ಬೆಂಗಳೂರು(ಮಾ.31): ಲಾಕ್‌ಡೌನ್‌ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಗತ್ಯ ಸೇವೆ ಪೂರೈಸುವವರಿಗೆ ಇಲ್ಲಿ ತನಕ ಸುಮಾರು ಬೆಂಗಳೂರಿನ ಪೊಲೀಸರು ಅಂದಾಜು ಒಂದು ಲಕ್ಷದಷ್ಟುಪಾಸ್‌ಗಳನ್ನು ವಿತರಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೈ ಗೇಟ್‌ ಜಾಲತಾಣದ ಮೂಲಕ ಭಾನುವಾರದಿಂದ ಪಾಸ್‌ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಪಾಸ್‌ಗಳನ್ನು ತುರ್ತು ಸೇವಾ ಸಿಬ್ಬಂದಿ, ಔಷಧ, ತರಕಾರಿ, ಆಹಾರ ಪದಾರ್ಥಗಳ ವಿತರಕರು, ಅಗತ್ಯ ಸೇವೆಗಳ ಅಡಿ ಬರುವ ಸಂಸ್ಥೆಗಳು, ಕಂಪನಿಗಳ ಹೆಸರಿನಲ್ಲಿ ಉದ್ಯೋಗಿಗಳು, ನೌಕರರಿಗೆ ವಿತರಿಸಲಾಗುತ್ತಿದೆ. ವೈಯಕ್ತಿವಾಗಿ ಪಾಸ್‌ ಪಡೆದುಕೊಳ್ಳಲು ಯಾರಿಗೂ ಅವಕಾಶ ಇಲ್ಲ. ಅದರಂತೆ ನಗರದ ಎಲ್ಲ ಡಿಸಿಪಿ ಕಚೇರಿಯಲ್ಲಿ ಪಾಸ್‌ ವಿತರಿಸಲಾಗುತ್ತಿದೆ.

ಸರ್ಕಾರಿ ನೌಕರರು, ಶಾಸಕರ ವೇತನ ಅರ್ಧಕ್ಕರ್ಧ ಕತ್ತರಿ!

ಪಾಸ್‌ಗಾಗಿ ಬರುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಡಿಸಿಪಿ ಕಚೇರಿ ಎದುರು ಜನಸಂದಣಿ ಅಧಿಕವಾಗಿತ್ತು. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ ಮೂಲಕ ಪಾಸ್‌ ಪಡೆಯಲು ಅನುವು ಮಾಡಿಕೊಡಲಾಗಿದೆ. ಕಂಪನಿಗಳು ಮಾನವ ಸಂಪನ್ಮೂಲ ವಿಭಾಗದಿಂದ ಕಂಪ್ಯೂಟರ್‌ನಲ್ಲಿ ಅರ್ಜಿ ಸಲ್ಲಿಸಿ ಪಾಸ್‌ ಪಡೆಯಬಹುದು. ತರಕಾರಿ ಮತ್ತು ದಿನಸಿ ಅಂಗಡಿ ಅವರು ತಮ್ಮ ದಾಖಲೆ ತೋರಿಸಿ ಪಾಸ್‌ ಪಡೆದುಕೊಳ್ಳಬಹುದು. ಆದರೆ ತರಕಾರಿ ಅಂಗಡಿ ಮತ್ತು ದಿನಸಿ ಅಂಗಡಿಯವರು ನಾವು ಪಾಸ್‌ ಪಡೆಯಲು ಡಿಸಿಪಿ ಕಚೇರಿಗೆ ತೆರಳಲು ಕಷ್ಟ. ನಮಗೂ ವೈಯಕ್ತಿವಾಗಿ ಪಾಸ್‌ ಪಡೆಯಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಹಾಪ್‌ಕಾಮ್ಸ್‌ ತರಕಾರಿಗೆ ಭಾರೀ ಬೇಡಿಕೆ! 20 ಲಕ್ಷದ ವಹಿವಾಟು 40 ಲಕ್ಷಕ್ಕೆ ವೃದ್ಧಿ

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ವೈಯಕ್ತಿಕ ಪಾಸ್‌ ನೀಡಲು ಸಾಧ್ಯವಿಲ್ಲ. ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ತರಕಾರಿ, ದಿನಸಿ ಅಂಗಡಿ ಅವರನ್ನು ಪರಿಶೀಲಿಸಿ ಬಿಟ್ಟು ಕಳುಹಿಸುವಂತೆ ಆಯುಕ್ತರೇ ಸೂಚಿಸಿದ್ದಾರೆ. ಪಾಸ್‌ಗಳು ಸುಲಭವಾಗಿ ದೊರೆತರೆ ಜನತೆ ರಸ್ತೆಗೆ ಬರುತ್ತಾರೆ. ಅಗತ್ಯ ಸೇವೆಗಳ ಅಡಿಯಲ್ಲಿ ಬರುವ ಪ್ರತಿಯೊಬ್ಬರಿಗೂ ಪಾಸ್‌ ವಿತರಿಸಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.