ಬೆಂಗಳೂರು(ಮಾ.31): ಲಾಕ್‌ಡೌನ್‌ ಜಾರಿಯಿಂದಾಗಿ ಆತಂಕಕ್ಕೊಳಗಾಗಿರುವ ಜನರ ಅನಿವಾರ್ಯತೆಯನ್ನು ದುರುಪಯೋಗ ಮಾಡಿಕೊಂಡಿರುವ ಅನೇಕ ವ್ಯಾಪಾರಿಗಳು, ದಿನಸಿ ವಸ್ತುಗಳು, ತರಕಾರಿ ಇತ್ಯಾದಿ ಅಗತ್ಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಮೂಲಕ ಸುಲಿಗೆಗೆ ಇಳಿದಿದ್ದಾರೆ.

ಲಾಕ್‌ಡೌನ್‌ ಆದೇಶದಿಂದ ಸದ್ಯ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿರುವುದರಿಂದ ದಿನಸಿ ಹಾಗೂ ತರಕಾರಿ, ಇತರೆ ಅಗತ್ಯ ವಸ್ತುಗಳ ಪೂರೈಕೆ ಕೊರತೆ ಇದೆ. ಹೀಗಾಗಿ ತೆರದಿರುವ ಅಂಗಡಿಗಳಲ್ಲಿ ಹೆಚ್ಚಿನ ಹಣ ತೆತ್ತು ಪದಾರ್ಥಗಳನ್ನು ಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಗಂಟೆಗೊಂದು ಸೆಲ್ಫಿ ತೆಗೆದು ಸರ್ಕಾರಕ್ಕೆ ಕಳಿಸಬೇಕು!

ಅಕ್ಕಿ, ಎಣ್ಣೆ ಆಹಾರ ಧಾನ್ಯ, ಬೆಳೆ ಕಾಳುಗಳು ಬೆಲೆ ಶೇ.15-25 ರಷ್ಟುಏರಿಕೆಯಾಗಿದೆ. ಅದೇ ರೀತಿ ಈರುಳ್ಳಿ, ಮೆಣಸಿನಕಾಯಿ, ಕ್ಯಾರೆಟ್‌ ಸೇರಿದಂತೆ ವಿವಿಧ ತರಕಾರಿಗಳ ಬೆಳೆ ಸಹ ಗಗನಕ್ಕೆ ಏರಿದೆ. ವ್ಯಾಪಾರಿಗಳು ಹೇಳಿದ ಬೆಲೆಗೆ ಕೊಳ್ಳಬೇಕಾದ ಅನಿವಾರ್ಯತೆಗೆ ಜನರು ಸಿಲುಕಿದ್ದಾರೆ.

ಖಾಲಿಯಾಗುತ್ತಿರುವ ಜೇಬು:

ಲಾಕ್‌ಡೌನ್‌ ನಿಂದ ಬಡವರು, ಕೂಲಿ ಕಾರ್ಮಿಕರು, ಸಣ್ಣಪುಟ್ಟವ್ಯವಹಾರ ಮಾಡುವವರ ವರಮಾನ ನಿಂತು ಹೋಗಿದೆ. ತಮ್ಮಲ್ಲಿರುವ ಅಲ್ಪಸ್ವಲ್ಪ ಹಣದಲ್ಲೇ ಜೀವನ ದೂಡಬೇಕಾಗಿದೆ. ಇಂತಹ ಸಂದಿಗ್ಧತೆಯಲ್ಲಿ ಸಾಧ್ಯವಾದರೆ ಕಡಿಮೆ ಲಾಭ ಇಟ್ಟು ಮಾರಾಟ ಮಾಡಬೇಕು. ಕಷ್ಟದಲ್ಲಿರುವಾಗ ವಸ್ತುಗಳ ಕೊರತೆ ನೆಪದಲ್ಲಿ ಗಾಯದ ಮೇಲೆ ಬರೆ ಎಳೆಯುವ ಪ್ರಯತ್ನ ಯಾರೂ ಮಾಡಬಾರದು ಎನ್ನುತ್ತಿದ್ದಾರೆ ಗ್ರಾಹಕರು.

