ಬೆಂಗಳೂರು ದಾಳಿಗೆ ಸಂಚು: 9 ಅಲ್‌ಖೈದಾ ಉಗ್ರರ ಬಂಧನ!

ಬೆಂಗ್ಳೂರು ದಾಳಿಗೆ ಸಂಚು: 9 ಅಲ್‌ಖೈದಾ ಉಗ್ರರ ಬಂಧನ|  ಕೇರಳ, ಪಶ್ಚಿಮ ಬಂಗಾಳದಲ್ಲಿ ಎನ್‌ಐಎ ಬಲೆಗೆ| ದಿಲ್ಲಿ, ಕೇರಳ ಬಿಹಾರದಲ್ಲೂ ಸ್ಫೋಟಕ್ಕೆ ಸಂಚು| ಶಸ್ತ್ರಾಸ್ತ್ರ, ಸ್ವಿಚ್‌, ಬ್ಯಾಟರಿ, ಜಿಹಾದಿ ಸಾಹಿತ್ಯ ವಶಕ್ಕೆ

Plan To Attack In Bengaluru NIA held nine men Of Al Qaeda pod

ಕೋಲ್ಕತಾ(ಸೆ.20): ಬೆಂಗಳೂರು, ದೆಹಲಿ, ಕೇರಳ ಸೇರಿದಂತೆ ದೇಶದ ಆಯಕಟ್ಟಿನ ಸ್ಥಳಗಳಲ್ಲಿ ದಾಳಿ ನಡೆಸಿ, ಅಮಾಯಕರನ್ನು ಕೊಲ್ಲುವ ಮೂಲಕ ತನ್ನ ಅಸ್ತಿತ್ವ ನಿರೂಪಿಸಲು ಪ್ರಯತ್ನಿಸುತ್ತಿದ್ದ ಜಾಗತಿಕ ಭಯೋತ್ಪಾದಕ ಸಂಘಟನೆ ಅಲ್‌ಖೈದಾಕ್ಕೆ ಭಾರತೀಯ ತನಿಖಾ ಸಂಸ್ಥೆಗಳು ಭರ್ಜರಿ ಹೊಡೆತ ಕೊಟ್ಟಿವೆ. ಪಾಕಿಸ್ತಾನದಲ್ಲಿರುವ ತಮ್ಮ ರೂವಾರಿಗಳ ಸೂಚನೆ ಮೇರೆಗೆ ದಾಳಿಗೆ ಸಿದ್ಧತೆಯಲ್ಲಿ ತೊಡಗಿದ್ದ ಅಲ್‌ಖೈದಾ ಸಂಘಟನೆಗೆ ಸೇರಿದ 9 ಮಂದಿಯನ್ನು ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ಇದರೊಂದಿಗೆ ಐಟಿ ಸಿಟಿ ಬೆಂಗಳೂರು ಸೇರಿದಂತೆ ದೇಶದಲ್ಲಿ ನಡೆಯಲಿದ್ದ ಬೃಹತ್‌ ಪ್ರಮಾಣದ ವಿಧ್ವಂಸಕ ಕೃತ್ಯವೊಂದು ತಪ್ಪಿದಂತಾಗಿದೆ.

ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯ ಪೊಲೀಸರ ಜತೆ ಸಮನ್ವಯ ಸಾಧಿಸಿದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈ ಕಾರ್ಯಾಚರಣೆ ನಡೆಸಿದೆ. ಭಾರತದಲ್ಲಿರುವ ಈ 9 ಮಂದಿಗೆ ಪಾಕಿಸ್ತಾನದಿಂದ ಸೂಚನೆ ಬರುತ್ತಿರುವ ಬಗ್ಗೆ ಕೇಂದ್ರೀಯ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ ಮೇರೆಗೆ ಈ ದಾಳಿಯನ್ನು ನಡೆಸಲಾಗಿದೆ. ಮುರ್ಷಿದ್‌ ಹಸನ್‌, ಇಯಾಕುಬ್‌ ಬಿಸ್ವಾಸ್‌, ಮೊಸರಫ್‌ ಹೊಸೇನ್‌ ಎಂಬುವರನ್ನು ಕೇರಳದಿಂದ ಹಾಗೂ ನಜ್ಮಸ್‌ ಸಾಕಿಬ್‌, ಅಬು ಸೂಫಿಯಾನ್‌, ಮೈನುಲ್‌ ಮೊಂಡಲ್‌, ಲಿಯು ಹೀನ್‌ ಅಹಮದ್‌, ಅಲ್‌ ಮಾಮುನ್‌ ಕಮಲ್‌ ಮತ್ತು ಅತಿತುರ್‌ ರೆಹಮಾನ್‌ ಎಂಬುವರನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಿಂದ ಬಂಧಿಸಲಾಗಿದೆ. ಕೇರಳದಲ್ಲಿ ಸೆರೆ ಸಿಕ್ಕವರು ಕೂಡ ಬಂಗಾಳ ಮೂಲದವರೇ ಆಗಿದ್ದಾರೆ. ಬಂಗಾಳದಲ್ಲಿ ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ಸೆ.24ರವರೆಗೂ ಎನ್‌ಐಎ ವಶಕ್ಕೆ ಒಪ್ಪಿಸಲಾಗಿದೆ. 9 ಮಂದಿಯನ್ನು ಬಂಧಿಸಲು ಸೆ.11ರಿಂದಲೇ ಎನ್‌ಐಎ ಹಾಗೂ ಇನ್ನಿತರೆ ಕೇಂದ್ರೀಯ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ಆರಂಭಿಸಿದ್ದವು. ಸೆ.11ರಂದು ಎನ್‌ಎಐ ಈ ಕುರಿತಂತೆ ಪ್ರಕರಣವನ್ನೂ ದಾಖಲಿಸಿತ್ತು.

