Asianet Suvarna News Asianet Suvarna News

ವೈರಸ್‌ ಅಬ್ಬರ: ರಾಜ್ಯದಲ್ಲಿ 34 ಕೊರೋನಾ ವಂಶವಾಹಿ ಪತ್ತೆ..!

ಎರಡನೇ ಅಲೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹೇಗೆ ವ್ಯಾಪಿಸುತ್ತಿದೆ ಎಂಬುದನ್ನು ಅರಿಯಲು ‘ಜಿನೊಮಿಕ್‌ ವೇರಿಯಂಟ್ಸ್‌’ ಅಧ್ಯಯನ| ಕೊರೋನಾ ರೂಪಾಂತರ ಹಾಗೂ ‘ಅಮಿನೊ ಆ್ಯಸಿಡ್‌’ ಬದಲಾವಣೆ ಕುರಿತು ಪರೀಕ್ಷೆ| ತೀವ್ರ ಸೋಂಕು, ಸೋಂಕು ಮರುಕಳಿಸುವಿಕೆ, ರೋಗ ನಿರೋಧಕ ಶಕ್ತಿ ಕಡಿಮೆಗೊಳಿಸುವುದು ಸೇರಿದಂತೆ ಕೊರೋನಾ ವಂಶವಾಹಿ ಲಕ್ಷಣಗಳ ಬಗ್ಗೆಯೂ ಪರಿಶೀಲನೆ| 
 

34 Corona gene Found in Karnataka grg
Author
Bengaluru, First Published Apr 5, 2021, 7:06 AM IST

ಬೆಂಗಳೂರು(ಏ.05): ರಾಜ್ಯದಲ್ಲಿ ಸಕ್ರಿಯವಾಗಿರುವ ಕೊರೋನಾ ಸೋಂಕಿನ ವಂಶವಾಹಿ ಗುಣಗಳ ಕುರಿತು ನಿಮ್ಹಾನ್ಸ್‌ ವೈರಾಣು ವಿಭಾಗ ಅಧ್ಯಯನ ನಡೆಸಿದ್ದು ರಾಜ್ಯದಲ್ಲಿ 34 ಕೊರೋನಾ ವಂಶವಾಹಿಗಳು ಪತ್ತೆಯಾಗಿವೆ. ಈ ಪೈಕಿ ‘ಬಿ.1.36’ ವಂಶವಾಹಿಯುಳ್ಳ ರೂಪಾಂತರಿ ವೈರಸ್‌ ಸ್ಥಳೀಯವಾಗಿ ತೀವ್ರವಾಗಿ ಹರಡುತ್ತಿದೆ ಎಂದು ತಿಳಿದು ಬಂದಿದೆ.

ಫೆಬ್ರವರಿ-ಮಾರ್ಚ್‌ ತಿಂಗಳಲ್ಲಿ ಸೋಂಕಿಗೆ ಒಳಗಾಗಿದ್ದ 75 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು ಹಾಗೂ 108 ಮಂದಿ ಸ್ಥಳೀಯ ಸೋಂಕಿತರ ಮಾದರಿಗಳನ್ನು ಚಿತ್ರಾ ಪಟ್ಟಾಭಿರಾಮನ್‌ ನೇತೃತ್ವದ ನಿಮ್ಹಾನ್ಸ್‌ ತಜ್ಞರ ತಂಡ ಅಧ್ಯಯನ ನಡೆಸಿದೆ.

ಎರಡನೇ ಅಲೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹೇಗೆ ವ್ಯಾಪಿಸುತ್ತಿದೆ ಎಂಬುದನ್ನು ಅರಿಯಲು ‘ಜಿನೊಮಿಕ್‌ ವೇರಿಯಂಟ್ಸ್‌’ ಅಧ್ಯಯನ ನಡೆಸಲಾಗಿದೆ ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಹಾಗೂ ವೈರಾಣು ತಜ್ಞ ಡಾ.ವಿ. ರವಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ 2ನೇ ಅಲೆ ಅಬ್ಬರ: ಹಳೆ ದಾಖಲೆಗಳು ಉಡೀಸ್!

ಅಧ್ಯಯನದಲ್ಲಿ ಕೊರೋನಾ ರೂಪಾಂತರ ಹಾಗೂ ‘ಅಮಿನೊ ಆ್ಯಸಿಡ್‌’ ಬದಲಾವಣೆ ಕುರಿತು ಪರೀಕ್ಷೆ ನಡೆಸಲಾಗಿದೆ. ತೀವ್ರ ಸೋಂಕು, ಸೋಂಕು ಮರುಕಳಿಸುವಿಕೆ, ರೋಗ ನಿರೋಧಕ ಶಕ್ತಿ ಕಡಿಮೆಗೊಳಿಸುವುದು ಸೇರಿದಂತೆ ಕೊರೋನಾ ವಂಶವಾಹಿ ಲಕ್ಷಣಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ.

ಬಿ.1.36 ಮಾದರಿಯಿಂದಲೇ ಸೋಂಕು:

176 ಕೊರೋನಾ ಪಾಸಿಟಿವ್‌ ಪ್ರಕರಣಗಳಲ್ಲಿ 34 ವಂಶವಾಹಿಗಳು ಪತ್ತೆಯಾಗಿದ್ದು ಪ್ರತ್ಯೇಕವಾಗಿ ವರ್ಗೀಕರಿಸಲಾಗಿದೆ. ವಿದೇಶಿ ಸೋಂಕಿತರ ಪೈಕಿ ಬಿ.1.1.7 (ಯು.ಕೆ. ಮೂಲದ ರೂಪಾಂತರಿ) ಅತಿ ಹೆಚ್ಚು ಮಂದಿಗೆ ತಗುಲಿದೆ. 176 ಮಾದರಿಗಳಲ್ಲಿ ಶೇ.32.9 ರಷ್ಟುಮಂದಿಗೆ ಬಿ.1.1.7 ವಂಶವಾಹಿ ಪತ್ತೆಯಾಗಿದೆ. ಉಳಿದಂತೆ ಬಿ.1.36 ಎಂಬ ವಂಶವಾಹಿ ಶೇ.27.4 ಪ್ರಕರಣಗಳಲ್ಲಿ, ಶೇ.19.2 ರಷ್ಟು ಪ್ರಕರಣಗಳಲ್ಲಿ ಬಿ.1 ವಂಶವಾಹಿ ಪತ್ತೆಯಾಗಿದೆ.

ಇನ್ನು ಸ್ಥಳೀಯ 103 ಮಾದರಿಗಳಲ್ಲಿ ಶೇ.43.7 ಸರಾಸರಿಯಂತೆ 45 ಪ್ರಕರಣಗಳಲ್ಲಿ ಬಿ.1.36 ವಂಶವಾಹಿ ವೈರಸ್‌ ಪತ್ತೆಯಾಗಿದೆ. ಉಳಿದಂತೆ 26ರಲ್ಲಿ ಬಿ.1, 5 ರಲ್ಲಿ ಬಿ.1.1.74, 4 ರಲ್ಲಿ ಬಿ.1.468 ಪತ್ತೆಯಾಗಿದೆ. ಹೀಗಾಗಿ ಬೆಂಗಳೂರು ನಗರದಲ್ಲಿ ಸೋಂಕು ಹರಡುತ್ತಿರುವುದು ಇದೇ ವಂಶವಾಹಿಯುಳ್ಳ ರೂಪಾಂತರಿ ಕೊರೋನಾ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 

Follow Us:
Download App:
  • android
  • ios