ಮಂಗಳೂರು(ಮಾ.31): ಕರ್ನಾಟಕಕ್ಕೆ ತುರ್ತು ಚಿಕಿತ್ಸೆಗೆ ಕೇರಳ ರೋಗಿಗಳಿಗೆ ಅವಕಾಶ ನೀಡದ ಹಿನ್ನೆಲೆಯನ್ನು ಮುಂದಿಟ್ಟು ‘ಮಂಗಳೂರು ಆಸ್ಪತ್ರೆ ಬಹಿಷ್ಕರಿಸಿ’ ಹೆಸರಿನಲ್ಲಿ ಕಾಸರಗೋಡಿನ ಜನತೆ ಭಾನುವಾರ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಕಳೆದ ಒಂದು ವಾರದಲ್ಲಿ ಮಂಗಳೂರಿಗೆ ಚಿಕಿತ್ಸೆಗೆ ಆಗಮಿಸುವ ಕೇರಳ ಆಂಬುಲೆನ್ಸ್‌ಗಳನ್ನು ರಾ.ಹೆ. 66ರಲ್ಲಿ ಜಿಲ್ಲೆಯ ಗಡಿ ಭಾಗದಲ್ಲಿ (ತ​ಲ​ಪಾ​ಡಿ) ಪೊಲೀಸರು ತಡೆಯುತ್ತಿದ್ದಾರೆ. ಕೇರಳದಲ್ಲಿ ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ದ.ಕ. ಪ್ರವೇಶಕ್ಕೆ ಅನುಮತಿ ನಿರಾಕರಿಸಿ ಇಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಈ ಕಾರಣಕ್ಕೆ ಗಡಿ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡುತ್ತಿಲ್ಲ. ಈ ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಕೆಲವು ಮಂದಿ ಮಂಗಳೂರು ಆಸ್ಪತ್ರೆ ಬಹಿಷ್ಕರಿಸಿ ಅಭಿಯಾನ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ 33000 ಶಂಕಿತರ ಹೋಂ ಕ್ವಾರಂಟೈನ್‌ ಅಂತ್ಯ!

ಮೂರು ದಿನಗಳ ಹಿಂದೆ ಹೆರಿಗೆಗಾಗಿ ಮಂಗಳೂರಿಗೆ ಗರ್ಭಿಣಿಯನ್ನು ಕರೆ ತರುತ್ತಿದ್ದ ಆಂಬುಲೆನ್ಸನ್ನು ಗಡಿಭಾಗ ತಲಪಾಡಿಯಲ್ಲಿ ಪೊಲೀಸರು ತಡೆದು ವಾಪಸ್‌ ಕಳುಹಿಸಿದ್ದರು. ಇದೇ ರೀತಿ ಆಂಬುಲೆನ್ಸ್‌ನಲ್ಲಿ ಕರೆತರುತ್ತಿದ್ದ ಅನಾರೋಗ್ಯಪೀಡಿತ ವೃದ್ಧೆ ಮಂಗಳೂರಿಗೆ ಬರಲಾಗದೆ ದಾರಿ ಮಾಧ್ಯೆ ಮೃತಪಟ್ಟಿದ್ದರು.

ಶುರುವಾಯ್ತು ಅಭಿಯಾನ:

ಇದೇ ಕಾರಣವನ್ನು ಮುಂದಿಟ್ಟುಕೊಂಡು ಕೇರಳಿಗರು ಈಗ ಮಂಗಳೂರು ಆಸ್ಪತ್ರೆ ಬಹಿಷ್ಕಾರ ಅಭಿಯಾನ ಆರಂಭಿಸಿದ್ದಾರೆ. ಮೊದಲೇ ಕಾಸರಗೋಡಿನಲ್ಲಿ ಚಿಕಿತ್ಸೆಗೆ ಸರಿಯಾದ ಆಸ್ಪತ್ರೆ ಇಲ್ಲ. ಕಾಸರಗೋಡು ಜನತೆಗೆ ಕಣ್ಣೂರಿನ ಪೆರಿಯಾರ್‌ ಆಸ್ಪತ್ರೆ ಜೀವನಾಡಿ. ಆದರೆ ಕಾಸರಗೋಡಿಗೆ ಹತ್ತಿರ ಮಂಗಳೂರು. ಹಾಗಾಗಿ ಕೇರಳಿಗರು, ಅದರಲ್ಲೂ ಗಡಿನಾಡು ಕಾಸರಗೋಡಿನ ಮಂದಿ ಮಂಗಳೂರು ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.

ಅಚ್ಚರಿಯ ಸಂಗತಿ ಎಂದರೆ, ಕೇರಳಿಗರೇ ಮಂಗಳೂರಿನಲ್ಲಿ ದೊಡ್ಡ ಆಸ್ಪತ್ರೆ ನಿರ್ಮಿಸಿದ್ದಾರೆ. ಈಗ ಇಲ್ಲಿ ಆಸ್ಪತ್ರೆ ಇದ್ದರೂ ಕೇರಳದಿಂದ ಬರಲಾಗುತ್ತಿಲ್ಲ. ಹೀಗಾಗಿ ಮಂಗಳೂರು ಆಸ್ಪತ್ರೆಯ ಸಹವಾಸ ಬೇಡವೇ ಬೇಡ ಎಂಬ ನಿರ್ಧಾರಕ್ಕೆ ಬಂದಿರುವ ಕೇರಳಿಗ ನೆಟ್ಟಿಗರು, ಜಾಲತಾಣಗಳಲ್ಲಿ ಮಂಗಳೂರು ಆಸ್ಪತ್ರೆ ಬಹಿಷ್ಕರಿಸಿ ಎಂಬ ಅಭಿಯಾನ ನಡೆಸುತ್ತಿದ್ದಾರೆ.

ಲಾಕ್‌ಡೌನ್‌: ಸುಬ್ರಮಣ್ಯ ದೇವಳದ ಅರ್ಚಕರ ಮೇಲೆ ಹಲ್ಲೆ..!

ಈ ನಡುವೆ ಕೇರಳ ಸಿಎಂ ಕೂಡ ಮಂಗಳೂರು-ಕಾಸರಗೋಡು ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದಕ್ಕೆ ಕರಾವಳಿ ಮಂದಿ ವಿರೋಧ ಕೂಡ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಕೇರಳ ರಾಜ್ಯ ಪ್ರವೇಶಿಸುವ ಎಲ್ಲ 17 ಗಡಿ ರಸ್ತೆಗಳಿಗೆ ಮಣ್ಣು ಹಾಕಿ ತಡೆ ಮಾಡಲಾಗಿದೆ. ಇದು ಕೂಡ ಕೇರಳ ಗಡಿನಾಡ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.