ಪೂರೈಕೆ ಕೊರತೆ:

ನಗರದ ಬಹುತೇಕ ಅಂಗಡಿಗಳು, ಸೂಪರ್‌ ಮಾರ್ಕೆಟ್‌, ಮಳಿಗೆಗಳಿಗೆ ಅವಶ್ಯಕ ವಸ್ತುಗಳು ಪೂರೈಕೆಯಾಗಿಲ್ಲ. ದಿನೇ ದಿನೇ ದಿನಸಿ ಪದಾರ್ಥಗಳು ಸಹ ಕಡಿಮೆಯಾಗುತ್ತಿದೆ. ಹೊಸದಾಗಿ ಯಾವುದೇ ದಿನಸಿ, ಇತರೆ ಅಗತ್ಯ ವಸ್ತುಗಳು ಸಹ ಪೂರೈಕೆಯಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಕಿರಾಣಿ ಅಂಗಡಿಗಳು ಕೂಡ ಮುಚ್ಚಲಿವೆ. ಮುಂಬರುವ ದಿನಗಳಲ್ಲಿ ಅಗತ್ಯ ವಸ್ತುಗಳಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಬೇಡಿಕೆಗೆ ತಕ್ಕಂತೆ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ದಿನಸಿ ಅಂಗಡಿಯ ವನಜಾಕ್ಷಿ ಬೇಸರ ವ್ಯಕ್ತಪಡಿಸಿದರು.

ಪದಾರ್ಥಗಳು ಹಿಂದಿನ ದರ ಇಂದಿನ ದರ (ಕೆ.ಜಿ.ಗಳಲ್ಲಿ)

ಅಕ್ಕಿ ಬುಲೆಟ್‌ 25 ಕೆ.ಜಿ 1580 1720

ಸೋನಾ ಮಸೂರಿ 25 ಕೆಜಿ 1200 1300

ಕಡಲೆ ಬೇಳೆ 54 65

ಹೆಸರುಬೇಳೆ 100 125

ಹೆಸರುಕಾಳು 95 115

ಕಡಲೆಕಾಳು 44 55

ತೊಗರಿ ಬೇಳೆ 83 105

ಉದ್ದಿನ ಬೇಳೆ 98-103 105-115

ಕಚ್ಚಾತೈಲ ಬೆಲೆ 23 ಡಾಲರ್‌ಗೆ ಕುಸಿತ: 17 ವರ್ಷಗಳ ಕನಿಷ್ಠ

ರಾಜ್ಯಾದ್ಯಂತ ಅಕ್ಕಿ ಪೂರೈಕೆಗೆ ಬೇಡಿಕೆ ಬಂದಿದೆ. ಮಿಲ್‌ಗಳಿಂದ ಲೋಡ್‌ ಹೋದರೆ, ಬರುವಾಗ ಲಾರಿಗಳು ಖಾಲಿ ಬರಬೇಕಾಗುತ್ತದೆ. ಹೀಗಾಗಿ ಲಾರಿ ಬಾಡಿಗೆ, ಡೀಸೆಲ್‌ ವೆಚ್ಚ ಪರಿಗಣಿಸಬೇಕಾಗುತ್ತದೆ. ಅಕ್ಕಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ರಾಜ್ಯದಲ್ಲಿ ಅಕ್ಕಿ ದಾಸ್ತಾನಿದೆ. ಹೊಸ ಭತ್ತದ ಬೆಳೆ ಬರುತ್ತಿರುವುದರಿಂದ ಕೊರತೆ ಉಂಟಾಗುವುದಿಲ್ಲ. ಮಾರಾಟಗಾರರಿಗೆ ಅಗತ್ಯವಿದ್ದಷ್ಟುಅಕ್ಕಿ ಪೂರೈಸಲು ಸಿದ್ಧರಿದ್ದೇವೆ. ಬಂದ್‌ ಇರುವ ಕಾರಣ ಕೆಲವೆಡೆ ಸರಬರಾಜು ನಿಲ್ಲಿಸಲಾಗಿತ್ತು ಎಂದು ಸಾವಿತ್ರಿ ಕರ್ನಾಟಕ ರಾಜ್ಯ ಅಕ್ಕಿ ಗಿರಣಿದಾರರ ಸಂಘ ಕಾರ್ಯಕಾರಿ ನಿರ್ದೇಶಕ ಪುರುಷೋತ್ತಮ ತಿಳಿಸಿದ್ದಾರೆ.