ಸ್ಫೋಟಕ ವಶ:

ಪಟಾಕಿಯಲ್ಲಿರುವ ಪೊಟಾಶಿಯಂ ಬಳಸಿ ಸುಧಾರಿತ ಸ್ಪೋಟಕ (ಐಇಡಿ) ತಯಾರಿಸಲು ಈ ಉಗ್ರರು ಸಿದ್ಧರಾಗಿದ್ದರು. ಬಂಧಿತರಿಂದ ಸ್ವಿಚ್‌, ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ಡಿಜಿಟಲ್‌ ಉಪಕರಣಗಳು, ದಾಖಲೆಗಳು, ಜಿಹಾದಿ ಸಾಹಿತ್ಯ, ಹರಿತವಾದ ಶಸ್ತಾ್ರಸ್ತ್ರ, ನಾಡ ಬಂದೂಕು, ದೇಶೀಯ ರಕ್ಷಾ ಕವಚ, ಮನೆಯಲ್ಲೇ ಕುಳಿತು ಸ್ಪೋಟಕ ತಯಾರಿಸುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ದೇಣಿಗೆ ಸಂಗ್ರಹ:

ಬಂಧಿತರು ಸ್ಥಳೀಯವಾಗಿ ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದರು. ಜೊತೆಗೆ ಪಾಕಿಸ್ತಾನದಲ್ಲಿರುವ ಅಲ್‌ಖೈದಾ ಉಗ್ರರು ಶೀಘ್ರವೇ ಇವರಿಗೆ ಶಸ್ತ್ರಾಸ್ತ್ರ ಪೂರೈಸುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಕೆಲವು ಸದಸ್ಯರು ಶಸ್ತಾ್ರಸ್ತ್ರ, ಸ್ಪೋಟಕ ಖರೀದಿಗಾಗಿ ದೆಹಲಿಗೆ ತೆರಳುವ ಚಿಂತನೆಯಲ್ಲಿದ್ದರು ಎಂದು ತಿಳಿದುಬಂದಿದೆ.

ಆನ್‌ಲೈನ್‌ನಲ್ಲಿ ಪಾಕ್‌ನಿಂದ ಬ್ರೈನ್‌ವಾಶ್‌

ಬಂಧಿತ ವ್ಯಕ್ತಿಗಳನ್ನು ಪಾಕಿಸ್ತಾನದ ಅಲ್‌ಖೈದಾ ಸಂಘಟನೆಯು, ಸಾಮಾಜಿಕ ಜಾಲತಾಣ ಬಳಸಿ ಮೂಲಭೂತವಾದಿಗಳನ್ನಾಗಿ ಪರಿವರ್ತನೆ ಮಾಡಿತ್ತು. ಬೆಂಗಳೂರು, ದೆಹಲಿ, ಕೇರಳದ ಹಲವು ಸ್ಥಳಗಳ ಮೇಲೆ ದಾಳಿ ನಡೆಸಲು ಇವರನ್ನು ಪ್ರೇರೇಪಿಸಲಾಗಿತ್ತು. ಕೆಲ ಸಮಯದ ಹಿಂದೆಯೇ ದೇಶಾದ್ಯಂತ ದಾಳಿಗೆ ಉದ್ದೇಶಿಸಲಾಗಿತ್ತು. ಆದರೆ ಲಾಕ್ಡೌನ್‌ನಿಂದಾಗಿ ದಾಳಿಯನ್ನು ಮುಂದೂಡಲಾಗಿತ್ತು ಇದಲ್ಲದೆ ಮುಂಬರುವ ಬಿಹಾರ ಚುನಾವಣೆ ವೇಳೆಯೂ ವಿಧ್ವಂಸಕ ಕೃತ್ಯದ ಉದ್ದೇಶ ಉಗ್ರರಿಗಿತ್ತು. ಈ ಬಂಧನ ಕಾರ್ಯಾಚರಣೆಯೊಂದಿಗೆ ಬೃಹತ್‌ ದಾಳಿ ಸಂಚು ವಿಫಲವಾಗಿದೆ.

Latest Videos
Follow Us:
Download App:
  • android
  • ios