ಕಲಾದಗಿ(ಮಾ.27): ಮಹಾಮಾರಿ ಕೊರೋನಾ ಎಲ್ಲೆಡೆ ರಣಕೇಕೆ ಹಾಕುತ್ತಿದೆ. ಆರ್ಥಿಕ ಹೊಡೆತ ತಂದೊಡ್ಡಿ ಅದೇಷ್ಟೋ ಉದ್ಯೋಮಗಳನ್ನು ಈಗಾಗಲೇ ಬಂದ್‌ ಮಾಡಿಸಿದೆ. ಇದರಿಂದ ಲಕ್ಷಾಂತರ ಜನರು ಕಂಗಾಲಾಗಿದೆ. ಕೊರೋನಾಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಡಜನರು ನಿತ್ಯ ತುತ್ತಿಗಾಗಿ ಪರಿತಪಿಸುವಂತೆ ಮಾಡಿದೆ. ಇದರೊಟ್ಟಿಗೆ ಕಲಾದಗಿಕ ಚಿಕ್ಕು(ಸಪೋಟಾ) ಬೆಳೆಗಾರರ ಬದುಕಲ್ಲಿ ಕರಿಛಾಯೇ ಆವರಿಸುವಂತೆ ಮಾಡಿದೆ.

ಈ ಭಾಗದ ಬಹುತೇಕ ರೈತರ ಬೆಳೆ ದಾಳಿಂಬೆ ಹಾಗೂ ಚಿಕ್ಕು(ಸಪೋಟಾ) ಹಣ್ಣಿನ ಬೆಳೆಯಾಗಿದೆ. ಈ ಹಣ್ಣು ಬೆಳೆಯನ್ನು ನಂಬಿಕೊಂಡೇ ಜೀವನ ನಡೆಸುವ ರೈತರ ಬಾಳು ಕೊರೋನಾ ವೈರಸ್‌ ಹರಡುವಿಕೆಗೆ ವ್ಯವಹಾರ ವಹಿವಾಟು ಕುಂಠಿತವಾಗಿ ಹಣ್ಣು ಕೇಳುವವರಿಲ್ಲದೇ ಬೆಲೆ ನೆಲಕಚ್ಚಿದೆ. ಇದರಿಂದ ರೈತರಿಗೆ ನಷ್ಟವಾಗಿ ಆರ್ಥಿಕವಾಗಿ ಹಾನಿ ಅನುಭವಿಸುವಂತಾಗಿದೆ. ರಾಜ್ಯದಲ್ಲಿ ಕೊರೋನಾ ವೈರಸ್‌ ಸೋಂಕು ಕೆಲವರಿಗೆ ನೇರವಾಗಿ ತಗುಲಿ ಜೀವಹಾನಿ ಆತಂಕ ಹಾಗೂ ಜೀವ ಹಾನಿಯನ್ನು ತಂದೊಡ್ಡಿದ್ದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಈ ಕೊರೋನಾ ಕಾಟ ಇಲ್ಲವಾದರೂ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಮಹಾಮಾರಿ ಜಿಲ್ಲೆಗೆ ಅಂಟಿಕೊಳ್ಳದಂತೆ ಕ್ರಮ ಕೈಗೊಂಡಿದೆ. ಆದರೆ ಕಲಾದಗಿ ಭಾಗದ ರೈತರ ಸಿಹಿ ಬಾಳಿಗೂ ಕರೋನಾ ಕರಿನೆರಳು ಕಹಿಯಾಗಿ ಪರಿಣಮಿಸಿದೆ. ಹೀಗಾಗಿ ಸಪೋಟಾ ಹಣ್ಣು ಕೇಳುವರಿಲ್ಲವಾಗಿದ್ದಾರೆ.

3ನೇ ದಿನಕ್ಕೆ ಲಾಕ್‌ಡೌನ್; ಹೇಗಿದೆ ನೋಡಿ ನಮ್ ಜನರ ರೆಸ್ಪಾನ್ಸ್!

ರೈತರಿಗೆ ನಷ್ಟ:

ಸಪೋಟಾ(ಚಿಕ್ಕು) ಸವಾಲು ಮಾರುಕಟ್ಟೆಯಲ್ಲಿ ವಾರಕ್ಕೆ ಎರಡು ಬಾರಿ ನಡೆಯುತ್ತದೆ. ಸೋಮವಾರ ಮತ್ತು ಗುರುವಾರದಂದು ನಡೆದು, ಕನಿಷ್ಠ 70 ರಿಂದ 80ಟನ್‌ ಆವಕವಾಗಿ ವಾರದ ಎರಡು ದಿನದಲ್ಲಿ 150 ಟನ್‌ ಸಪೋಟಾ ಸವಾಲಾಗುತ್ತದೆ. ಪ್ರತಿ ವಾರ 40 ಕೆಜಿ ಒಂದು ಬ್ಯಾಗ್‌ ಸಪೋಟಾಕ್ಕೆ 500ರಿಂದ 800ಗೆ ಮಾರಾಟವಾಗುತ್ತಾ ಬಂದಿತ್ತು. ಮಾ 23ರಂದು ಸೋಮವಾರದ ಸವಾಲು ದಿನದಂದು ಮಾರುಕಟ್ಟೆಗೆ 50ರಿಂದ 60 ಟನ್‌ ಮಾರುಕಟ್ಟೆಗೆ ಬಂದಿತ್ತು. ಅದರೆ ಸವಾಲು ಕೇಳುವ ವ್ಯಾಪಾರಸ್ಥರೇ ಇಲ್ಲದೆ ಸಪೋಟಾ ಮಾರಾಟ ಸವಾಲಾಗಿಯೇ ಪರಿಣಮಿಸಿತು. ಕೊನೆಗೂ ಒಂದು ಬ್ಯಾಗ್‌ಗೆ 300ರಿಂದ 400ವರಗೆ ಮಾರಾಟವಾಗಿ ರೈತರೂ ನಷ್ಟ ಅನುಭವಿಸುವಂತಾಗಿದೆ.

