ಪ್ರಧಾನಿ ನರೇಂದ್ರ ಮೋದಿ ದೇವೇಗೌಡರಿಗೆ ಪೋನ್ ಮಾಡಿದ್ದ ರಹಸ್ಯ ಬಹಿರಂಗ!
ದೀಪ ಬೆಳಗಿದ್ದರ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಾತು/ ಪ್ರಧಾನಿ ಮಾತಿಗೆ ಬೆಲೆ ನೀಡುವುದು ನಮ್ಮ ಕರ್ತವ್ಯ/ ಕಿಟ್ ಮತ್ತು ವೆಂಟಿಲೇಟರ್ ಗಳ ಕೊರತೆ ಇದೆ/ ಬಿಜೆಪಿ ಕಾರ್ಯಕರ್ತರಿಗೆ ನಡ್ಢಾ ನೀಡಿರುವ ಕರೆ ನಮಗೆ ಸಂಬಂಧ ಇಲ್ಲ
ಬೆಂಗಳೂರು( ಏ. 05) ಕೋವಿಡ್ 19 ಸುಮಾರು ಇನ್ನೂರು ದೇಶಗಳಲ್ಲಿ ಇದೆ. ಅತ್ಯಂತ ಕೆಟ್ಟ ವೈರಸ್ ಕಾರಣಕ್ಕೆ 60 ಸಾವಿರಕ್ಕೂ ಹೆಚ್ಚು ಜನರ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ನಿಖರ ಔಷಧ ಕಂಡುಹಿಡಿಯಲು ಸಾಧ್ಯವಾಗಲ್ಲ. ಕೆಲವು ಕಡೆ ಸಂಬಂಧಿಸಿದ ಕಿಟ್, ವೆಂಟಿಲೇಟರ್‌ಗಳ ಕೊರತೆ ಇದೆ. ಬಸ್‌ಗಳಲ್ಲಿ ವಾರ್ಡ್ ಮಾಡಿ ರೋಗಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೇರಳದಲ್ಲಿ ಒಂದೇ ಸಾವು ಬಿಟ್ಟರೆ ಹೆಚ್ಚು ಅನಾಹುತ ಆಗಿಲ್ಲ. ಅವರು ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ನಾನು ಸಮಸ್ಯೆಗಳನ್ನು ಕಂಡು ಹಿಡಿದು ದೂಷಿಸಲ್ಲ, ಆದರೆ ವಾಸ್ತವ ಹೇಳುತ್ತೇನೆ. ಪ್ರಧಾನಿ ಮಾತಿಗೆ ನಾವೆಲ್ಲ ಗೌರವ ಕೊಟ್ಟಿದ್ದೇವೆ. ಚಪ್ಪಾಳೆ ಹೊಡೆದು, ದೀಪ ಹಚ್ಚಲು ನಾವೆಲ್ಲ ಒಪ್ಪಿಗೆ ಕೊಟ್ಟಿದ್ದೇವೆ. ನಾನು ಲಾಕ್‌ಡೌನ್ ಬಳಿಕ ಇವತ್ತೇ ಕಚೇರಿಗೆ ಬಂದಿದ್ದೇನೆ. ಪಕ್ಷದ ಕಾರ್ಯಕರ್ತರು ಬರ್ತಾರೆ, ಅದಕ್ಕಾಗಿ ಕಚೇರಿ ಮುಚ್ಚಲಾಗಿತ್ತು. ನಿನ್ನೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಚೇರಿಗಳಲ್ಲಿ ಜಗಜೀವನ್ ರಾಮ್ ದಿನಾಚರಣೆ ಮಾಡಿದ್ದರು. ನಾವು ಇವತ್ತು ಕಚೇರಿಯಲ್ಲಿ ಆಚರಿಸುತ್ತಿದ್ದೇವೆ.
ಕತ್ತಲೆಯಿಂದ ಬೆಳಕಿನ ಕಡೆಗೆ: ಕತ್ತಲೆಯಿಂದ ಬೆಳಕಿನ ಕಡೆಗೆ ಹೋಗುವುದರಿಂದ ಹೆಮ್ಮಾರಿಯನ್ನು ಹೊರಗೆ ಕಳಿಸಲು ಸಾಧ್ಯ ಎಂದು ಟಿವಿಗಳಲ್ಲಿ ಹೇಳುತ್ತಿದ್ದರು. ಯಾವುದೋ ಹಿನ್ನೆಲೆ, ನಂಬಿಕೆ ಇರಬಹುದು. ಇಡೀ ರಾಷ್ಟ್ರದ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ಮಾತಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ ಎಂದು ಗೌಡರು ಹೇಳಿದ್ದಾರೆ.
