ರಾಜ್ಯದಲ್ಲಿ 33000 ಶಂಕಿತರ ಹೋಂ ಕ್ವಾರಂಟೈನ್‌ ಅಂತ್ಯ|  ಸೋಂಕು ಇಲ್ಲದೆ 14 ದಿನದ ನಿಗಾ ಅವಧಿ ಮುಕ್ತಾಯ|  ಇನ್ನೂ ರಾಜ್ಯದ 10 ಸಾವಿರ ಮಂದಿ ಕ್ವಾರಂಟೈನ್‌ನಲ್ಲಿ|  14 ದಿನಗಳಿಂದ ‘ಗೃಹಬಂಧನ’ದಲ್ಲಿದ್ದ ಕೊರೋನಾ ಶಂಕಿತರು ಸ್ವತಂತ್ರ|  ಇನ್ನು ರಾಜ್ಯಾದ್ಯಂತ 9896 ಜನರು ಮಾತ್ರ ಹೋಂ ಕ್ವಾರಂಟೈನ್‌ನಲ್ಲಿ

 ಬೆಂಗಳೂರು(ಮಾ.31): ರಾಜ್ಯದಲ್ಲಿ ಕೊರೋನಾ ಸೋಂಕು ಶಂಕೆಯಿಂದ ಮನೆಯಲ್ಲೇ ಪ್ರತ್ಯೇಕವಾಗಿಟ್ಟು ನಿಗಾ ವಹಿಸಲಾಗಿದ್ದ 42,929 ಮಂದಿ ಪೈಕಿ 33,033 ಮಂದಿಯ 14 ದಿನಗಳ ನಿಗಾ ಅವಧಿ ಸೋಮವಾರಕ್ಕೆ ಪೂರ್ಣಗೊಂಡಿದೆ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ 1,28,274 ಮಂದಿ ಹೊರದೇಶದಿಂದ ಬಂದ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗಿದೆ. ಇವರಲ್ಲಿ ನಿಗಾ ವ್ಯವಸ್ಥೆಯಡಿ ಗುರುತಿಸಿರುವ 456 ಮಂದಿ ಸೇರಿ ಒಟ್ಟು 42,929 ಮಂದಿಯನ್ನು 14 ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿತ್ತು. ಈ ಪೈಕಿ ಸೋಮವಾರದ ವೇಳೆಗೆ 33,033 ಮಂದಿಯ ಕ್ವಾರಂಟೈನ್‌ ಅವಧಿ ಮುಗಿದಿದೆ ಎಂದು ಹೇಳಿದರು.

ಮನೆಯಲ್ಲೇ ಪ್ರತ್ಯೇಕವಾಗಿದ್ದವರ (ಹೋಂ ಕ್ವಾರಂಟೈನ್‌) ಪೈಕಿ ಹೈರಿಸ್ಕ್‌ ವ್ಯಕ್ತಿಗಳು ಹಾಗೂ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಮನೆಗಳಿಂದ ಸರ್ಕಾರಿ ವ್ಯವಸ್ಥೆಯಡಿ ಸಾಮೂಹಿಕ ನಿಗಾ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಒಟ್ಟಾರೆ ನಿಗಾದಲ್ಲಿರುವವರ ಪೈಕಿ ಈವರೆಗೆ 23,152 ಮಂದಿಗೆ ಕ್ವಾರಂಟೈನ್‌ ಸ್ಟ್ಯಾಂಪ್‌ ಹಾಕಿದ್ದೇವೆ. ಸೋಂಕು ಲಕ್ಷಣಗಳ ಹಿನ್ನೆಲೆಯಲ್ಲಿ 3,243 ಮಂದಿಯ ಮಾದರಿಗಳನ್ನು ಸಂಗ್ರಹಿಸಿದ್ದು 3,025 ಮಂದಿಯ ವರದಿ ನೆಗೆಟಿವ್‌ ಬಂದಿದೆ. ಸೋಂಕು ಖಚಿತಪಟ್ಟಪ್ರಕರಣಗಳ ಪೈಕಿ ಮೂರು ಮಂದಿ ಮೃತಪಟ್ಟಿದ್ದು, ಆರು ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.