ಮುಂಬೈ(ಮಾ.29): ಸಾಂಕ್ರಮಿಕ ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕೇರ್ಸ್‌ ಘೋಷಣೆ ಮಾಡಿದ ಬೆನ್ನಲ್ಲೇ, ಕೊರೋನಾ ವಿರುದ್ಧದ ಈ ಹೋರಾಟಕ್ಕಾಗಿ ನಟ ಅಕ್ಷಯ್‌ ಕುಮಾರ್‌ ಭರ್ಜರಿ 25 ಕೋಟಿ ರು. ದೇಣಿಗೆ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಟ್ವೀಟರ್‌ನಲ್ಲಿ ಮಾಹಿತಿ ನೀಡಿರುವ ಅಕ್ಷಯ್‌, ‘ಪ್ರಸ್ತುತ ಸಂದರ್ಭದಲ್ಲಿ ಜನರನ್ನು ರಕ್ಷಿಸಿಕೊಳ್ಳುವುದೇ ನಮ್ಮ ಬಹುಮುಖ್ಯ ಕಾರ್ಯವಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಪಿಎಂ-ಕೇರ್ಸ್‌ ನಿಧಿಗೆ 25 ಕೋಟಿ ರು. ದೇಣಿಗೆ ನೀಡುತ್ತೇನೆ’ ಎಂದು ಹೇಳಿದ್ದಾರೆ.

ಇನ್ನು ಈ ಬೆಳವಣಿಗೆ ಕುರಿತು ಅಕ್ಷಯ್‌ ಅವರ ಪತ್ನಿ ಟ್ವಿಂಕಲ್‌ ಖನ್ನಾ, ‘ಈ ಮನುಷ್ಯ ನನ್ನನ್ನು ಹೆಮ್ಮೆಪಡಿಸುತ್ತಾನೆ. ಇಷ್ಟು ದೊಡ್ಡ ಪ್ರಮಾಣದ ಹಣ ದೇಣಿಗೆ ನೀಡುವುದು ಔಚಿತ್ಯವೇ ಎಂದು ನಾನು ಕೇಳಿದೆ. ಈ ವೇಳೆ, ನಾನು ಜೀವನ ಆರಂಭಿಸುವಾಗ ನನ್ನಲ್ಲಿ ಏನೂ ಇರಲಿಲ್ಲ. ಇದೀಗ ಈ ಹಂತಕ್ಕೆ ಬೆಳೆದಿದ್ದೇನೆ. ಇದನ್ನು ನಾನೊಬ್ಬನೇ ಇಟ್ಟುಕೊಳ್ಳುವುದು ಹೇಗೆ? ಇದಕ್ಕಾಗಿ ಏನೂ ಇಲ್ಲದವರಿಗೆ ನನ್ನಿಂದಾಗುವ ಸಹಾಯ ಮಾಡುತ್ತೇನೆ ಎಂದರು’ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.