ಕೊರೋನಾ ವೈರಸ್ ನಡುವೆ ಒಂದು ಸಂತಸದ ಸುದ್ದಿ
ಬಿಜೆಪಿ ಅಧ್ಯಕ್ಷರ ಕರೆ ನಮಗೆ ಸಂಬಂಧ ಇಲ್ಲ: ನನಗೆ ನಿನ್ನೆ ಮಧ್ಯಾಹ್ನ ಮೋದಿ ಫೋನ್ ಮಾಡಿದ್ದರು. ನಿಮ್ಮ ಸಹಕಾರ ಬೇಕು ಎಂದು ಮೋದಿ ಕೇಳಿದರು. ನಾನು ಬೆಂಬಲಿಸುತ್ತೇನೆ ಎಂದಿದ್ದೆ, ಬೆಂಬಲಿಸಿದ್ದೇನೆ. ನಾವು ಪ್ರಧಾನಿ ಹೇಳಿದ್ದೆಲ್ಲ ಕೇಳಿದ್ದೇವೆ. ಆದರೆ ಇವತ್ತು ಬಿಜೆಪಿ ಅಧ್ಯಕ್ಷರು ಅವರ ಕಾರ್ಯಕರ್ತರಿಗೆ ಒಪ್ಪತ್ತಿನ ಉಪವಾಸಕ್ಕೆ ಕರೆ ನೀಡಿದ್ದಾರೆ. ಪ್ರಧಾನಿ ಮೋದಿ ಕೂಡ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಹಿಂದೆ ಲಾಲ್‌ಬಹದ್ದೂರ್ ಶಾಸ್ತ್ರಿ ಇಡೀ ದೇಶಕ್ಕೆ ಕರೆ ನೀಡಿದ್ದರು. ಇಲ್ಲಿಯವರೆಗೆ ಪ್ರಧಾನಿ ನಡೆದುಕೊಂಡಿದ್ದಕ್ಕೆ, ಇವತ್ತು ನಡೆದುಕೊಂಡಿದ್ದು ಎರಡು ಮುಖವಾಗಿ ಕಾಣಿಸ್ತಿದೆ. ಕೇವಲ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಕರೆ ನೀಡಿದ್ದಾರೆ ಎಂದು ದೇವೇಗೌಡ ಹೇಳಿದ್ದಾರೆ.
ಶಾಸ್ತ್ರಿ ಕರೆ ನೀಡಿದ್ದರು: ಪಾಕಿಸ್ತಾನ ಯುದ್ಧ ಸಮಯದಲ್ಲಿ ಲಾಲ್‌ಬಹದ್ದೂರ್ ಶಾಸ್ತ್ರಿ ಇಡೀ ದೇಶಕ್ಕೆ ಕರೆ ನೀಡಿದ್ದರು. ಇದು ಅದಕ್ಕಿಂತಲೂ ಘೋರಯುದ್ಧ ಎಂಬಂತಿದೆ. ಆದ್ರೆ ಈಗ ಮಾತ್ರ ತಮ್ಮ ಕಾರ್ಯಕರ್ತರಿಗೆ ಮಾತ್ರ ಕರೆ ಕೊಟ್ಟಿದ್ದಾರೆ. ಜೆ.ಪಿ.ನಡ್ಡಾ ಹೇಳಿದ್ದಕ್ಕೂ ನನಗೂ ಸಂಬಂಧವಿಲ್ಲ. ಆದರೆ ಪ್ರಧಾನಿ ಹೇಳಿರುವುದು ಬೇಸರ ಮೂಡಿಸಿದೆ. ದೆಹಲಿ ನಮಾಜಿನಲ್ಲಿ ಅನೇಕರು ಭಾಗವಹಿಸಿದ್ದರು. ಹೀಗಾಗಿ ಕೊರೊನಾ ಹರಡಲು ಕಾರಣವಾಯ್ತು ಎನ್ನುತ್ತಿದ್ದಾರೆ. ದೆಹಲಿಗೆ ನಮಾಜ್ ಕಾರಣ ಎಂದರೆ ಮಹಾರಾಷ್ಟ್ರಕ್ಕೆ ಏನು ಕಾರಣ? ಎಂದು ಪ್ರಶ್ನೆ ಮಾಡಿದರು.
ಕೊರೋನಾ ವಿಚಾರದಲ್ಲಿ ಕರ್ನಾಟಕವೇ ಬೆಸ್ಟ್
ಅಮೆರಿಕದ ಆತಂಕ: ಟ್ರಂಪ್ ಕೂಡ ಇನ್ನೆರಡು ವಾರಗಳಲ್ಲಿ ದುಪ್ಪಟ್ಟಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ಒಂದು ಸಮುದಾಯವನ್ನು ಗುರಿಯಾಗಿಸುವುದು ಬೇಡ. ನಮ್ಮಲ್ಲಿ ಬೇಕಾದ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದೇವೆ. ಮೆಡಿಕಲ್ ಕಿಟ್, ಔಷಧಿ ತರಿಸಿದ್ದಾರೆ. ಕೊರೊನಾ ಶಂಕಿತರಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಆದರೆ ಇನ್ನಷ್ಟು ಎಚ್ಚರಿಕೆ ಅಗತ್ಯ. ಮೂರನೇ ಹಂತ, ನಾಲ್ಕನೇ ಹಂತ ಎನ್ನುತ್ತಿದ್ದಾರೆ. ಕಡಿಮೆಯಾದ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ ಮುಂದೆ ಏನಾಗುತ್ತದೆ ಕಾದು ನೋಡಬೇಕಿದೆ ಎಂದು ದೇವೇಗೌಡ ಹೇಳಿದ್ದಾರೆ.