ಮುಂಬೈ(ಮಾ.31): ಭಾರತದಲ್ಲಿ 21 ದಿನಗಳ ಲಾಕ್‌ಡೌನ್ ಹೇರಲಾಗಿದೆ. ಹೀಗಿದ್ದರೂ ಅನೇಕ ಮಂದಿ ಇದನ್ನು ಗಂಭೀರವಾಗಿ ಪರಿಗಣಿಸದೆ ಸುತ್ತಾಟ ಮುಂದುವರೆಸಿದ್ದಾರೆ. ಸರ್ಕಾರ ಹೀಗೆ ಅನಗತ್ಯವಾಗಿ ಹೊರಗೆ ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಅದೇಶ ನೀಡಿದೆ. ಹೀಗಿರುವಾಗ ಪೊಲೀಸರು ಕೂಡಾ ಸಾರ್ವಜನಿಕರಿಗೆ ಬುದ್ಧಿ ಕಲಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಲಾಕ್‌ಡೌನ್ ಉಲ್ಲಂಘಿಸುವವರಿಗೆ ಚಿತ್ರ ವಿಚಿತ್ರ ಕ್ರಮ ಕೈಗೊಳ್ಳುತ್ತಿದೆ. ಆರಂಭದಲ್ಲಿ ಲಾಠಿ ಚಾರ್ಜ್ ಪ್ರಯೋಗಿಸಿದ್ದ ಪೊಲೀಸರು ದಿನಗಳೆದಂತೆ ವವಿಭಿನ್ನ ಪ್ರಯೋಗಗಳಿಗೆ ಮುಂದಾಗಿದ್ದಾರೆ. ಸದ್ಯ ಇಂತ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ ಲಾಕ್‌ಡೌನ್ ವೇಳೆ ಮಾಸ್ಕ್ ಕೂಡಾ ಧರಿಸದೆ ಸುತ್ತಾಡಲು ಹೊರಟವರನ್ನು ನಡುರಸ್ತೆಯಲ್ಲೇ ನಿಲ್ಲಿಸಿದ ಪೊಲೀಸರು ಆರತಿ ಎತ್ತಿರುವ ದೃಶ್ಯಗಳಿವೆ. ಪೊಲೀಸರು ಆರತಿ ಎತ್ತುವಾಗ ಯುವಕರು ನಾಚಿಕೆಯಿಂದ ಮುಖ ಮುಚ್ಚಿಕೊಂಡಿದ್ದಾರೆ. ಪೊಲೀಸರ ಈ ವಿನೂತನ ಪ್ರಯೋಗ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿಇದೆ. 

ಈ ವಿಡಿಯೋವನ್ನು ಸಪ್ನಾ ಮದನ್ ಹೆಸರಿನ ಅಕೌಂಟ್‌ನಿಂದ ಶೇರ್ ಮಾಡಲಾಗಿದ್ದು, ಭಾರೀ ವೈರಲ್ ಆಗಿದೆ. ಇನ್ನು ಬೆಂಗಳೂರಿನಲ್ಲೂ ಇಂತಹ ವಿನೂತನ ಪ್ರಯೋಗ ನಡೆಸಿದ್ದು, ರಸ್ತೆಗಿಳಿದವರಿಗೆ ಬಸ್ಕಿ ಹೊಡೆಸಿದ್ದು ಹಾಗೂ ಹಣೆಗೆ ಸೀಲ್ ಹಾಕಿದ್ದು ಅನೇಕರ ಗಮನ ಸೆಳೆದಿತ್ತು. ಅತ್ತ ತಮಿಳುನಾಡು ಪೊಲಿಸರು ಕೊರೋನಾ ವೈರಸ್ ಹೆಲ್ಮೆಟ್ ಧರಿಸಿ ಜನರನ್ನು ಎಚ್ಚರಿಸುವ ಕಾರ್ಯಕ್ಕಿಳಿದಿದ್ದರು. 

ಇನ್ನು ಭಾರತದಲ್ಲಿ ಕೊರೋನಾ ತಾಂಡವ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ಒಂದು ಸಾವಿರ ಗಡಿ ದಾಟಿದೆ. ಅಲ್ಲದೇ 29 ಮಂದಿ ಈ ಮಾರಕ ವೈರಸ್‌ಗೆ ಬಲಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಸರ್ಕಾರ ಹೇರಿರುವ ಲಾಕ್‌ಡೌನ್ ಗಂಭೀರವಾಗಿ ಪರಿಗಣಿಸದ ಅನೇಕ ಮಂದಿ ಮನೆಯಿಂದ ಹೊರ ಬಂದು ಮೂರ್ಖತನ ಪ್ರದರ್ಶಿಸುತ್ತಿದ್ದಾರೆ.