ಐಪಿಎಲ್‌ ಫೈನಲ್‌ಗಿಂತಲೂ ಹೆಚ್ಚಿನ ವೀಕ್ಷಕರ ಸೆಳೆದ ಮೋದಿ ಭಾಷಣ!| ಲಾಕ್‌ಡೌನ್‌ ಭಾಷಣ 20 ಕೋಟಿ ಜನರಿಂದ ವೀಕ್ಷಣೆ!| ಐಪಿಎಲ್‌ ಫೈನಲ್‌ ವೀಕ್ಷಿಸಿದ್ದು 13 ಕೋಟಿ ಪ್ರೇಮಿಗಳು

ನವದೆಹಲಿ(ಮಾ.೨೮): ಕೊರೋನಾ ವ್ಯಾಪಿಸುವುದನ್ನು ತಡೆಗಾಗಿ 21 ದಿನಗಳ ಕಾಲ ದೇಶವನ್ನೇ ಲಾಕ್‌ಡೌನ್‌ ಮಾಡುವುದಾಗಿ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ದೇಶವನ್ನುದ್ದೇಶಿಸಿ ಭಾಷಣವನ್ನು ಭಾರೀ ಸಂಖ್ಯೆ ಜನ ವೀಕ್ಷಿಸಿದ್ದಾರೆ ಎಂಬುದು ಬಾರ್ಕ್ ರೇಟಿಂಗ್‌ನಿಂದ ಗೊತ್ತಾಗಿದೆ.

ಕೊರೋನಾ ಕುರಿತಾಗಿ ಮಾ.24ರ ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಟೀವಿ ಕಾರ್ಯಕ್ರಮವು ದೇಶದ 201 ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಈ ಮೂಲಕ ವಿಶ್ವಾದ್ಯಂತ ಜನಪ್ರಿಯವಾದ ಐಪಿಎಲ್‌ನ ಫೈನಲ್‌ ಪಂದ್ಯಾವಳಿಗಿಂತಲೂ ಹೆಚ್ಚು ಮೋದಿ ಲಾಕ್‌ಡೌನ್‌ ಕಾರ್ಯಕ್ರಮವನ್ನೇ ಹೆಚ್ಚು ಮಂದಿ ವೀಕ್ಷಿಸಿದಂತಾಗಿದೆ.

ವಿಶ್ವಾದ್ಯಂತ ಪ್ರಸಾರವಾಗುವ ಐಪಿಎಲ್‌ನ ಫೈನಲ್‌ ಪಂದ್ಯಾವಳಿಯ ಒಟ್ಟಾರೆ ವೀವರ್‌ಶಿಪ್‌(ನೋಡುಗರ ಸಂಖ್ಯೆ) 13.3 ಕೋಟಿ ಇದ್ದರೆ, ದೇಶ ಲಾಕ್‌ಡೌನ್‌ ಮಾಡುವ ಮೋದಿ ಅವರ ಭಾಷಣವನ್ನು 19.7 ಕೋಟಿ ಜನ ವೀಕ್ಷಿಸಿದ್ದಾರೆ. ಇನ್ನು ಮಾ.19ರಂದು ಜನತಾ ಕಫä್ರ್ಯಗೆ ಕರೆ ನೀಡಿದ್ದ ಮೋದಿ ಅವರ ಭಾಷಣವನ್ನು 8.30 ಕೋಟಿ ಮಂದಿ ವೀಕ್ಷಿಸಿದ್ದರು.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಮೋದಿ ಭಾಷಣ 6.5 ಕೋಟಿ ಜನ ಹಾಗೂ 2016ರಲ್ಲಿ ನೋಟು ಅಪನಗದೀಕರಣಗೊಳಿಸಿದ ಮೋದಿ ಭಾಷಣವನ್ನು ಟೀವಿ ವಾಹಿನಿಗಳಲ್ಲಿ 5.7 ಕೋಟಿ ವೀಕ್ಷಕರು ವೀಕ್ಷಿಸಿದ್ದರು ಎಂದು ಬಾರ್ಕ್ ಹೇಳಿದೆ.

ಮೋದಿ ಟಾಪ್‌ 4 ಭಾಷಣ

19.7 ಕೋಟಿ: ಲಾಕ್‌ಡೌನ್‌

8.30 ಕೋಟಿ: ಜನತಾ ಕರ್ಫ್ಯೂ

6.5 ಕೋಟಿ: 370ನೇ ವಿಧಿ ರದ್ದು

5.70 ಕೋಟಿ: ಅಪನಗದೀಕರಣ