ಬಸವರಾಜ ನಂದಿಹಾಳ 

ಬಸವನಬಾಗೇವಾಡಿ(ಮಾ.27): ಡೆಡ್ಲಿ ಕೊರೋನಾ ವೈರಸ್‌ನಿಂದ ಪಾರಾ​ಗಲು ತಾಲೂ​ಕಿನ ಕುದರಿಸಾಲವಾಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಳಬಾಳ ಗ್ರಾಮ​ದ ಏಳು ಕುಟುಂಬ​ಗಳು ಊರೊ​ಳ​ಗಿನ ತಮ್ಮ​ ತಮ್ಮ ಮನೆ​ಗ​ಳನ್ನು ತೊರೆದು ಹೊಲ​ದಲ್ಲಿ ಟೆಂಟ್‌ ಹಾಕಿ​ಕೊಂಡು ವಾಸಿ​ಸುತ್ತಿದ್ದಾರೆ.

ಗುಳಬಾಳ ಗ್ರಾಮದ ಕರಿಯಪ್ಪ ಭೀಮಪ್ಪ ಮದರಕಿ (ಬಿರಾ​ದಾ​ರ), ಶರ​ಣಪ್ಪ ಮದ​ರಕಿ, ಬಸ​ವ​ರಾಜ ಮದ​ರ​ಕಿ, ಪರ​ಶು​ರಾಮ ಹಿಪ್ಪ​ರಗಿ, ಈಶ್ವ​ರಪ್ಪ ಹಿಪ್ಪ​ರಗಿ, ಅಪ್ಪಣ್ಣ  ಹಿಪ್ಪ​ರಗಿ, ಯಲ​ಗೂ​ರ​ದಪ್ಪ ಹಿಪ್ಪ​ರ​ಗಿ ಕುಟುಂಬ​ಗಳು ಹೊಲ​ದ​ಲ್ಲಿನ ಟೆಂಟ್‌​ನಲ್ಲಿ ವಾಸಿ​ಸು​ತ್ತಿವೆ. ಮೊದಲು ಮದ​ರಕಿ ಕುಟುಂಬ ಹೋಗಿವೆ. ಇದರ ಪ್ರೇರ​ಣೆ​ಯಾಗಿ ಹಿಪ್ಪ​ರಗಿ ಕುಟುಂಬ​ಗಳೂ ಹೋಗಿವೆ. ಕೊರೋನಾ ವೈರಸ್‌ನಿಂದ ಸಂರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಮದ​ರಕಿ ಕುಟುಂಬಗಳು ಕಳೆದೆರಡು ದಿನಗಳ ಹಿಂದೆ ಗ್ರಾಮದ ಮನೆಯನ್ನು ತೊರೆದು ತಮ್ಮ ಹೊಲದಲ್ಲಿ ಟೆಂಟ್‌ ಹಾಕಿಕೊಂಡು ವಾಸಿಸುತ್ತಿವೆ. ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಜೊತೆಗೆ ಒಂದು ಆಕಳು, ಎರಡು ಮೇಕೆ​ಗಳೂ ಇವೆ. 18 ಜನ ಮಕ್ಕಳು ಹೊಲದಲ್ಲಿ ಸ್ವಚ್ಛಂದವಾದ ವಾತಾ​ವ​ರ​ಣ​ದಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದಾರೆ.

ಕೊರೋನಾ ತಡೆಗೆ ಸರ್ಕಾರ ಮತ್ತೊಂದು ದಿಟ್ಟ ಕ್ರಮ: ಮಾಹಿತಿ ಕೊಟ್ರು ರಾಮುಲು

ಕೊರೋನಾ ವೈರಸ್‌ ಮಾರಕವಾಗಿದೆ. ಹಿಂದೆ ನಾನು ಹುಬ್ಬಳ್ಳಿಯ ಸಿದ್ದಾರೂಢ ಚರಿತ್ರೆಯಲ್ಲಿ ಮಾರಕ ರೋಗ ಕುರಿತು ಓದಿದ್ದೆ. ಇಂತಹ ಮಾರಕ ರೋಗದಿಂದ ನಾವು ರಕ್ಷಣೆ ಪಡೆದುಕೊಳ್ಳಬೇಕಾದರೆ ಸರ್ಕಾರದೊಂದಿಗೆ ಕೈಜೋಡಿಸಬೇಕಾದ ಅಗತ್ಯವಿದೆ. ಕೇವಲ ಸರ್ಕಾರ ಮಾಡಿದರೆ ಸಾಲದು ನಾವು ನಮ್ಮ ಮನೆ ತೊರೆದು ತಮ್ಮ ಹೊಲದಲ್ಲಿ ವಾಸ ಮಾಡಬೇಕೆಂಬ ಉದ್ದೇಶದಿಂದ ಜನರಿಂದ ದೂರವಾಗಿ ವಾಸ ಮಾಡುತ್ತಿದ್ದೇವೆ. ಇದರಿಂದಾಗಿ ಜನರ ಸಂಪರ್ಕ ಕಡಿಮೆಯಾಗಿ ಕೊರೋನಾ ವೈರಸ್‌ ಬರುವ ಸಾಧ್ಯತೆ ಇರುವುದಿಲ್ಲ. ಈಗಾಗಲೇ ನಮ್ಮ ಗ್ರಾಮದಲ್ಲಿ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುವ ಜನರು ಆಗಮಿಸಿದ್ದಾರೆ. ಇವರ ಕುರಿತು ನಾವು ಜಾಗೃತಿ ವಹಿಸಬೇಕಾದ ಅಗತ್ಯವಿದೆ. ನಮ್ಮನ್ನು ನೋಡಿ ಗ್ರಾಮದ ಅನೇಕ ಕುಟುಂಬಗಳು ತಮ್ಮ ಹೊಲದಲ್ಲಿ ವಾಸ ಮಾಡುತ್ತಿವೆ. ನಮ್ಮಂತೆ ಜನರು ಗ್ರಾಮ ತೊರೆದು ವಾಸ ಮಾಡಿದರೆ ಕೊರೋನಾ ವೈರಸ್‌ದಿಂದ ಸಂರಕ್ಷಣೆ ಮಾಡಿಕೊಳ್ಳಬಹುದು ಎಂದು ಕರಿಯಪ್ಪ ಭೀಮಪ್ಪ ಮದರಕಿ ಕನ್ನ​ಡ​ಪ್ರಭ ಪತ್ರಿಕೆಗೆ ಹೇಳಿದರು.