ಬೆಂಗಳೂರು(ಮಾ.30): ಕೊರೋನಾ ವೈರಸ್‌ ನಿಯಂತ್ರಣಕಾಗಿ ರಾಜಧಾನಿ ಲಾಕ್‌ ಡೌನ್‌ ಮಾಡಿರುವುದರಿಂದ ಹೊತ್ತಿನ ಊಟಕ್ಕೂ ವಲಸೆ ಕಾರ್ಮಿಕರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ನೈಋುತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ನಗರದ ವಿವಿಧ ರೈಲು ನಿಲ್ದಾಣಗಳ ಬಳಿ ಭಾನುವಾರ ಕಾರ್ಮಿಕರಿಗೆ ಎರಡು ಸಾವಿರ ಆಹಾರ ಪೊಟ್ಟಣ ವಿತರಿಸಿ ಮಾನವೀಯತೆ ಮೆರೆಯಲಾಗಿದೆ.

ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ ಕುಮಾರ್‌ ವರ್ಮಾ ಅವರ ನೇತೃತ್ವದಲ್ಲಿ ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಇಂಡಿಯನ್‌ ರೈಲ್ವೆ ಕೇಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಷನ್‌ (ಐಆರ್‌ಸಿಟಿಸಿ) ಕ್ಯಾಂಟಿನ್‌ನಲ್ಲಿ ಆಹಾರ ಸಿದ್ಧಪಡಿಸಿ, ಕೆಎಸ್‌ಆರ್‌ ರೈಲು ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳಲ್ಲಿ 550, ಯಶವಂತಪುರ ಪ್ರದೇಶದಲ್ಲಿ 450, ಬೈಯಪನಹಳ್ಳಿ ಪ್ರದೇಶದಲ್ಲಿ 150, ಕಂಟೋನ್ಮೆಂಟ್‌ ಮತ್ತು ಕೆ.ಆರ್‌.ಪುರಂ ಪ್ರದೇಶಗಳಲ್ಲಿ 250 ಆಹಾರದ ಪೊಟ್ಟಣಗಳನ್ನು ಕಾರ್ಮಿಕರಿಗೆ ವಿತರಿಸಲಾಗಿದೆ. ಅಂತೆಯೆ ನಗರದ ಕೆಲವು ವೃದ್ಧಾಶ್ರಮಗಳಿಗೂ ಆಹಾರದ ಪೊಟ್ಟಣ ಕಳುಹಿಸಲಾಗಿದೆ. ಏ.14ರ ವರೆಗೆ ಈ ಕಾರ್ಯ ಮುಂದುವರಿಯಲಿದೆ.

ಮನೆಯಿಂದ ಹೊರಬಂದರೆ ಇಂದಿನಿಂದ ಕೇಸು, ನೆಪ ಹೇಳಿದರೆ ಕೇಳೋದಿಲ್ಲ!

ಗ್ರಾಸರಿ ಕಿಟ್‌ ವಿತರಣೆ:

ರೈಲುಗಳ ಸಂಚಾರವೂ ಸಂಪೂರ್ಣ ಸ್ಥಗಿತವಾಗಿರುವುದರಿಂದ ರೈಲ್ವೆ ನಿಲಾಣಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಹೀಗಾಗಿ ನೈಋುತ್ಯ ರೈಲ್ವೆಯು ಕೆಲ ಸ್ವಯಂ ಸೇವ ಸಂಸ್ಥೆಗಳ ಸಹಯೋಗದಲ್ಲಿ ಸುಮಾರು 400 ಮಂದಿ ಕೂಲಿ ಕಾರ್ಮಿಕರಿಗೆ ದಿನಸಿ ಪದಾರ್ಥಗಳ ಕಿಟ್‌ ವಿತರಿಸಲಾಗಿದೆ. ಈ ಕಿಟ್‌ನಲ್ಲಿ 5 ಕೆ.ಜಿ.ಅಕ್ಕಿ, 1 ಕೆ.ಜಿ.ಬೇಳೆ, ಚಿಲ್ಲಿ ಪೌಂಡರ್‌, ಅರಿಶಿನ, ಎರಡು ಮೈ ಸೋಪು, ಎರಡು ರಿನ್‌ ಸೋಪು, 1 ಲೀಟರ್‌ ಅಡುಗೆ ಎಣ್ಣೆ, 5 ಕೇಜಿ ಹಿಟ್ಟು, 30 ಫೇಸ್‌ ಮಾಸ್ಕ್‌ ಸೇರಿದಂತೆ ಹಲವು ವಸ್ತುಗಳನ್ನು ಒಳಗೊಂಡಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.