ಬೆಂಗಳೂರು(ಮಾ.27): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿರುವ ನಿರ್ಬಂಧ ಮಾರಿ ನಗರವಾಸಿಗಳು ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದರೆ, ಹಳ್ಳಿಗಳಲ್ಲಿ ಮಾತ್ರ ಜನ ಜಾಗೃತರಾಗಿ ಸ್ವಯಂಪ್ರೇರಿತರಾಗಿ ಹೊರಗಿನವರಿಗೆ ನಿರ್ಬಂಧ ವಿಧಿಸುತ್ತಿದ್ದಾರೆ. ರಾಜ್ಯದ 110ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಬರುವ ರಸ್ತೆಗಳಿಗೆ ಬೇಲಿ, ತಡೆ ನಿರ್ಮಿಸುವ ಮೂಲಕ ಪರವೂರವರು ಪ್ರವೇಶಿಸದಂತೆ ತಡೆಯುತ್ತಿರುವ ಅನೇಕ ಘಟನೆಗಳು ವರದಿಯಾಗಿವೆ.

ಬಾಗಲಕೋಟೆ ಜಿಲ್ಲೆಯ ಮನ್ನಿಕಟ್ಟೆ ಗ್ರಾಮಸ್ಥರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳನ್ನು ಅಗೆದು ಮುಳ್ಳುಗಂಟಿ ಹಾಕಿದ್ದರೆ, ಗದಗ ಜಿಲ್ಲೆಯ ಹುನಗುಂಡಿ ಗ್ರಾಮಸ್ಥರು ಹುನಗುಂಡಿ ಗ್ರಾಮಸ್ಥರು ಪ್ರಮುಖ ರಸ್ತೆಯನ್ನೇ ಜೆಸಿಬಿ ಮೂಲಕ ಅಗೆದು ಸಂಪರ್ಕ ಕಡಿತಗೊಳಿಸಿದ್ದಾರೆ. ಕೋಟುಮಚಗಿ ಗ್ರಾಮಸ್ಥರು ರಸ್ತೆಗೆ ಬೇಲಿ, ಟ್ರ್ಯಾಕ್ಟರ್‌, ಚಕ್ಕಡಿಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ವಿಶೇಷ ನಿಗಾ ವಹಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಶ್ರೀಕಂಠಾಪುರ, ಪೂಜಾರಹಳ್ಳಿ ತಾಂಡ ಸೇರಿದಂತೆ 50ಕ್ಕೂ ಅಧಿಕ ಗ್ರಾಮಗಳಲ್ಲಿ, ಕೊಪ್ಪಳ ಜಿಲ್ಲೆಯ ಕುಣಕೇರಿ, ಹಾವೇರಿ ಜಿಲ್ಲೆಯ ಕರ್ಜಗಿ, ಚಳಗೇರಿ ಸೇರಿ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಯುವಕರು ಬೇಲಿ ಹಾಕಿ ಕಾವಲು ಕಾಯುತ್ತಿದ್ದಾರೆ.

ಭಯ ಹುಟ್ಟಿಸಿದ ಮಹಾಮಾರಿ ಕೊರೋನಾ: ಗ್ರಾಮವನ್ನೇ ತೊರೆದ ಏಳು ಕುಟುಂಬ​ಗಳು!

ರಾಯಚೂರು ಜಿಲ್ಲೆಯಲ್ಲಿ ಗುಂತಗೋಳ, ಸಿಂಧನೂರು ತಾಲೂಕಿನ ಎಲೆಕೂಡಗಿ ಗ್ರಾಮಸ್ಥರು ರಸ್ತೆಗೆ ಮುಳ್ಳು-ಕಲ್ಲು ಹಾಕಿ, ಟ್ರ್ಯಾಕ್ಟರ್‌ ಟ್ರಾಲಿ ಅಡ್ಡ ನಿಲ್ಲಿಸಿದ್ದಾರೆ. ಕಲಬುರಗಿ ಜಿಲ್ಲೆಯ ಹಾಗರಗುಂಡಿ, ಹಾವನೂರು, ಯಾದಗಿರಿ ಜಿಲ್ಲೆಯ ಯರಗೋಳ, ಕಂದಕೂರು, ಬೀದರ್‌ ಜಿಲ್ಲೆಯ ರಾಜಗೀರಾ ಸೇರಿ ಹತ್ತಾರು ಗ್ರಾಮಗಳಲ್ಲಿ ನಮ್ಮ ಊರಿಗೆ ಬರಬೇಡಿ ಫಲಕ ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ಮೇಲುಕೋಟೆ, ಚೀರನಹಳ್ಳಿಯಲ್ಲಿ ಗ್ರಾಮಗಳ ದ್ವಾರಗಳಲ್ಲೇ ಬ್ಯಾರಿಕೇಡ್‌, ಬೇಲಿಗಳನ್ನು ನಿರ್ಮಿಸಿ ತಡೆಯೊಡ್ಡಿದ್ದಾರೆ.

ಕೊರೋನಾ ಬರೋದಿಲ್ಲವೆಂದು ರಾತ್ರಿಯಿಡಿ ಚಹಾ ಕುಡಿದಿದ್ದೇ ಕುಡಿದಿದ್ದು!

ಮೈಸೂರು, ರಾಮನಗರ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯ ಅನೇಕ ಗ್ರಾಮಗಳಲ್ಲೂ ಮುಳ್ಳಿನಬೇಲಿ ಹಾಕಿ ನಿರ್ಬಂಧ ಹೇರಲಾಗಿದೆ. ಏತನ್ಮಧ್ಯೆ ನಗರ ವಲಯದಲ್ಲಿ ಬರುವ ಬೆಂಗಳೂರಿನ ಆನೇಕಲ್‌ ತಾಲೂಕಿನ ತಮ್ಮನಾಯಕನಹಳ್ಳಿ ಮತ್ತು ಚೂಡಹಳ್ಳಿ ಗ್ರಾಮಸ್ಥರು ರಸ್ತೆಗಳಿಗಡ್ಡವಾಗಿ ಮರಗಳನ್ನು ಹಾಕಿ ಬಂದ್‌ ಮಾಡಿದ್ದಾರೆ. ದಾವಣಗೆರೆ ನಗರದ ಆನಂದ ರೆಸಿಡೆನ್ಸಿ ಹೋಟೆಲ್‌ ಪಕ್ಕದ ಬಡಾವಣೆಗಳಲ್ಲೂ ಬೇಲಿ ಹಾಕಿದ್ದಾರೆ.