ಶೇ.10ರಷ್ಟು ಮಂದಿ ಆಸ್ಪತ್ರೆಗೆ ದಾಖಲಾದರೂ ಹಾಸಿಗೆ ಕೊರತೆ| ಪತ್ತೆಯಾಗುವ 6500 ಪ್ರಕರಣಗಳಲ್ಲಿ ಶೇ.10 ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯ| ಕೆಲವೇ ದಿನಗಳಲ್ಲಿ ಅಗತ್ಯವಾದ ಹಾಸಿಗೆಗಳು ಸಿಗಲಾರದು|  ದ ಆಗತ್ಯ ಕ್ರಮ ಕೈಗೊಳ್ಳಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು:ಗಿರಿಧರ್‌ ಆರ್‌.ಬಾಬು| 

ಬೆಂಗಳೂರು(ಏ.05): ನಗರದಲ್ಲಿ ಸದ್ಯದ ರೀತಿಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗುವುದು ಮುಂದುವರಿದರೆ ಏಪ್ರಿಲ್‌ 20ರ ಹೊತ್ತಿಗೆ ಪ್ರತಿದಿನ 6,500 ಪ್ರಕರಣಗಳು ಪತ್ತೆಯಾಗಬಹುದು ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಗಿರಿಧರ್‌ ಆರ್‌.ಬಾಬು ಆತಂಕ ವ್ಯಕ್ತಪಡಿಸಿದ್ದಾರೆ.

ಭಾನುವಾರ ಟ್ವೀಟ್‌ ಮಾಡಿರುವ ಗಿರಿಧರ್‌ ಬಾಬು, ಪತ್ತೆಯಾಗುವ 6500 ಪ್ರಕರಣಗಳಲ್ಲಿ ಶೇ.10 ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯ ಎಂದಾದರೂ ಕೆಲವೇ ದಿನಗಳಲ್ಲಿ ಅಗತ್ಯವಾದ ಹಾಸಿಗೆಗಳು ಸಿಗಲಾರದು. ಆದ್ದರಿಂದ ಆಗತ್ಯ ಕ್ರಮ ಕೈಗೊಳ್ಳಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದ್ದಾರೆ.

ವೈರಸ್‌ ಅಬ್ಬರ: ರಾಜ್ಯದಲ್ಲಿ 34 ಕೊರೋನಾ ವಂಶವಾಹಿ ಪತ್ತೆ..!

2020ರಲ್ಲಿ ಲಾಕ್‌ಡೌನ್‌ ಮಾಡದೇ ವಿಧಿಯಿರಲಿಲ್ಲ. ಆದರೆ 2021ರಲ್ಲಿ ಲಾಕ್‌ಡೌನ್‌ಅನ್ನು ಖಂಡಿತ ತಪ್ಪಿಸಬಹುದು. ಕಾರ್ಯಪ್ರವೃತ್ತರಾಗಲು ಕಾಯದೇ ಕ್ರಮ ಕೈಗೊಳ್ಳಬೇಕು. ವಿಳಂಬ ಕ್ರಮದಿಂದ ಯಾರಿಗೂ ಸಹಾಯವಾಗಲಾರದು. ಹಾಗಾಗಿ ಬಹುತೇಕ ಸಭೆ, ಸಮಾರಂಭಗಳು ಮತ್ತು ಜನ ಸೇರುವುದನ್ನು ತಪ್ಪಿಸಬಹುದಾಗಿದೆ. ಸ್ಥಳೀಯವಾಗಿ ನಿಯಂತ್ರಿಸಲು ಸಾಧ್ಯವಾಗದೇ ಹೋದರೆ, ರಾಷ್ಟ್ರೀಯ ಮಟ್ಟದಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಗಿರಿಧರ್‌ ಬಾಬು ಹೇಳಿದ್ದಾರೆ. ಜನರು ಮನೆಯಲ್ಲಿ ಇರಬೇಕು, ಹೊರಗೆ ಹೋಗುವುದು ಅನಿವಾರ್ಯವಾದರೆ ಆಗ ಮಾಸ್ಕ್‌ ಧರಿಸಿ, ಅರ್ಹರು ಲಸಿಕೆ ಪಡೆಯಿರಿ ಎಂದು ಅವರು ಮನವಿ ಮಾಡಿದ್ದಾರೆ.

ಸಕ್ರಿಯ ಪ್ರಕರಣ 55,000ಕ್ಕೆ ಹೆಚ್ಚಳ?

ರಾಜ್ಯದಲ್ಲಿ ಈಗಾಗಲೇ ಪ್ರತಿದಿನ ಸರಾಸರಿ 3 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಗಳ ಕೋವಿಡ್‌ ಹಾಸಿಗೆಗಳು ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ನೆರವನ್ನು ಪಡೆಯಲಾಗುತ್ತಿದೆ. ಮೊದಲ ಅಲೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸರಾಸರಿ 4-5 ಸಾವಿರ ಪ್ರಕರಣ ವರದಿಯಾಗುತ್ತಿತ್ತು. 6 ಸಾವಿರಕ್ಕಿಂತ ಹೆಚ್ಚಿನ ಸರಾಸರಿ ದಾಖಲಾಗಿರಲಿಲ್ಲ. ಬೆಂಗಳೂರಿನಲ್ಲಿ ಈಗಾಗಲೇ 28 ಸಾವಿರದಷ್ಟು ಸಕ್ರಿಯ ಕೋವಿಡ್‌ ಪ್ರಕರಣಗಳಿದ್ದು, ಏಪ್ರಿಲ್‌ 20ರ ಹೊತ್ತಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 55 ಸಾವಿರ ದಾಟಿದರೂ ಅಚ್ಚರಿಯಿಲ್ಲ. ಸಕ್ರಿಯ ಪ್ರಕರಣ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆ, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರ ಮೇಲೂ ಒತ್ತಡ ಬೀಳಲಿರುವುದರಿಂದ ಪರಿಸ್ಥಿತಿ ಎದುರಿಸಲು ಸಜ್ಜಾಗಬೇಕು ಎಂದು ಮತ್ತೊಬ್ಬ ತಜ್ಞರು ಎಚ್ಚರಿಸಿದ್ದಾರೆ.