಗ್ರೇಸ್

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ ಮೇಲೆ ಸ್ವಂತ ವಾಹನ ಇರುವ ಕೆಲವರು ಗದ್ದೆಗೆ ಬಂದು 10 - 12 ಕೆ.ಜಿ. ಕಲ್ಲಂಗಡಿ ತೆಗೆದುಕೊಂಡು ಹೋಗುತ್ತಿದ್ದಾರೆ. 13 ಎಕ್ರೆಯಲ್ಲಿ ಬೆಳೆಸಿದ್ದೇನೆ,. ಈ ಬಾರಿ ಲಾಭವಂತೂ ಇಲ್ಲ, ಆದರೂ ನಷ್ಟವನ್ನು ಕಡಿಮೆ ಮಾಡುವ ಎಂದು ಕೆ.ಜಿ.ಗೆ 10 ರು.ನಂತೆ ಕೊಡುತ್ತಿದ್ದೇನೆ. ಒಂದೆರೆಡು ಎಕ್ರೆ ಹೀಗೆ ಖಾಲಿಯಾಗಬಹುದು. ಮುಂದೇನು ಮಾಡುವುದು ಗೊತ್ತಿಲ್ಲ -ಸುರೇಶ್‌ ನಾಯಕ್‌ ಬೊಮ್ಮರಬೆಟ್ಟು, ಕಲ್ಲಂಗಡಿ ಬೆಳೆಗಾರ.

-ಸುಭಾ​ಶ್ಚಂದ್ರ ಎಸ್‌.​ವಾ​ಗ್ಳೆ