ಗಜೇಂದ್ರಗಡ(ಮಾ.27): ಕೊರೋನಾ ರೋಗ ಹರಡದಂತೆ ಈಗಾಗಲೇ ಉತ್ತರ ಕರ್ನಾಟಕದ ಕೆಲ ಹಳ್ಳಿಗಳಲ್ಲಿ ಗ್ರಾಮಸ್ಥರು ಸಂಪರ್ಕದ ರಸ್ತೆಗಳನ್ನು ಅಗೆದಿದ್ದರೆ ಇನ್ನು ಕೆಲವೆಡೆ ಮುಳ್ಳು- ಕಂಟಿಗಳನ್ನು ಹಚ್ಚಿ ಗ್ರಾಮವನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲೊರ್ವ ರೈತ ಮನೆಯ ಸುತ್ತಲೂ ಕಪ್ಪು ಫರದೆ ಹಾಕಿಕೊಳ್ಳುವ ಮೂಲಕ ಕುಟುಂಬದ ರಕ್ಷಣೆಗೆ ಮುಂದಾಗಿದ್ದಾನೆ.

ಹೌದು, ತಾಲೂಕಿನ ಕಲ್ಲಿಗನೂರು ಗ್ರಾಮದಲ್ಲಿ ತಮ್ಮ ಮನೆಗೆ ಯಾರು ಬರಬಾರದು ಎನ್ನುವ ಉದ್ದೇಶದಿಂದ ಹಾಗೂ ತಮ್ಮ ಕುಟುಂಬವನ್ನು ಕೊರೋನಾ ರೋಗದಿಂದ ರಕ್ಷಿಸಿಕೊಳ್ಳಲು ರೈತ ಶ್ರೀಶೈಲಪ್ಪ ಕಾಟಿ ವಿಶಿಷ್ಟಪ್ರಯತ್ನ ಮಾಡಿದ್ದಾರೆ. ಪರಿಣಾಮ ಕುಟುಂಬದ ರಕ್ಷಣೆಗಾಗಿ ಮನೆಯ ಸುತ್ತಲೂ 300 ಮೀಟರ್‌ ಕಪ್ಪು ಬಣ್ಣದ ಫರದೆ ಹಾಕಿಕೊಂಡು ರೈತನು ಮನೆಯನ್ನೆ ಲಾಕ್‌ಡೌನ್‌ ಮಾಡಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ. ತಮ್ಮ ಮನೆಗೆ ಯಾರೂ ಬರಬಾರದೆಂದು ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಂಡಿದ್ದಾನೆ.

EMI ಕಟ್ಟಲು 3 ತಿಂಗಳ ಟೈಮ್: RBI ಕ್ರಮ ಸ್ವಾಗತಿಸಿದ ಶ್ರೀರಾಮುಲು

ದೇಶದ ಪ್ರಧಾನಿ ಮೋದಿ ಅವರು ಕರೆ ನೀಡಿರುವ ಕಿಲ್ಲರ್‌ ಕೊರೋನ ವೈರಸ್‌ ಹರಡುವ ಭೀತಿಯಿಂದ ಮನೆಯಲ್ಲಿರುವ 20 ಜನರನ್ನು ಈ ರೋಗದಿಂದ ಉಳಿಸಿಕೊಳ್ಳಲು ರೈತನು ಮನೆಯ ಸುತ್ತಲೂ ಬ್ಲ್ಯಾಕ್‌ ಮ್ಯಾಟ್‌ ಹಾಕಿಕೊಂಡಿ​ದ್ದಾರೆ.
ನಮ್ಮ ಗ್ರಾಮದಿಂದ ಹಲವಾರು ಜನರು ದೂರದ ಮಂಗಳೂರು, ಬೆಂಗಳೂರು, ಪಣಜಿ ಸೇರಿ ಇತರ ನಗರ ಪ್ರದೇಶಗಳಿಗೆ ದುಡಿಯಲು ಹೋಗುತ್ತಾರೆ. ಈಗ ದೇಶದಲ್ಲಿ ಲಾಕ್‌ಡೌನ್‌ ಇರುವುದರಿಂದ ರಾಜ್ಯ ಹಾಗೂ ಹೊರ ರಾಜ್ಯದ ದೊಡ್ಡ ನಗರಗಳಿಂದ ಬಂದ ಜನರು ಪರಿಚಿತರಿದ್ದು ಮಾತನಾಡಿಸಲು ಇಲ್ಲವೇ ಏನಾದರೊಂದು ಕಾರಣದಿಂದ ತಮ್ಮ ಮನೆಗೆ ಬರುತ್ತಾರೆ ಅದನ್ನು ತಪ್ಪಿಸುವ ಉದ್ದೇಶದಿಂದ ಈ ರೀತಿಯ ಫರದೆ ಕಟ್ಟಿದ್ದಾಗಿ ರೈತ ಹೇಳುತ್ತಾನೆ.