ವಾರದ ಏಳು ದಿನವೂ ರಾಜ್ಯದ ರಾಯಚೂರು, ಬೆಳಗಾವಿ, ವಿಜಯಪುರ ವಿವಿಧ ಜಿಲ್ಲೆಗೆ ಮತ್ತು ಹೊರ ರಾಜ್ಯದ ಲಾತೂರ್‌ ಸೋಲಾಪುರಕ್ಕೂ ದಿನವೂ 10 ಬೊಲೋರೋ ಗೂಡ್ಸ್‌ ವಾಹನದಲ್ಲಿ ದಿನಕ್ಕೆ 40 ಟನ್‌ ನಿಂದ 50 ಟನ್‌ ಚಿಕ್ಕು ಸಾಗಾಟವಾಗುತ್ತಿತ್ತು. ಈ ವಾರ ಚಿಕ್ಕು ಯಾರೂ ಕೇಳುವವರಿಲ್ಲದೇ ದರ ಧಾರಾಶಾಹಿಯಾಗಿ ಕೆಳಕ್ಕೆ ಬಿದ್ದು ಬೆಳೆದ ರೈತರು ನೆಲ ಕಚ್ಚಿದ್ದಾರೆ. ಹೀಗಾಗಿ ಚಿಕ್ಕು ಬೆಳೆಗಾರರ ಬಾಳಲ್ಲಿ ಕೊರೋನಾ ಕರಿಛಾಯೆ ಮೂಡಿಸಿ ಕಂಗಾಲಾಗಿದೆ.
ಈಗ ಬೇಸಿಗೆ ಕಾಲ ಆರಂಭವಾಗಿದೆ. ಗಿಡದಲ್ಲಿ ಬಹಳ ದಿನ ಚಿಕ್ಕು ಕಾಯಿ ಬಿಡುವಂತೆ ಇಲ್ಲ. ಗಿಡದಲ್ಲೇ ಹಣ್ಣಾಗಿ ಉದುರಿ ಬಿದ್ದು ರೈತರಿಗೆ ನಷ್ಟವಾಗುತ್ತದೆ. ಬಲಿತ ಕಾಯಿ ಹರಿದು ಮಾರುಕಟ್ಟೆಗೆ ಕಳುಹಿಸಬೇಕು. ಕೊರೋನಾ ಕಾಟದಿಂದ ಹಣ್ಣಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತರಿಗೆ ನಷ್ಟವಾಗುತ್ತಿದೆ ಎಂದು ಶಾರದಾಳದ ಯುವ ರೈತ ಲಕ್ಷ್ಮಣ ಶಿರಬೂರ ಹೇಳಿದ್ದಾರೆ. 

ಕೊರೋನಾದಿಂದ ರಕ್ಷಿಸಿಕೊಳ್ಳಲು ಮನೆಯನ್ನೇ ಲಾಕ್‌ಡೌನ್‌ ಮಾಡಿಕೊಂಡ ರೈತ

ಸರ್ಕಾರ ಅವಶ್ಯಕ ವಸ್ತುಗಳ ಅಂಗಡಿಗಳ ತೆರವಿಗೆ ಅವಕಾಶ ನೀಡಿದಂತೆ ಹಣ್ಣು ಮಾರಾಟ ಅಂಗಡಿಯವರಿಗೆ ಅವಕಾಶ ಕೊಡಬೇಕು. ಇದರಿಂದ ರೈತರ ಹಣ್ಣು ಬೆಳೆಗಾರರ ಹಣ್ಣುಗಳು ಮಾರಾಟವಾಗಿ ಉತ್ತಮ ಬೆಲೆ ಸಿಗಲಿದೆ ಎಂದು ಗೋವಿಂದಕೊಪ್ಪದ ರೈತ ರಮೇಶ ಶಿವನಿಚ್ಚಿ ತಿಳಿಸಿದ್ದಾರೆ. 

ಸೋಮವಾರದ ಸಪೋಟಾ ಸವಾಲಿನಲ್ಲಿ ಮಾರುಕಟ್ಟೆಗೆ ಅಂದಾಜು ಒಟ್ಟು 40 ಟನ್‌ ಬಂದಿತ್ತು. ಆದರೆ ಹಣ್ಣು ಕೇಳುವ ವ್ಯಾಪಾರಸ್ಥರೇ ಇಲ್ಲದೇ ಕಡಿಮೆ ಬೆಲೆ ಸವಾಲಾಗಿವೆ. ಇದರಿಂದ ರೈತರಿಗೆ ಪ್ರತಿ ವಾರಕ್ಕಿಂತ 300 ನಷ್ಟವಾಗಿದೆ ಎಂದು ಸಪೋಟಾ ಹಣ್ಣು ಸವಾಲುಗಾರ ಮೊಹಮ್ಮದ್‌ ಹೊಸಕೋಟಿ ಹೇಳಿದ್ದಾರೆ.